ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ದಂಪತಿಯ ಕಿರಿಪುತ್ರ ಅನಂತ್ ಅಂಬಾನಿ ಮದುವೆ ಬಹಳ ಅದ್ಧೂರಿಯಾಗಿ ಜರುಗಿದೆ. ಶುಕ್ರವಾರದಂದು ಮುಂಬೈನಲ್ಲಿ ತಮ್ಮ ಬಹುಕಾಲದ ಗೆಳತಿ ರಾಧಿಕಾ ಮರ್ಚೆಂಟ್ ಜೊತೆ ಅನಂತ್ ಸಪ್ತಪದಿ ತುಳಿದಿದ್ದಾರೆ. ಶನಿವಾರ ಸಂಜೆ ಮುಂಬೈನ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ 'ಶುಭ ಆಶೀರ್ವಾದ' ಸಮಾರಂಭ ನಡೆದಿದ್ದು, ಇಂದು ಕೂಡ ಮತ್ತೊಂದು ಪ್ರಮುಖ ಕಾರ್ಯಕ್ರಮ ಜರುಗಲಿದೆ. ಸೋಷಿಯಲ್ ಮೀಡಿಯಾದಲ್ಲೀಗ ಅಂಬಾನಿ ಆರ್ಥಿಕತೆಯದ್ದೇ ಸದ್ದು.
ಕಳೆದ ಕೆಲ ದಿನಗಳಿಂದ ಮದುವೆಗೆ ಸಂಬಂಧಿಸಿದ ಫೋಟೋ-ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಮದುವೆಯ ಅದ್ಧೂರಿತನ, ಖರ್ಚು ವೆಚ್ಚ, ಆಗಮಿಸಿದ ಗಣ್ಯರ ಪಟ್ಟಿ ಕಂಡು ನೆಟ್ಟಿಗರ ತಲೆ ತಿರುಗಿದೆ. ಇದು ವಿಶ್ವದಲ್ಲೇ ನಡೆದ ಅದ್ಧೂರಿ ಮದುವೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಖರ್ಚು-ವೆಚ್ಚಗಳ ಬಗ್ಗೆ ಚರ್ಚೆ ನಡೆಯುತ್ತಿದೆ.
ಮುಂಬೈನ ಬಾಂದ್ರಾದಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಈ ಅದ್ಧೂರಿ ವಿವಾಹ ಮಹೋತ್ಸವಕ್ಕೆ ವೇದಿಕೆಯಾಗಿತ್ತು. ಪ್ರಮುಖವಾಗಿ ಬಾಲಿವುಡ್ ಸೇರಿದಂತೆ ವಿವಿಧ ಕ್ಷೇತ್ರಗಳ ಸೆಲೆಬ್ರಿಟಿಗಳು, ಗಣ್ಯರು ಭಾಗವಹಿಸಿದ್ದರು. ಅನಂತ್ ಅಂಬಾನಿ ತಮ್ಮ ಮದುವೆಗೆ ಬಂದಿದ್ದ ಸ್ನೇಹಿತರಿಗೆ ದುಬಾರಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ: ಅಂಬಾನಿ ಪುತ್ರನ ಮದುವೆಯಲ್ಲಿ ಗಣ್ಯರು: ಅನಂತ್-ರಾಧಿಕಾ ದಂಪತಿಗೆ ಆಶೀರ್ವದಿಸಿದ ಪ್ರಧಾನಿ ಮೋದಿ - PM Modi in Ambani Program
ಒಂದು ಹೆಸರಾಂತ ಬ್ರ್ಯಾಂಡ್ಗೆ ಸೇರಿದ ಈ ವಾಚ್‌ನ ಬೆಲೆ ಸುಮಾರು 1.5 ರಿಂದ 2 ಕೋಟಿ ರೂಪಾಯಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್, ರಣ್ವೀರ್ ಸಿಂಗ್ ಈ ವಾಚ್‌ಗಳನ್ನು ಧರಿಸಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಯಾರೆಲ್ಲಾ ಈ ವಾಚ್ ಉಡುಗೊರೆಯಾಗಿ ಪಡೆದುಕೊಂಡಿದ್ದಾರೆಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಈ ಮದುವೆಗೆ ಬರೋಬ್ಬರಿ 5 ಸಾವಿರ ಕೋಟಿ ರೂ. ಖರ್ಚಾಗಿದೆ ಎಂಬ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಎಲ್ಲದಕ್ಕೂ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಅನಂತ್ ರಾಧಿಕಾ ಶುಕ್ರವಾರ (ಜುಲೈ 12)ರಂದು ಸಪ್ತಪದಿ ತುಳಿದಿದ್ದಾರೆ. ಜೂನ್ 29ರಂದೇ ಕಾರ್ಯಕ್ರಮಗಳು ಶುರುವಾಗಿದ್ದವು. ಕಳೆದ ದಿನ (ಜುಲೈ 13) 'ಶುಭ್ ಆಶೀರ್ವಾದ್' ಸಮಾರಂಭ ಜರುಗಿದ್ದು, ಇಂದು 'ಮಂಗಲ್ ಉತ್ಸವ' ಅಥವಾ ಮದುವೆಯ ಆರತಕ್ಷತೆ ಸಮಾರಂಭ ನಡೆಯಲಿದೆ. ಈ ಅದ್ಧೂರಿ ವಿವಾಹ ಮಹೋತ್ಸವಕ್ಕೂ ಮುನ್ನ ಎರಡು ವೈಭವೋಪೇತ ಪ್ರೀ ವೆಡ್ಡಿಂಗ್ ಸಮಾರಂಭಗಳು ನಡೆದಿದ್ದು, ವಿಶ್ವವೇ ಭಾರತದೆಡೆಗೆ ತಿರುಗಿ ನೋಡಿದೆ. ಜಾಮ್‌ನಗರದಲ್ಲಿ ವರ್ಣರಂಜಿತ ವಿವಾಹ ಪೂರ್ವ ಕಾರ್ಯಕ್ರಮ, ಬಳಿಕ ಐಷಾರಾಮಿ ಕ್ರೂಸ್ನಲ್ಲಿ ಪ್ರೀ ವೆಡ್ಡಿಂಗ್ ಪಾರ್ಟಿ ನಡೆಸಿ ಅಂಬಾನಿ ಕುಟುಂಬ ವಿಶ್ವದ ಗಮನ ಸೆಳೆದಿತ್ತು.