ಸೈರನ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದ ಪ್ರವೀರ್ ಶೆಟ್ಟಿ ಈಗ ಮತ್ತೊಂದು ವಿಭಿನ್ನ ಕಥೆ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇಂದು ಬೆಂಗಳೂರಿನ ಬನಶಂಕರಿಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ’ನಿದ್ರಾದೇವಿ Next Door’ ಚಿತ್ರದ ಮುಹೂರ್ತ ಸಮಾರಂಭ ನಡೆಯಿತು. ಕ್ರೇಜಿಸ್ಟಾರ್ ರವಿಚಂದ್ರನ್ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಹೊಸ ಪ್ರತಿಭೆಗಳಿಗೆ ಆಶೀರ್ವಾದ ಮಾಡಿದರು.
ಯುವ ನಿರ್ದೇಶಕ ಸುರಾಗ್ ಸಾಗರ್ ನಿದ್ರಾದೇವಿ Next Door ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರವೀರ್ ಶೆಟ್ಟಿ ಜೊತೆಗೆ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ರಿಷಿಕಾ ನಾಯಕ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಮುಹೂರ್ತ ಸಮಾರಂಭದ ಬಳಿಕ ಮಾತನಾಡಿದ ನಿರ್ದೇಶಕ ಸುರಾಗ್ ಸಾಗರ್, ರವಿ ಸರ್ ನಮ್ಮ ಸಿನಿಮಾಗೆ ಕ್ಲಾಪ್ ಮಾಡಿರುವುದು ಖುಷಿ ಕೊಟ್ಟಿದೆ. ಅವರು ವಿಭಿನ್ನ ಟೈಟಲ್ ಮೂಲಕ ಬರುತ್ತಾರೆ. ನಮ್ಮ ಟೈಟಲ್ ಕೂಡ ವಿಭಿನ್ನವಾಗಿದೆ. ಇದು ಕಾಕತಾಳೀಯ. ಇಬ್ಬರದ್ದೂ ನಿದ್ದೆ ಇಲ್ಲದ ಜರ್ನಿ. ಅವರಿಗೆ ಯಾಕೆ ನಿದ್ದೆ ಬರಲ್ಲ? ಇದಕ್ಕೆ ಪರಿಹಾರ ಏನು? ಅದರೊಳಗೆ ಅವರು ಕಂಡುಕೊಳ್ಳುವ ಲವ್ ಸ್ಟೋರಿ. ಮುಂದಿನ ಕಥೆ ತಿಳಿಯಲು ಸಿನಿಮಾ ನೋಡಬೇಕು ಎಂದರು.
ನಾಯಕ ಪ್ರವೀರ್ ಶೆಟ್ಟಿ ಮಾತನಾಡಿ, ನಿದ್ರೆ ಬರದಿರುವ ಹುಡುಗ ಏನೇನೂ ಕಷ್ಟಪಡುತ್ತಾನೆ. ಅದರ ಸುತ್ತ ನನ್ನ ಪಾತ್ರ ಸಾಗುತ್ತದೆ. ನನ್ನದು ಇಂಟ್ರೆಸ್ಟಿಂಗ್ ಪಾತ್ರ. ಈ ಹಿಂದಿನ ಚಿತ್ರಗಳಿಗೆ ಹೋಲಿಕೆ ಮಾಡಿದರೆ ಇದು ವಿಭಿನ್ನ ಪಾತ್ರ. ಕಳೆದೊಂದು ತಿಂಗಳಿನಿಂದ ರಿಹರ್ಸಲ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನಾಯಕಿ ರಿಷಿಕಾ ನಾಯಕ್ ಮಾತನಾಡಿ, ಎರಡು ವರ್ಷದ ಹಿಂದೆಯೇ ನನಗೆ ನಿರ್ದೇಶಕರು ಸಿನಿಮಾದ ಕಥೆ ಹೇಳಿದ್ದರು. ಆಗ ಕ್ಯಾರಕ್ಟರ್ ಬೇರೆ ಇತ್ತು. ಈಗ ಕ್ಯಾರೆಕ್ಟರ್ ಬೇರೆ ಇದೆ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದಕ್ಕೆ ಖುಷಿಯಾಗಿದೆ ಎಂದು ತಿಳಿಸಿದರು.
ನಿರ್ಮಾಪಕ ಜಯರಾಮ್ ದೇವಸಮುದ್ರ ಮಾತನಾಡಿ, ಪ್ರವೀಣ್ ಶೆಟ್ಟಿ ಅವರಿಗೋಸ್ಕರ ಈ ಪ್ರಾಜೆಕ್ಟ್ಗೆ ಹಣ ಹಾಕುತ್ತಿದ್ದೇನೆ. ಕಥೆ ಬಹಳ ಚೆನ್ನಾಗಿದೆ. ನನಗೆ ಸುರಾಗ್ ಕಥೆ ಹೇಳಿದಾಗ ಫಸ್ಟ್ ಇಂಪ್ರೆಷನ್ನಲ್ಲಿಯೇ ಇಷ್ಟವಾಯಿತು. ಪ್ರತಿಯೊಬ್ಬರ ಲೈಫ್ ನಲ್ಲಿ ನಡೆಯುವ ಕೆಲ ಘಟನೆಗಳು ಈ ಚಿತ್ರದಲ್ಲಿವೆ. ಕಾಮಿಡಿ ಜೊತೆಗೆ ಒಂದು ಸಂದೇಶ ಚಿತ್ರದಲ್ಲಿದೆ ಎಂದರು.
ಯುರೋಪ್ನ ಪ್ರೇಗ್ ಫಿಲ್ಮ್ ಸ್ಕೂಲ್ನಲ್ಲಿ ನಿರ್ದೇಶನದ ಪಟ್ಟು ಕಲಿತಿರುವ ಸುರಾಗ್ ಸಾಗರ್ ಎಂಟ್ರೋಪಿ ಕಿರುಚಿತ್ರದ ಮೂಲಕ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇದೀಗ ಸುರಾಗ್ ’ನಿದ್ರಾದೇವಿ Next Door’ ಚಿತ್ರದ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದು, ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ನಟಿ ಸುಧಾರಾಣಿ, ಶ್ರೀವತ್ಸ, ಕಾರ್ತಿಕ್ ಪತ್ತಾರ್ ಮತ್ತು ಅನುರಾಗ್ ಪಾಟೀಲ್ ಸೇರಿದಂತೆ ಇತರರು ತಾರಾಬಗಳದಲ್ಲಿ ಇದ್ದಾರೆ.
ರಾಜು ಬೋನಗಾನಿ ಅವರ ರೋಡಿಯಂ ಎಂಟರ್ಟೈನ್ಮೆಂಟ್ ಸಹಯೋಗದೊಂದಿಗೆ ಸೂರಂ ಮೂವೀಸ್ ಬ್ಯಾನರ್ನಡಿಯಲ್ಲಿ ಜಯರಾಮ್ ದೇವಸಮುದ್ರ ನಿರ್ಮಿಸಿರುವ ಈ ಚಿತ್ರಕ್ಕೆ ಅಜಯ್ ಕುಲಕರ್ಣಿ ಅವರ ಛಾಯಾಗ್ರಹಣ ಮತ್ತು ನಕುಲ್ ಅಭ್ಯಂಕರ್ ಅವರ ಸಂಗೀತವಿದೆ. ಈ ತಿಂಗಳಾಂತ್ಯಂಕ್ಕೆ ’ನಿದ್ರಾದೇವಿ Next Door’ ತಂಡ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.
ಇದನ್ನೂ ಓದಿ : 'ಫಸ್ಟ್ ನೈಟ್ ವಿತ್ ದೆವ್ವ' ಟೀಸರ್ ರಿಲೀಸ್: ಚಿತ್ರದ ಬಗ್ಗೆ ಪ್ರಥಮ್ ಹೇಳಿದ್ದೇನು?