ಕನ್ನಡ ಚಿತ್ರರಂಗದ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ಹೊಸ ಸಿನಿಮಾ 'ಇಬ್ಬನಿ ತಬ್ಬಿದ ಇಳೆಯಲಿ'. ಶೀರ್ಷಿಕೆಯೇ ಒಂದು ಆಕರ್ಷಣೆ. ಸಿನಿಮಾ ಹೇಗಿರಬಹುದೆಂಬ ಕುತೂಹಲ ಅಭಿಮಾನಿ ಬಳಗದಲ್ಲಿದೆ. ಹಾಗಾಗಿ, ಸಿನಿಮಾ ಬಿಡುಗಡೆ ದಿನಾಂಕಕ್ಕಾಗಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಚಿತ್ರತಂಡ ಇಂದು ರಿಲೀಸ್ ದಿನಾಂಕ ಘೋಷಣೆ ಮಾಡಿದೆ. ವರಮಹಾಲಕ್ಷ್ಮಿ ಹಬ್ಬದ ದಿನದಂದೇ ರಕ್ಷಿತ್ ಶೆಟ್ಟಿ ತಂಡ ಕನ್ನಡ ಸಿನಿಪ್ರಿಯರೊಂದಿಗೆ ಶುಭ ಸುದ್ದಿ ಹಂಚಿಕೊಂಡಿದೆ.
ಚಿತ್ರಗಳ ಶೀರ್ಷಿಕೆಯೇ ಚಿತ್ರಮಂದಿರಗಳಿಗೆ ಆಗಮಿಸುವ ಸಿನಿಪ್ರಿಯರಿಗೆ ಸಿಗುವ ಮೊದಲ ಆಮಂತ್ರಣ. 'ಇಬ್ಬನಿ ತಬ್ಬಿದ ಇಳೆಯಲಿ' ಕೂಡ ತನ್ನ ಬ್ಯೂಟಿಫುಲ್ ಟೈಟಲ್ನೊಂದಿಗೆ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶ ಕಂಡಿತ್ತು. ನಂತರ ಅನಾವರಣಗೊಂಡಿರುವ ಹಾಡುಗಳು ಕೂಡ ಬಹಳ ಅರ್ಥಪೂರ್ಣ, ಸುಮಧುರವಾಗಿ ಮೂಡಿಬಂದಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿತ್ತು. ಹಾಗಾಗಿ, ಚಿತ್ರದ ಬಿಡುಗಡೆಗೆ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿದ್ದರು. ಅಂತಿಮವಾಗಿ ಇಂದು ನಿರ್ಮಾಪಕ ರಕ್ಷಿತ್ ಶೆಟ್ಟಿ ಸೇರಿದಂತೆ ಚಿತ್ರತಂಡ ಅಧಿಕೃತ ಬಿಡುಗಡೆ ದಿನಾಂಕವನ್ನು ತಮ್ಮ ಅಫೀಶಿಯಲ್ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಹಂಚಿಕೊಂಡಿದ್ದಾರೆ.
ನಿರ್ಮಾಪಕ ರಕ್ಷಿತ್ ಶೆಟ್ಟಿ ಪೋಸ್ಟ್: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ 'ಇಬ್ಬನಿ ತಬ್ಬಿದ ಇಳೆಯಲಿ' ರಿಲೀಸ್ ಡೇಟ್ ಅನೌನ್ಸ್ಮೆಂಟ್ನ ಪೋಸ್ಟರ್ ಹಂಚಿಕೊಂಡ ನಿರ್ಮಾಪಕ ರಕ್ಷಿತ್ ಶೆಟ್ಟಿ, ''ಇಬ್ಬನಿ ತಬ್ಬಿದ ಇಳೆಯಲಿ ಒಂದು ಪ್ರೀತಿಯ ಕೆಲಸ. ದೊಡ್ಡ ಪರದೆಯಲ್ಲಿ ಮ್ಯಾಜಿಕ್ ಮಾಡಲು ರೆಡಿಯಾಗಿದೆ. ಈ ವಿಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಇದಕ್ಕಿಂತ ಹೆಚ್ಚು ಉತ್ಸುಕನಾಗಲು ಸಾಧ್ಯವಾಗಲಿಲ್ಲ. ನಮ್ಮ ಈ ಸಿನಿಮಾ ಪ್ರೀತಿಯ ಅನೇಕ ಛಾಯೆಗಳ ಸುಂದರ ಪ್ರತಿಬಿಂಬ. ನೀವಿದರ ಭಾಗವಾಗುವುದನ್ನು ನೋಡಲು ನಾವು ಇಚ್ಛಿಸುತ್ತೇವೆ. ಸೆಪ್ಟೆಂಬರ್ 5ಕ್ಕೆ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಸಿಗೋಣ'' ಎಂದು ಬರೆದುಕೊಂಡಿದ್ದಾರೆ.
ಪ್ರೀತಿಯ ತಂಗಾಳಿ ಸೆಪ್ಟೆಂಬರ್ 5ರಂದು ಬೀಸಲಿದೆ, ಈ ಸುಂದರ ಪ್ರೇಮ ದೃಶ್ಯ ಕಾವ್ಯವನ್ನು ಚಿತ್ರಮಂದಿರದಲ್ಲಿಯೇ ನೋಡಿ ಸಂಭ್ರಮಿಸೋಣ!
— Rakshit Shetty (@rakshitshetty) August 16, 2024
Ibbani Tabbida Ileyali is a labour of love, now, its magic is ready to hit the big screens, and I couldn't be more excited to share it with you all.. This film is a… pic.twitter.com/NzD6tY3YvU
ಜೊತೆಗೆ ಎಕ್ಸ್ ಖಾತೆಯಲ್ಲೂ ಈ ಪೋಸ್ಟರ್ ಹಂಚಿಕೊಂಡಿದ್ದಾರೆ. ಪೋಸ್ಟ್ಗೆ ''ಪ್ರೀತಿಯ ತಂಗಾಳಿ ಸೆಪ್ಟೆಂಬರ್ 5ರಂದು ಬೀಸಲಿದೆ, ಈ ಸುಂದರ ಪ್ರೇಮ ದೃಶ್ಯ ಕಾವ್ಯವನ್ನು ಚಿತ್ರಮಂದಿರದಲ್ಲಿಯೇ ನೋಡಿ ಸಂಭ್ರಮಿಸೋಣ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸೆನ್ಸಾರ್ ಪರೀಕ್ಷೆಯಲ್ಲಿ 'ಪೌಡರ್' ಪಾಸ್: ಸ್ವಾತಂತ್ರ್ಯ ದಿನದಂದು ಸ್ಪೆಷಲ್ ಪೋಸ್ಟ್ ಶೇರ್ - Powder
ಪೋಸ್ಟರ್ನಲ್ಲಿ ನಾಯಕ ನಾಯಕಿಯ ಒಂದು ಸುಂದರ ಚಿತ್ರಣವಿದೆ. ಇಬ್ಬನಿ ತಬ್ಬಿದ ಇಳೆಯಲಿ ಎಂಬ ದೊಡ್ಡ ಶಿರ್ಷಿಕೆ ಪೋಸ್ಟರ್ ಮೇಲಿದ್ದು, ಬಿಡುಗಡೆ ದಿನಾಂಕವನ್ನು ಬರೆಯಲಾಗಿದೆ. ಜೊತೆಗೆ ಪ್ರೀತಿಯ ಮ್ಯಾಜಿಕ್ ಅನ್ನು ಸಂಭ್ರಮಿಸೋಣ ಎಂದು ಬರೆದುಕೊಂಡಿದ್ದಾರೆ.
ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನವಿರುವ ಈ ಚಿತ್ರದಲ್ಲಿ ವಿಹಾನ್ ಹಾಗೂ ಅಂಕಿತ ಅಮರ್ ತೆರೆ ಹಂಚಿಕೊಂಡಿದ್ದಾರೆ. ಮಯೂರಿ ನಟರಾಜ್ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜಿ.ಎಸ್. ಗುಪ್ತ, ರಕ್ಷಿತ್ ಶೆಟ್ಟಿ ಪರಂವಃ ಸ್ಟುಡಿಯೋಸ್ ಮೂಲಕ ನಿರ್ಮಾಣಗೊಂಡಿರುವ ಈ ಚಿತ್ರವು ಮುಂದಿನ ತಿಂಗಳ 5ರಂದು ತೆರೆಕಾಣಲಿದೆ.