ರಾಷ್ಟ್ರ ಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಪುಷ್ಪ: ದಿ ರೂಲ್'. ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರೋ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರಿಕ್ಷೆಗಳಿವೆ. ದಿ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಸಿಲ್ವರ್ ಸ್ಕ್ರೀನ್ ಮೇಲೆ ಸೀರೀಸ್ ಆಗಲು ಸಜ್ಜಾಗಿದೆ. ಸದ್ಯದ ಮಾಹಿತಿ ಪ್ರಕಾರ, ಚಿತ್ರ ಕೇವಲ ಎರಡು ಭಾಗಕ್ಕೆ ಪೂರ್ಣಗೊಳ್ಳಲ್ಲ. ಮೂರನೇ ಭಾಗವೂ ಬರಲಿದೆಯಂತೆ.
2021ರ ಡಿಸೆಂಬರ್ 17ರಂದು ತೆರೆಗಪ್ಪಳಿಸಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿದ ಸಿನಿಮಾ 'ಪುಷ್ಪ: ದಿ ರೈಸ್' (ಪುಷ್ಪ 1). ಸದ್ಯ ರೆಡಿಯಾಗುತ್ತಿರುವುದು ಸೀಕ್ವೆಲ್ - 'ಪುಷ್ಪ: ದಿ ರೂಲ್' (ಪುಷ್ಪ 2). ಮೂರನೇ ಭಾಗ 'ಪುಷ್ಪ: ದಿ ರೋರ್' ಎಂಬುದೀಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಆದರೆ, ಚಿತ್ರದ ಮೂರನೇ ಭಾಗ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಆದಾಗ್ಯೂ ಅಲ್ಲು ಅರ್ಜುನ್, ಸುಕುಮಾರ್ ಮತ್ತು ಪ್ರೊಡಕ್ಷನ್ ಟೀಮ್ 'ಮೈತ್ರಿ' ಮೂರನೇ ಭಾಗದೆಡೆಗೆ ಆಸಕ್ತಿ ತೋರಿಸಿದ್ದಾರಂತೆ. ವದಂತಿಗಳು ಏನೇ ಇರಲಿ, ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
ಬ್ಲಾಕ್ಬಸ್ಟರ್ ಚಿತ್ರದ ಮೂರನೇ ಭಾಗ ಕೇಳಲು ಹಿತವೆನಿಸುತ್ತಿದೆ. ಆದರೆ ಮುಂದಿನ ಹೆಜ್ಜೆ ಇಡೋ ಮುನ್ನ, ಎರಡನೇ ಭಾಗವನ್ನು ಯಶಸ್ವಿಯಾಗಿ ಪ್ರೇಕ್ಷಕರಿಗೆ ತಲುಪಿಸೋದು ಬಹಳ ಮುಖ್ಯ. ಪ್ರಸ್ತುತ ಪ್ಯಾನ್ ಇಂಡಿಯಾ ಚಲನಚಿತ್ರಗಳು ಮತ್ತು ಅವುಗಳ ಮುಂದುವರಿದ ಭಾಗಗಳ ಟ್ರೆಂಡ್ ಇದೆ. ಅದರಂತೆ, 'ಪುಷ್ಪ' ಸಿನಿಮಾದ ಸೀಕ್ವೆಲ್ ಬರಲಿದೆ ಎಂದು ಈ ಮೊದಲೇ ಘೋಷಿಸಲಾಗಿತ್ತು. ಆದ್ರೀಗ ಮೂರನೇ ಭಾಗಕ್ಕೆ ಸಂಬಂಧಿಸಿದಂತೆ ಅಭಿಮಾನಿಗಳು ಆನ್ಲೈನ್ನಲ್ಲಿ ಹೊಸ ಅಭಿಯಾನ ಶುರು ಹಚ್ಚಿಕೊಂಡಿದ್ದಾರೆ. ಅಪಾರ ಉತ್ಸಾಹ ತೋರುತ್ತಿರುವ ನೆಟ್ಟಿಗರಿಗೆ, ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ಕೊಡಬೇಕಿದೆ.
ಇದನ್ನೂ ಓದಿ: ಯಶ್ 'ಟಾಕ್ಸಿಕ್' ಸಿನಿಮಾದಲ್ಲಿ ಶಾರುಖ್ ಖಾನ್?: ಚರ್ಚೆಯಲ್ಲಿ ಚಿತ್ರತಂಡ
ನಿರ್ದೇಶಕ ಸುಕುಮಾರ್ ಅವರು ಈಗಾಗಲೇ ವೆಬ್ ಸೀರಿಸ್ಗಾಗುವಷ್ಟು ದೊಡ್ಡ ಕಥೆಯನ್ನು ಈ ಪುಷ್ಪ ಚಿತ್ರಕ್ಕೆ ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲು ಅರ್ಜುನ್ ಅವರಿಗೆ ಕಥೆ ಇಷ್ಟವಾದ ಹಿನ್ನೆಲೆ ಚಿತ್ರದ ಲೆಂಥ್ನಲ್ಲಿ ಬದಲಾವಣೆ ಮಾಡಿದ್ದರು. ಆದ್ರೀಗ ಮೊದಲ ಭಾಗ ಹಿಟ್ ಆಗಿರುವುದು ಮತ್ತು ಎರಡನೇ ಭಾಗಕ್ಕೆ ಕ್ರೇಜ್ ಹೆಚ್ಚಾಗುತ್ತಿರುವುದನ್ನು ನೋಡಿ, ಮತ್ತೆ ಕಥೆಯ ಅವಧಿಯನ್ನು ಹೆಚ್ಚಿಸುತ್ತಿದ್ದೇವೆ ಎಂದು ಚಿತ್ರತಂಡದ ಕಡೆಯಿಂದ ಮಾಹಿತಿ ಬಂದಿತ್ತು.
ಇದನ್ನೂ ಓದಿ: ಧರ್ಮೇಂದ್ರ - ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್ ದಾಂಪತ್ಯದಲ್ಲಿ ಬಿರುಕು?!
ಫಹಾದ್ ಫಾಸಿಲ್ ಮತ್ತು ಅಲ್ಲು ಅರ್ಜುನ್ ನಡುವಿನ ಜಗಳ ಎರಡನೇ, ಮೂರನೇ ಭಾಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದುವರೆಗೂ ಪರಿಚಯವಾಗದ ಹಲವು ಹೊಸ ಪಾತ್ರಗಳೂ ಎಂಟ್ರಿ ಕೊಡಲಿವೆ ಎನ್ನಲಾಗಿದೆ. ಈ ಮೂಲಕ ಪುಷ್ಪ ಚಿತ್ರವನ್ನು ಟಾಲಿವುಡ್ನಲ್ಲಿ ಪವರ್ಫುಲ್ ಬ್ರ್ಯಾಂಡ್ ಮಾಡಲು ಸುಕುಮಾರ್ ಶ್ರಮಿಸುತ್ತಿದ್ದಾರೆ.