ಮುಂಬೈ: ನಟಿ ಪ್ರಿಯಾಂಕಾ ಚೋಪ್ರಾ ಅವರು 'ಅನ್‌ಫಿನಿಶ್ಡ್' ಎಂಬ ಆತ್ಮಕಥೆ ಬರೆಯುವ ಮೂಲಕ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಪುಸ್ತಕ 'ಅಭಿ ಬಾಕಿ ಹೈ ಸಫರ್' ಎಂಬ ಹೆಸರಿನಲ್ಲಿ ಹಿಂದಿ ಆವೃತ್ತಿಯಲ್ಲೂ ಬಂದಿದ್ದು ವಿಶ್ವ ಪುಸ್ತಕ ಮೇಳ 2024ರ ಭಾಗವಾಗಿದೆ. ಈ ಬಗ್ಗೆ ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಅನ್‌ಫಿನಿಶ್ಡ್' ಹಿಂದಿ ಆವೃತ್ತಿ 'ಅಭಿ ಬಾಕಿ ಹೈ ಸಫರ್' ಈಗ ವಿಶ್ವ ಪುಸ್ತಕ ಮೇಳ 2024ರ ಭಾಗವಾಗಿದೆ" ಎಂದು ಅವರು ಬರೆದುಕೊಂಡಿದ್ದಾರೆ.
2021ರ ಜನವರಿ 19ರಂದು ಈ ಪುಸ್ತಕ ಬಿಡುಗಡೆಗೊಂಡಿದೆ. ಪೆಂಗ್ವಿನ್ ರ‍್ಯಾಂಡಮ್ ಹೌಸ್ ಪ್ರಕಟಿಸಿದೆ. ಬಾಲ್ಯದಲ್ಲಿ ತಾವು ಎದುರಿಸಿದ ಸವಾಲುಗಳು, ತಂದೆ-ತಾಯಿಯ ಪ್ರೀತಿ ಮತ್ತು ವಾತ್ಸಲ್ಯ, ಚಿತ್ರರಂಗಕ್ಕೆ ಬರಲು ಕಾರಣ ಸೇರಿದಂತೆ ಎಲ್ಲವನ್ನೂ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ಆತ್ಮಚರಿತ್ರೆಯನ್ನು ಅವರು 2018ರಲ್ಲಿ ಬರೆಯಲು ಆರಂಭಿಸಿದ್ದರು. ಅನೇಕ ವರ್ಷಗಳ ಪರಿಶ್ರಮದ ಬಳಿಕ ಓದುಗರ ಇದೀಗ ಕೈಗೆ ಸಿಕ್ಕಿದೆ. ಬರೆಯುವುದಕ್ಕೂ ಮುನ್ನ ಪುಸ್ತಕದ ಬಗ್ಗೆ ಸಾಕಷ್ಟು ಬಾರಿ ನಟಿ ಹೇಳಿಕೊಂಡಿದ್ದರು.
ಆತ್ಮಚರಿತ್ರೆ ಒಟ್ಟು 256 ಪುಟಗಳನ್ನು ಹೊಂದಿದೆ. ವೈಯಕ್ತಿಕ ಜೀವನದಿಂದ ವೃತ್ತಿಜೀವನದವರೆಗೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ. ಮಧ್ಯಮ ವರ್ಗದ ಕುಟುಂಬದಿಂದ ಬಂದ ಓರ್ವ ಹುಡುಗಿ ಈ ಮಟ್ಟದ ಖ್ಯಾತಿ ಗಳಿಸಲು ಯಾವ ಯಾವ ಸಮಸ್ಯೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ₹400 ಕೋಟಿ ವೆಚ್ಚದ ಚಿತ್ರದಲ್ಲಿ ಸಲ್ಮಾನ್ ಖಾನ್; 10 ವರ್ಷದ ನಂತರ ಸಾಜಿದ್ ಜೊತೆ ಸಿನಿಮಾ