ಕನ್ನಡ ಸಿನಿಮಾಗಳನ್ನು ಒಟಿಟಿಯಲ್ಲಿ ಖರೀದಿಸುತ್ತಿಲ್ಲ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಇಲ್ಲೊಂದು ಸಿನಿಮಾ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾಗುತ್ತಿದೆ. ಶೃಂಗೇರಿಯ ರಂಗಕರ್ಮಿ, ಬಹುಮುಖ ಪ್ರತಿಭೆ ರಮೇಶ್ ಬೇಗಾರ್ ರಚಿಸಿ, ನಿರ್ದೇಶಿಸಿದ ಜಲಪಾತ 2023ರಲ್ಲಿ ಬಿಡುಗಡೆಗೊಂಡು ಹಲವು ವಿಕ್ರಮ ದಾಖಲಿಸಿತ್ತು. ಇದು ಪರಿಸರ ಕಾಳಜಿಯ ಸಿನಿಮಾವಾಗಿದೆ.
ಪ್ರಮೋದ್ ಶೆಟ್ಟಿ ಕೆರಿಯರ್‌ನ ಬೆಸ್ಟ್ ಪಾತ್ರ ಎಂಬ ಮಾಧ್ಯಮ ವಿಮರ್ಶೆಯಲ್ಲಿ ಮೆಚ್ಚುಗೆ ಪಡೆದ ಜಲಪಾತದಲ್ಲಿ ಸಂಪೂರ್ಣ ಶೃಂಗೇರಿ, ತೀರ್ಥಹಳ್ಳಿ ಭಾಗದ ಹವ್ಯಾಸಿ ರಂಗಭೂಮಿ ಕಲಾವಿದರೇ ಬಣ್ಣ ಹಚ್ಚಿದ್ದರು. ಪದವಿಪೂರ್ವ ಖ್ಯಾತಿಯ ರಜನೀಶ್ ನಾಯಕ ಮತ್ತು ನಾಗಶ್ರೀ ಬೇಗಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಪ್ರಮುಖ ಪಾತ್ರಗಳಲ್ಲಿ ರವಿಕುಮಾರ್ ಬಿ.ಎಲ್., ರೇಖಾ ಪ್ರೇಮ್ ಕುಮಾರ್, ವಿಶ್ವನಾಥ್, ನಯನ, ಸ್ವಾತಿ, ವೈಶಾಲಿ, ಸುನೀತಾ, ಸುರೇಶ್ ಎಂ.ಆರ್., ಚಿದಾನಂದ ಹೆಗ್ಗಾರ್, ಕಾರ್ತಿಕ್ ಸೇರಿದಂತೆ ಸಾಕಷ್ಟು ಕಲಾವಿದರಿದ್ದರು.
ಮಲೆನಾಡಿನ ತಂತ್ರಜ್ಞರೇ ಸೇರಿ ಮಾಡಿದ ಸಿನಿಮಾ ಕೂಡ ಇದಾಗಿತ್ತು. ಶಶಿರ-ಛಾಯಾಗ್ರಹಣ, ಅವಿನಾಶ್-ಸಂಕಲನ, ಸಾದ್ವಿನಿ ಕೊಪ್ಪ-ಸಂಗೀತ ನಿರ್ದೇಶನ, ಅಭಿಷೇಕ್ ಹೆಬ್ಬಾರ್-ಕಲಾ ನಿರ್ದೇಶನ ಮತ್ತು ವಿನು ಮನಸು-ಹಿನ್ನಲೆ ಸಂಗೀತ ಹೊಂದಿರುವ ಜಲಪಾತ ಸಂಪೂರ್ಣ ಮಲೆನಾಡ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದೆ.
ಮಲೆನಾಡ ಜ್ವಲಂತ ಪರಿಸರ ಸಂಬಂಧಿ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವಿನೂತನ ಶೈಲಿಯ ಜಲಪಾತ ಬೆಂಗಳೂರಲ್ಲಿ 50 ದಿನ ಪ್ರದರ್ಶನ ಕಂಡಿತ್ತು. ಸಿ ಕೇಂದ್ರ ಕೊಪ್ಪ ಮತ್ತು ಬಿ ಕೇಂದ್ರ ಚಿಕ್ಕಮಗಳೂರಲ್ಲಿ ಕೂಡ ಸತತವಾಗಿ 5 ವಾರ ಓಡಿದ ಕೀರ್ತಿ ಜಲಪಾತದ್ದು.
ಇದನ್ನೂ ಓದಿ: 'ಕೆಟಿಎಮ್' ಟ್ರೇಲರ್ ರಿಲೀಸ್: ದೀಕ್ಷಿತ್ ಶೆಟ್ಟಿ ಸಿನಿಮಾಗೆ ರಿಷಬ್, ರಶ್ಮಿಕಾ ಸೇರಿದಂತೆ ಸೌತ್ ಸೆಲೆಬ್ರಿಟಿಗಳ ಸಾಥ್