ಏಪ್ರಿಲ್ 14 ರಂದು ಮುಂಬೈನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿ ಪ್ರಕರಣ ಸಂಬಂಧ ಪೊಲೀಸ್ ತನಿಖೆ ಚುರುಕುಗೊಂಡಿದೆ. ಪೊಲೀಸ್ ಮೂಲಗಳ ಪ್ರಕಾರ, ಇತ್ತೀಚೆಗೆ ಮುಂಬೈ ಆರಕ್ಷಕರು ಶೂಟರ್ ವಿಕ್ಕಿ ಗುಪ್ತಾ ಅವರ ಐವರು ಆಪ್ತ ಸ್ನೇಹಿತರನ್ನು ಬಿಹಾರದ ಬೆಟ್ಟಿಯಾದಿಂದ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು. ಅಲ್ಲದೇ, ಪೊಲೀಸರು ಆರೋಪಿ ವಿಕ್ಕಿಯ ತಂದೆಯನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬೈ ಅಪರಾಧ ವಿಭಾಗದ ತಂಡ ಸೋಮವಾರ ರಾತ್ರಿ ಬೆಟ್ಟಿಯಾ ಜಿಲ್ಲೆಯ ಗೌನಾಹ ಗ್ರಾಮದ ಮಸಾಹಿ ಪ್ರದೇಶಕ್ಕೆ ಭೇಟಿ ನೀಡಿತ್ತು ಎಂದು ಮೂಲಗಳು ಬಹಿರಂಗಪಡಿಸಿವೆ. ಸಂಜೀತ್ ಚೌಹಾಣ್, ಸುನಿಲ್ ಕುಮಾರ್, ಅಂಕಿತ್ ಚೌಹಾಣ್, ಆಶಿಶ್ ಅಲಿಯಾಸ್ ಖಲೀಫ್ ಮತ್ತು ವಿಕ್ಕಿಯ ಸೋದರಮಾವ ವಿಕಾಸ್ ಕುಮಾರ್ ಸೇರಿದಂತೆ ಆರೋಪಿಯೊಂದಿಗೆ ಆಪ್ತ ಸಂಬಂಧ ಹೊಂದಿರುವ ಐವರು ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ವಿಚಾರಣೆಗಾಗಿ ಪೊಲೀಸರು ನೋಟಿಸ್ ನೀಡಿದ್ದರು. ನಂತರ ಐವರನ್ನು ವಿಚಾರಣೆಗೆ ಒಳಪಡಿಸಲಾಯಿತು. ವಿಚಾರಣೆಯ ನಂತರ ಅವರನ್ನು ಬಂಧಿಸಲಾಗಿದೆಯೇ ಎಂಬುದು ಸದ್ಯಕ್ಕೆ ತಿಳಿದಿಲ್ಲ.
ಮುಂಬೈ ಪೊಲೀಸರು, ಈ ಗುಂಡಿನ ದಾಳಿಗೆ ಬಳಸಿದ ಬಂದೂಕನ್ನು ಸೂರತ್‌ನ ತಾಪಿ ನದಿಯಿಂದ ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ನಿಂದ ಮಾಹಿತಿ ಪಡೆದು ಈ ಕ್ರಮ ಕೈಗೊಳ್ಳಲಾಗಿದೆ. ಮುಂಬೈನಿಂದ ಪಲಾಯನ ಮಾಡಿ ಗುಜರಾತ್‌ಗೆ ತೆರಳುತ್ತಿದ್ದಾಗ ರೈಲ್ವೆ ಸೇತುವೆಯಿಂದ ತಾಪಿ ನದಿಗೆ ಶಸ್ತ್ರಾಸ್ತ್ರಗಳನ್ನು ಎಸೆದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಈ ಇಬ್ಬರು ನಡೆಸಿದ ಗುಂಡಿನ ದಾಳಿಯ ಹಿಂದಿನ ಮುಖ್ಯ ಉದ್ದೇಶ ಬೆದರಿಸುವುದಾಗಿದೆ. ಆರೋಪಿಗಳಾದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಪ್ರಸ್ತುತ ಏಪ್ರಿಲ್ 25 ರವರೆಗೆ ಮುಂಬೈ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದನ್ನೂ ಓದಿ: ಅಪ್ಪುಸ್ ಗಂಧದಗುಡಿ ಅಗರಬತ್ತಿ ಬಿಡುಗಡೆ: ಹೊಸ ಉದ್ಯಮ ಶುರುಮಾಡಿದ ಅಶ್ವಿನಿ ಪುನೀತ್ ರಾಜ್ ಕುಮಾರ್ - Gandhadagudi Agarbatti
ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಲ್ಮಾನ್ ಖಾನ್ ಮತ್ತು ಅವರ ತಂದೆ, ಖ್ಯಾತ ಬರಹಗಾರ ಸಲೀಂ ಖಾನ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಭದ್ರತೆಯ ಭರವಸೆ ನೀಡಿದ್ದರು. ಸಲ್ಮಾನ್ ಭದ್ರತೆಯನ್ನು ಹೆಚ್ಚಿಸುವಂತೆ ಮುಂಬೈ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಇಂದ್ರಜಿತ್ ಲಂಕೇಶ್ ಪುತ್ರನ ಚೊಚ್ಚಲ ಚಿತ್ರಕ್ಕೆ ಅನಿಲ್ ಕುಂಬ್ಳೆ, ಅಶ್ವಿನಿ ಪುನೀತ್ ರಾಜ್ಕುಮಾರ್ ಸಾಥ್ - Gowri Pre Teaser
ಏಪ್ರಿಲ್ 14 ರಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಭಾಯ್ಜಾನ್ ನಿವಾಸದ ಮೇಲೆ 6 ಸುತ್ತುಗಳ ಗುಂಡಿನ ದಾಳಿ ಮಾಡಲಾಗಿತ್ತು. ಇದು ನಟನ ಕುಟುಂಬ ಸದಸ್ಯರು ಸೇರಿದಂತೆ ಅಭಿಮಾನಿಗಳಲ್ಲಿ ಭಾರಿ ಆತಂಕ ಮೂಡಿಸಿತ್ತು. ಪ್ರಕರಣದ ಬೆನ್ನಲ್ಲೇ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರಿಸಿದ್ದಾರೆ.