ಹೈದರಾಬಾದ್ (ತೆಲಂಗಾಣ): ಏಕಾಂಗಿಯಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿರುವ ನಟ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಇಂದಿನ ಆಂಧ್ರಪ್ರದೇಶದ ರಾಜಕೀಯ ವಲಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಹತ್ತು ವರ್ಷಗಳ ಕಾಲ ಯಾವುದೇ ಹುದ್ದೆ, ಅಧಿಕಾರವಿಲ್ಲದೇ 'ಅಜ್ಞಾತ' ಜೀವನ ನಡೆಸಿದ ಪವನ್ ಈಗ ವಿಧಾನಸಭೆಗೆ ಕಾಲಿಡಲಿದ್ದಾರೆ.
ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯಲ್ಲಿ ಮೈತ್ರಿ ನಾಯಕರು ಯಶಸ್ಸು ಸಾಧಿಸುತ್ತಿದ್ದಾರೆ. ಈಗಾಗಲೇ ಕೆಲವು ಕ್ಷೇತ್ರಗಳಲ್ಲಿ ಮೈತ್ರಿಕೂಟದ ನಾಯಕರು ಜಯಭೇರಿ ಬಾರಿಸಿರುವುದರಿಂದ ಜನಸೇನಾ ಹಾಗೂ ಟಿಡಿಪಿ ಸರದಾರರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಪಿಠಾಪುರದಿಂದ ಸ್ಪರ್ಧಿಸಿದ್ದ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ 69,169 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ರಾಜ್ಯ ಮಾತ್ರವಲ್ಲದೇ, ಇತರ ರಾಜ್ಯಗಳಲ್ಲೂ ಮೈತ್ರಿಕೂಟ ವಿಜಯೋತ್ಸವ ಆಚರಿಸುತ್ತಿದೆ.
ಇನ್ನು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪವನ್ ಕಲ್ಯಾಣ ನೇತೃತ್ವದ ಜನಸೇನಾ ಪಕ್ಷ ಸ್ಪರ್ಧಿಸಿದ್ದ 21 ಕ್ಷೇತ್ರಗಳಲ್ಲಿ 18 ಕ್ಷೇತ್ರಗಳನ್ನು ಗೆದ್ದು ಬೀಗಿದ್ದು, ಇನ್ನು ಮೂರು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಹುತೇಕ ಆ ಮೂರು ಕ್ಷೇತ್ರಗಳಲ್ಲಿಯೂ ಜನಸೇನಾ ಗೆಲುವು ಸಾಧಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.
ಇನ್ನು ಜನಸೇನಾ ಪಕ್ಷ ಗೆಲುವು ಸಾಧಿಸುತ್ತಿದ್ದಂತೆ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ಪವನ್ ಕಲ್ಯಾಣ್ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಚುನಾವಣೆಯಲ್ಲಿ ಗೆದ್ದ ಪವನ್ ಅವರನ್ನು ಅವರ ಪತ್ನಿ ಲೆಜಿನೋವಾ ಆರತಿ ಬೆಳಗಿ ವಿಜಯ ತಿಲಕವನ್ನಿಟ್ಟರು. ಭಾರೀ ಗೆಲುವ ಸಾಧಿಸಿರುವ ಪವನ್ ಅನ್ನು ನೋಡಲು ಅಭಿಮಾನಿಗಳು ಮತ್ತು ಮಹಿಳೆಯರು ಅವರ ನಿವಾಸದ ಮುಂದೆ ಸಾಗರದಂತೆ ಸೇರಿದರು. ಎಪಿಯಲ್ಲಿ ಮೈತ್ರಿಕೂಟದ ಗೆಲುವಿನ ನಂತರ ಕಾರ್ಯಕರ್ತರು, ಮುಖಂಡರು ಪವನ್ ಕಲ್ಯಾಣ್ ನಿವಾಸದ ಮುಂದೆ ಜಮಾಯಿಸಿ ಅದ್ಧೂರಿಯಾಗಿ ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ಸಂತಸ ವ್ಯಕ್ತಪಡಿಸಿದರು. ನಂತರ ಪವನ್ ಕಲ್ಯಾಣ್ ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸದಿಂದ ಅಮರಾವತಿ ಕಡೆಗೆ ಪ್ರಯಾಣ ಬೆಳೆಸಿದರು.
ಓದಿ: ಪ್ರಧಾನಿ ಮೋದಿಗೆ ಹ್ಯಾಟ್ರಿಕ್ ಗೆಲುವು: 1.5 ಲಕ್ಷ ಮತಗಳ ಅಂತರದಿಂದ ಭರ್ಜರಿ ಜಯಭೇರಿ - PM Modi leading