ಹೈದರಾಬಾದ್: 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ವಿಜೇತರ ಹೆಸರನ್ನು ಶುಕ್ರವಾರದಂದು (ಆಗಸ್ಟ್ 16) ನವದೆಹಲಿಯಲ್ಲಿ ಘೋಷಿಸಲಾಯಿತು. ಕನ್ನಡದ ಮೂರು ಚಿತ್ರಗಳು ಆರು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದು, ಚಿತ್ರರಂಗ ಮತ್ತು ಕನ್ನಡಿಗರ ಹೆಮ್ಮೆಯ ಕ್ಷಣವಾಗಿತ್ತು. 2022ರ ಸೆಪ್ಟೆಂಬರ್ನಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸನ್ನು ಕಂಡಿರುವ 'ಕಾಂತಾರ' ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಮನರಂಜನಾ ಚಿತ್ರ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ಸಾಧನೆ ಹಾಗೂ ಅಭಿಮಾನಿಗಳ ಅಪಾರ ಪ್ರೀತಿಗೆ ಚಿತ್ರದ ನಟ-ನಿರ್ದೇಶಕ ರಿಷಬ್ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡುವ ಮೂಲಕ ಕೃತಜ್ಞತೆ ಅರ್ಪಿಸಿದ್ದಾರೆ.
ಡಿವೈನ್ ಸ್ಟಾರ್ ಸ್ಪೆಷಲ್ ಪೋಸ್ಟ್: ''ಕಾಂತಾರಕ್ಕೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೆ ನಾನು ನಿಜವಾಗಿಯೂ ಆಭಾರಿಯಾಗಿದ್ದೇನೆ. ನನ್ನ ಈ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಮತ್ತು ವಿಶೇಷವಾಗಿ ಹೊಂಬಾಳೆ ಫಿಲ್ಮ್ಸ್ ತಂಡಕ್ಕೆ ನಾನು ನನ್ನ ಹೃತ್ಫೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರೇಕ್ಷಕರು ಈ ಚಿತ್ರಕ್ಕೆ ಕೊಟ್ಟಿರುವ ಬೆಂಬಲವು ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ತುಂಬಿದೆ. ನಮ್ಮ ವೀಕ್ಷಕರಿಗೆ ಇನ್ನೂ ಉತ್ತಮ ಚಿತ್ರ ನೀಡಲು ಇನ್ನೂ ಹೆಚ್ಚು ಶ್ರಮಿಸಲು ನಾನು ಬದ್ಧನಾಗಿದ್ದೇನೆ. ಅತ್ಯಂತ ಗೌರವದಿಂದ ನಾನು ಈ ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರು, ದೈವ ನರ್ತಕರು, ಅಪ್ಪು ಸರ್ಗೆ ಅರ್ಪಿಸುತ್ತೇನೆ. ದೈವದ ಆಶೀರ್ವಾದದಿಂದ ನಾವು ಈ ಕ್ಷಣ ತಲುಪಿದ್ದೇವೆ'' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ಗೆ ನನ್ನ ಹೃದಯ ಕೃತಜ್ಞತಾ ಭಾವದಿಂದ ತುಂಬಿದೆ ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ.
ಇದನ್ನೂ ಓದಿ: 'ಪ್ರಶಸ್ತಿ ಜವಾಬ್ದಾರಿ ಹೆಚ್ಚಿಸಿದೆ'; ಯಶ್, ವಿಕ್ರಮ್ ಕರೆಮಾಡಿ ವಿಶ್ ಮಾಡಿದ್ರು: ರಿಷಬ್ ಶೆಟ್ಟಿ - Rishab Shetty
ಕಳೆದ ದಿನ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ, ನನಗೆ ಸಾಥ್ ಕೊಟ್ಟಿರುವ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳು. ಹೊಂಬಾಳೆ ಫಿಲ್ಮ್ಸ್ ನಮ್ಮ ಸಿನಿಮಾದ ಬಿಗ್ಗೆಸ್ಟ್ ಸಪೋರ್ಟ್. ತಂಡದ ಎಲ್ಲರಿಗೂ ಥ್ಯಾಂಕ್ಸ್ ಹೇಳಲಿಚ್ಛಿಸುತ್ತೇನೆ. ಜನರು ಸಿನಿಮಾ ವೀಕ್ಷಿಸಿ ಸಕ್ಸಸ್ ತಂದುಕೊಟ್ಟಾಗಲೇ ಜವಾಬ್ದಾರಿ ಹೆಚ್ಚುತ್ತದೆ. ಪ್ರಶಸ್ತಿಗಳು ಕೂಡಾ ಅದೇ ರೀತಿ ಜವಾಬ್ದಾರಿಗಳನ್ನು ಹೆಚ್ಚಿಸುತ್ತದೆ. ಕೆಲಸವನ್ನು ಮತ್ತಷ್ಟು ಬೆಟರ್ ಮಾಡಿಕೊಳ್ಳುತ್ತಾ ಹೋಗಬೇಕು. ಆ ಪ್ರಯತ್ನಕ್ಕೆ ಒಂದೊಳ್ಳೆ ತಂಡದ ಸಾಥ್ ಕೂಡ ಬೇಕು. ಎಲ್ಲವೂ ಕೂಡಿ ಬಂದಾಗ ಹೀಗೆ ಏನಾದರೂ ಸಾಧಿಸಲು ಸಾಧ್ಯ. ಒಬ್ಬರಿಂದಲೇ ಏನನ್ನೂ ಮಾಡಲಾಗುವುದಿಲ್ಲ. ಹೆಚ್ಚಿನವರು ವಿಶ್ ಮಾಡಿದ್ದು, ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲ ಹೀಗೆಯೇ ಇರಲಿ ಎಂದು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.
'ಕಾಂತಾರ' 2022ರ ಸೆಪ್ಟೆಂಬರ್ 30ರಂದು ಬಿಡುಗಡೆ ಆಗಿ ಭರ್ಜರಿ ಯಶಸ್ಸು ಕಂಡಿತ್ತು. ರಿಷಬ್ ಶೆಟ್ಟಿ ನಾಯಕನಾಗಿ ನಟನೆ ಜೊತೆಗೆ, ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದರು. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾ ಕನ್ನಡ ಮಾತ್ರವಲ್ಲದೇ, ಭಾರತೀಯ ಚಿತ್ರರಂಗದಲ್ಲೇ ಅಭೂತಪೂರ್ವ ಮೆಚ್ಚುಗೆ ಸಾಧಿಸಿತ್ತು. ನಂತರ ಬಹುಭಾಷೆಗಳಲ್ಲೂ ಸಿನಿಮಾ ಬಿಡುಗಡೆ ಆಗಿ ರಿಷಬ್ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ.