ಸ್ಟ್ಯಾಂಡ್-ಅಪ್ ಕಾಮಿಡಿಯನ್ ಹಾಗೂ 'ಬಿಗ್ ಬಾಸ್ - 17' ವಿನ್ನರ್ ಮುನಾವರ್ ಫಾರುಕಿ (Munawar Faruqui) ಸೇರಿದಂತೆ 14 ಮಂದಿಯನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಮುಂಬೈನಲ್ಲಿ ನಡೆಸಿದ ದಾಳಿಯ ಸಂದರ್ಭದಲ್ಲಿ ಇವರು ಹುಕ್ಕಾ (Hookahs) ಸೇದಿದ್ದು ಪತ್ತೆಯಾದ ಬಳಿಕ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು ಮಾಹಿತಿ ನೀಡಿದ್ದಾರೆ.
ಮಂಗಳವಾರ ರಾತ್ರಿ 10.30ರ ಸುಮಾರಿಗೆ ಬೋರಾ ಬಜಾರ್ ಪ್ರದೇಶದಲ್ಲಿರುವ ಹುಕ್ಕಾ ಪಾರ್ಲರ್ ಮೇಲೆ ದಾಳಿ ನಡೆಸಲಾಗಿತ್ತು. ಇಂದು ಬೆಳಗ್ಗೆ 5 ಗಂಟೆಯವರೆಗೆ ಕಾರ್ಯಾಚರಣೆ ಮುಂದುವರಿಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
"ದಾಳಿಯ ಸಂದರ್ಭದಲ್ಲಿ ಮುನಾವರ್ ಫಾರುಕಿ ಸೇರಿದಂತೆ ಹಲವರು ಹುಕ್ಕಾ ಸೇದಿರುವುದು ಕಂಡುಬಂದಿದೆ. ಈ ಕುರಿತ ವಿಡಿಯೋ ಕೂಡ ನಮ್ಮ ಬಳಿ ಇದೆ. ನಾವು ಫಾರುಕಿ ಸೇರಿದಂತೆ ಹಲವರನ್ನು ವಶಕ್ಕೆ ಪಡೆದೆವು. ಜಾಮೀನು ಪಡೆಯಲು ಅವಕಾಶವಿರುವ ಸೆಕ್ಷನ್ಗಳು ಅವರ ಮೇಲೆ ದಾಖಲಾಗಿದ್ದ ಕಾರಣ, ನಂತರ ಅವರನ್ನು ಬಿಟ್ಟು ಕಳುಹಿಸಲು ಅನುಮತಿಸಲಾಯಿತು" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ಹರ್ಬಲ್ ಹುಕ್ಕಾ ಸೇದುವ ನೆಪದಲ್ಲಿ ಪಾರ್ಲರ್‌ನಲ್ಲಿ ತಂಬಾಕು ಆಧಾರಿತ ಹುಕ್ಕಾಗಳನ್ನು ಸೇದುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು.
ಇದನ್ನೂ ಓದಿ: ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್-ಅದಿತಿ ರಾವ್ ಹೈದರಿ ಜೋಡಿ - Aditi Siddharth Marriage
ಫಾರುಕಿ ಮತ್ತಿತರರ ವಿರುದ್ಧ ಸಿಗರೇಟ್ ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 283, 336ರ ಅಡಿ ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆ ಬಳಿಕ ನೋಟಿಸ್ ನೀಡಿ, ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಹುಯ್ಯೋ ಹುಯ್ಯೋ ಮಳೆರಾಯ'ವೆಂದು ಹಾಡುತ್ತಾ ಬಂದ ಕಿರಣ್ ರಾಜ್ - Bharjari Gandu