ಹೈದರಾಬಾದ್: ಹಿರಿಯ ನಟ, ರಾಜಕಾರಣಿ ಮಿಥುನ್ ಚಕ್ರವರ್ತಿ ಅವರಿಗೆ ಪ್ರತಿಷ್ಠಿತ 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿ ಒಲಿದಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿರುವ ಕೊಡುಗೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡುತ್ತಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಈ ಕುರಿತು ಅಧಿಕೃತವಾಗಿ ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ. 'ಹಿರಿಯ ನಟನ ಅಸಾಧಾರಣ ಸಿನಿಮೀಯ ಪ್ರಯಾಣ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಪ್ರತಿಷ್ಟಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ' ಎಂದು ಬರೆದುಕೊಂಡಿದ್ದಾರೆ.
'ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ ಅವರ ಸ್ಫೂರ್ತಿದಾಯಕ ಪ್ರಯಾಣವು ಮುಂದಿನ ಪೀಳಿಗೆಯನ್ನು ಪ್ರೇರೇಪಿಸುತ್ತದೆ! ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಆಯ್ಕೆಯ ಜ್ಯೂರಿಗಳು ದಿಗ್ಗಜ ನಟ ಮಿಥುನ್ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದ್ದಾರೆ ಎಂದು ಘೋಷಿಸಲು ಹೆಮ್ಮೆ ಆಗುತ್ತಿದೆ. 2024ರ ಅಕ್ಟೋಬರ್ 8ರಂದು ನಡೆಯಲಿರುವ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ' ಎಂದು ಅಶ್ವಿನಿ ವೈಷ್ಣವ್ ಮಾಹಿತಿ ಹಂಚಿಕೊಂಡಿದ್ದಾರೆ.
Mithun Da’s remarkable cinematic journey inspires generations!
— Ashwini Vaishnaw (@AshwiniVaishnaw) September 30, 2024
Honoured to announce that the Dadasaheb Phalke Selection Jury has decided to award legendary actor, Sh. Mithun Chakraborty Ji for his iconic contribution to Indian Cinema.
🗓️To be presented at the 70th National…
ಸದ್ಯ 74 ವರ್ಷದ ಮಿಥುನ್ ಚಕ್ರವರ್ತಿ ಅವರು 1976ರಲ್ಲಿ ಭಾರತೀಯ ಚಿತ್ರರಂಗ ಪ್ರವೇಶಿಸಿದ್ದರು. ಖ್ಯಾತ ನಿರ್ದೇಶಕ ಮೃಣಾಲ್ ಸೇನ್ ಅವರ 'ಮೃಗಯಾ' ಸಿನಿಮಾ ಮೂಲಕ ನಟನಾ ವೃತ್ತಿ ಆರಂಭಿಸಿದ್ದರು. ಈ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ರಾಷ್ಟ್ರೀಯ ಉತ್ತಮ ನಟ ಪ್ರಶಸ್ತಿ ಒಲಿದು ಬಂದಿತ್ತು. ಬಳಿಕ 'ಡಿಸ್ಕೋ ಡ್ಯಾನ್ಸರ್', 'ಕಸಂ ಪೈದಾ ಕರ್ನೆ ವಾಲೆ ಕಿ', 'ಕಮ್ಯಾಂಡೋ', 'OMG: ಓ ಮೈ ಗಾಡ್' ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿಂದಿ ಅಷ್ಟೇ ಅಲ್ಲದೇ, ಬೆಂಗಾಳಿ ಚಿತ್ರರಂಗದಲ್ಲೂ ಇವರು ವಿಶೇಷ ಛಾಪು ಮೂಡಿಸಿದ್ದಾರೆ.
ಒಂದೇ ವರ್ಷದಲ್ಲಿ 19 ಸಿನಿಮಾ ಬಿಡುಗಡೆ ದಾಖಲೆ: ಮಿಥುನ್ ಚಕ್ರವರ್ತಿ ತಮ್ಮ ವಿಭಿನ್ನ ನಟನಾ ಕೌಶಲ್ಯ ಮತ್ತು ಶೈಲಿಯಿಂದ ದಶಕಗಳ ಕಾಲ ಅಭಿಮಾನಿಗಳನ್ನು ರಂಜಿಸಿದ್ದಾರೆ. ವಿಶೇಷವೆಂದರೆ, ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ 19 ಸಿನಿಮಾಗಳು 1989ರಲ್ಲಿ ಬಿಡುಗಡೆಯಾಗಿದ್ದವು. ಈ ಮೂಲಕ ಒಂದೇ ವರ್ಷದಲ್ಲಿ ಅತಿ ಹೆಚ್ಚು ಸಿನಿಮಾ ಬಿಡುಗಡೆಗೊಳಿಸಿ ದಾಖಲೆ ಬರೆದಿದ್ದರು. ಇದು ಲಿಮ್ಕಾ ದಾಖಲೆ ಪುಸ್ತಕ ಸೇರ್ಪಡೆಯಾಗಿತ್ತು. 80ರ ದಶಕದಲ್ಲಿ ಇವರ ಸಿನಿಮಾ ಹಾಡುಗಳಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದರು. ಜೊತೆಗೆ, ಇವರ ಅಭಿನಯದ ಸಿನಿಮಾಗಳು ಗ್ಯಾರಂಟಿ ಯಶಸ್ಸು ತಂದುಕೊಡುವಷ್ಟು ಭರವಸೆ ಮೂಡಿಸಿದ್ದವು.
ರಾಜಕೀಯ ಪ್ರವೇಶ: ಸಿನಿಮಾ ರಂಗದಲ್ಲಿ ಯಶಸ್ವಿಯಾದ ಬಳಿಕ ರಾಜಕೀಯದತ್ತ ಮಿಥುನ್ ಹೊರಳಿದ್ದಾರೆ. 2014ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭಾ ಸದಸ್ಯರಾಗಿ ಸಂಸತ್ ಪ್ರವೇಶಿಸಿದ್ದರು. ಆದರೆ ಎರಡು ವರ್ಷಗಳ ಬಳಿಕ ರಾಜೀನಾಮೆ ನೀಡಿದ್ದರು. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದರು.