ಕೋಲ್ಕತ್ತಾ( ಪಶ್ಚಿಮಬಂಗಾಳ): ಹಿರಿಯ ನಟ ಹಾಗೂ ರಾಜಕೀಯ ಮುಖಂಡ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು (ಫೆಬ್ರವರಿ 10, ಶನಿವಾರ) ಬೆಳಗ್ಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ನಟನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಟ, ಪಥಿಕೃತ್ ಬಸು ನಿರ್ದೇಶನದ 'ಶಾಸ್ತ್ರಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದರು.
ನಟನಿಗೆ ಇಂದು ಬೆಳಗ್ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಈ ಹಿನ್ನೆಲೆ ಯಾವುದೇ ನಿರ್ಲಕ್ಷ್ಯ ತೋರದೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇತ್ತೀಚೆಗೆ ನಟನಿಗೆ ಭಾರತದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಕೋಲ್ಕತ್ತಾದಲ್ಲಿ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ಸದ್ಯ ಹಲವು ದೈಹಿಕ ಪರೀಕ್ಷೆಗಳಿಗೆ ಒಳಗಾಗುತ್ತಿದ್ದಾರೆ.
ಡಿಸ್ಕೋ ಡ್ಯಾನ್ಸರ್, ಜಂಗ್, ಪ್ರೇಮ್ ಪ್ರತಿಜ್ಞಾ, ಪ್ಯಾರ್ ಜುಕ್ತಾ ನಹಿ, ಮತ್ತು ಮರ್ದ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿನ ಅಮೋಘ ಅಭಿನಯಕ್ಕೆ ಹೆಸರುವಾಸಿಯಾದ ಮಿಥುನ್ ಚಕ್ರವರ್ತಿ ಆರೋಗ್ಯದಲ್ಲಿ ಏರುಪೇರಾಗಿರೋ ಘಟನೆ ತಿಳಿದ ಅಪಾರ ಸಂಖ್ಯೆಯ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಮೆಚ್ಚಿನ ನಟನ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿದ್ದಾರೆ. ಬೆಳಗ್ಗೆ ಅಪೋಲೋ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಧಾವಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ನಟ ಹಠಾತ್ ಆಸ್ಪತ್ರೆಗೆ ದಾಖಲಾಗಿರುವುದು ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿದೆ. ಆರಂಭಿಕ ವರದಿಗಳ ಪ್ರಕಾರ, ಮಿಥುನ್ ಚಕ್ರವರ್ತಿ ಅವರು ಆಸ್ಪತ್ರೆಗೆ ದಾಖಲಾಗುವ ಮೊದಲು ಆರೋಗ್ಯವಾಗಿರಲಿಲ್ಲ. ಅದಾಗ್ಯೂ, ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಿಖರ ಮಾಹಿತಿ ನಿರೀಕ್ಷಿಸಲಾಗಿದೆ.
1976ರಲ್ಲಿ ಮಿಥುನ್ ಚಕ್ರವರ್ತಿ ಸಿನಿಪಯಣ ಪ್ರಾರಂಭವಾಯಿತು. 4 ದಶಕ ಪೂರ್ಣಗೊಂಡಿದ್ದು, ಐದನೇ ದಶಕದ ಸಮೀಪದಲ್ಲಿದೆ. ವೃತ್ತಿಜೀವನದ ಉದ್ದಕ್ಕೂ ಹಲವು ಸಾಧನೆ ಮಾಡಿದ್ದಾರೆ. ಭಾರತೀಯ ಚಿತ್ರರಂಗಕ್ಕೆ ನೀಡಿದ ಗಮನಾರ್ಹ ಕೊಡುಗೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸೇರಿದಂತೆ, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಭೇಟಿಯಾದ ಚಿರಂಜೀವಿ
ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಮಿಥುನ್ ಚಕ್ರವರ್ತಿ ಅವರಿಗೆ ಇತ್ತೀಚೆಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಲಾಗಿದೆ. ಇದು ಭಾರತ ಸರ್ಕಾರದಿಂದ ಕೊಡಮಾಡುವ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ. ಪ್ರತಿಷ್ಠಿತ ಪ್ರಶಸ್ತಿಯ ವಿಜೇತರ ಪಟ್ಟಿ ಹೊರಬಿದ್ದ ಬಳಿಕ, ಸಾಮಾಜಿಕ ಮಾಧ್ಯಮದ ಮೂಲಕ ಕೃತಜ್ಞತೆ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಜೂ.ಎನ್ಟಿಆರ್ ನಟನೆಯ 'ದೇವರ' ಸಿನಿಮಾಗೆ ಮತ್ತೋರ್ವ ನಟಿ ಎಂಟ್ರಿ
ಮನರಂಜನಾ ಉದ್ಯಮದಲ್ಲಿನ ತಮ್ಮ ಪ್ರಯಾಣದ ಉದ್ದಕ್ಕೂ ಅಪಾರ ಬೆಂಬಲ ಮತ್ತು ಪ್ರೀತಿ ನೀಡುತ್ತಾ ಬಂದಿರುವ ತಮ್ಮ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಈ ಪ್ರಶಸ್ತಿಯನ್ನು ಅರ್ಪಿಸಿದರು. ನಟನ ಮಾತುಗಳಲ್ಲಿ ಪ್ರಾಮಾಣಿಕತೆ ಮತ್ತು ನಮ್ರತೆ ಎದ್ದು ಕಂಡಿತ್ತು.