ಹೈದರಾಬಾದ್: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಮಗ ಗೌತಮ್ ಇದೀಗ ಅಪ್ಪನ ಹಾದಿಯಲ್ಲಿ ಸಾಗಲು ಮುಂದಾಗಿದ್ದಾರೆ. ಇದೇ ಮೊದಲ ಬಾರಿಗೆ ಲಂಡನ್ನಲ್ಲಿ ವೇದಿಕೆ ಮೇಲೆ ಬಣ್ಣ ಹಚ್ಚಿ ನಾಟಕದಲ್ಲಿ ಅಭಿನಯಿಸಿದ್ದಾರೆ. ಮಗ ಅಭಿನಯಕ್ಕೆ ಮುಂದಾಗಿರುವ ವಿಚಾರದ ಬಗ್ಗೆ ತಾಯಿ ನಮ್ರತಾ ಶಿರೋಡ್ಕರ್ ಸಂತಸ ವ್ಯಕ್ತಪಡಿಸಿದ್ದು, ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಮಗ ವೇದಿಕೆ ಮೇಲೆ ನಟನೆ ಮಾಡುತ್ತಿರುವುದನ್ನು ನೋಡಲು ಹೆಮ್ಮೆಯಾಗುತ್ತಿದೆ ಎಂದು ಸಂಭ್ರಮಿಸಿದ್ದಾರೆ.
ಗೌತಮ್ ನಾಟಕಾಭಿನಯದ ಬಳಿಕದ ಅನುಭವವನ್ನು ಹಂಚಿಕೊಂಡಿರುವ ನಮ್ರತಾ ಶಿರೋಡ್ಕರ್, ಆತನ ಅಭಿನಯವನ್ನು ಎಲ್ಲರೂ ಮೆಚ್ಚಿದ್ದು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದಿದ್ದಾರೆ. ಲಂಡನ್ನಲ್ಲಿ ಮಗ ರಂಗ ಪ್ರವೇಶದ ಕುರಿತು ಮಹೇಶ್ ಅಭಿಮಾನಿಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಕುಟುಂಬದೊಂದಿಗಿನ ಹಲವಾರು ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.
ಗೌತಮ್ನ ಮೊದಲ ನಾಟಕ ಪ್ರದರ್ಶನ ಅದ್ಬುತವಾಗಿತ್ತು. ಪ್ರತಿಯೊಬ್ಬರು ಆತನ ಅಭಿನಯವನ್ನು ಆಹ್ಲಾದಿಸಿದರು. ಲವ್ ಯೂ ಮಗನೇ ಎಂದಿರುವ ಅವರು, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು 'ಜಾಯ್ ಆಫ್ ಡ್ರಾಮಾ' ಸಂಘಟನೆ ವಿಶೇಷ ಬೇಸಿಗೆ ಕಾರ್ಯಕ್ರಮವನ್ನು ಆಯೋಜಿಸಿದೆ. ನನ್ನ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಾನು ಇಲ್ಲಿರುವುದು ಸಂತಸವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಗೌತಮ್ ನಟನೆಯನ್ನು ಕಣ್ತುಂಬಿಕೊಳ್ಳಲು ಮಹೇಶ್ ಬಾಬು, ಸಹೋದರಿ ಸಿತಾರಾ, ನಮ್ರತಾ ಸಹೋದರಿ ಶಿಲ್ಪಾ ಶಿರೋಡ್ಕರ್ ಮತ್ತು ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಈ ಸಂಬಂಧಿತ ಫೋಟೋಗಳು ಇದೀಗ ವೈರಲ್ ಆಗಿದೆ. ಇತ್ತೀಚಿಗೆ ಗೌತಮ್ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದು, ಈ ಕುರಿತು ಖುಷಿಯನ್ನು ಕೂಡ ಈ ತಾರಾ ದಂಪತಿ ಹಂಚಿಕೊಂಡಿದ್ದರು. ಇದಕ್ಕೂ ಮುನ್ನ ಮಗ ಉನ್ನತ ಶಿಕ್ಷಣಕ್ಕೆ ನ್ಯೂಯಾರ್ಕ್ ಯೂನಿವರ್ಸಿಟಿಗೆ ತೆರಳಿದ್ದರ ಕುರಿತು ಕೂಡ ಅವರು ಮಾಹಿತಿ ಹಂಚಿಕೊಂಡಿದ್ದರು.
2005ರಲ್ಲಿ ಮದುವೆಯಾದ ಈ ತಾರಾ ದಂಪತಿ 2006ರಲ್ಲಿ ಗೌತಮ್ ಗಟ್ಟಿಮನೇನಿಯ ಪೋಷಕರಾಗಿ ಬಡ್ತಿ ಪಡೆದಿದ್ದರು. ಮಗ ಹಾಗೂ ಮಗಳ ಕುರಿತು ಹಲವು ವಿಷಯಗಳ ಕುರಿತು ವಿಶೇಷ ಸಂಗತಿಗಳನ್ನು ಈ ದಂಪತಿಗಳು ಆಗಾಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ.
ಗೌತಮ್ ಈಗಾಗಲೇ ಬಾಲ ನಟನಾಗಿ ಮಹೇಶ್ ಬಾಬು ಅವರ '1 ನೆನೊಕ್ಕಡಿನೆ' ಚಿತ್ರದಲ್ಲಿ ಮಿಂಚಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ನಟನೆಯ ಮೂಲಕ ನಾಟಕ ರಂಗ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: ರಾಜಮೌಳಿ-ಮಹೇಶ್ ಬಾಬು ಸಿನಿಮಾ ಸುತ್ತ ಅಂತೆಕಂತೆಗಳ ಸಂತೆ: ಏನದು? ಪ್ರೊಡಕ್ಷನ್ ಹೌಸ್ ಹೇಳಿದ್ದಿಷ್ಟು