ಬೆಂಗಳೂರು: ಸಿನಿಮಾ ನಿರ್ದೇಶಕನಾಗುವ ಕನಸು ಕಾಣುವವರು ಮೊದಲು ಕಿರುಚಿತ್ರದ ಮೂಲಕ ತಮ್ಮ ಪ್ರತಿಭೆ ಅನಾವರಣಗೊಳಿಸುತ್ತಾರೆ. ಅವುಗಳಲ್ಲಿ ಕೆಲವು ಕಿರುಚಿತ್ರಗಳು ಮನಸ್ಸಿಗೆ ನಾಟುವುದೂ ಉಂಟು. ಅಂತಹ ಮನಸ್ಸಿಗೆ ಹತ್ತಿರವಾಗುವ ವಿಭಿನ್ನ ಕಿರುಚಿತ್ರವೊಂದು ಇತ್ತೀಚೆಗೆ ಬಿಡುಗಡೆಯಾಗಿದೆ. ಅದೇ ಕನ್ನಡ ಕಿರುತೆರೆ ಖ್ಯಾತಿಯ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಕಲಾವಿದರಾದ ಪವನ್ ಕುಮಾರ್ ಹಾಗೂ ಸಂಜನಾ ಬುರ್ಲಿ ಜೋಡಿಯಾಗಿ ಅಭಿನಯಿಸಿರುವ, ಹೊಸ ಪ್ರತಿಭೆ ಶ್ರೀಗಣೇಶ್ ನಿರ್ದೇಶನದ 'ಲವ್ ರೀಸೆಟ್'.

ಕಿರುಚಿತ್ರದ ಪ್ರೀಮಿಯರ್ ಶೋ ನಡೆಸಿರುವ ಚಿತ್ರತಂಡ ಚಿತ್ರದ ಅನುಭವವನ್ನು ಹಂಚಿಕೊಂಡಿದೆ. ಪ್ರೀಮಿಯರ್ ಶೋಗೆ ಆಗಮಿಸಿದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತಂಡದವರು, ಬಿಗ್ ಬಾಸ್ ಖ್ಯಾತಿಯ ಸ್ನೇಹಿತ್, ಭೂಮಿ ಶೆಟ್ಟಿ, ರಮೇಶ್ ಪಂಡಿತ್, ಕಲಾಗಂಗೋತ್ರಿ ಮಂಜು, ಪದ್ಮಕಲಾ ಸೇರಿದಂತೆ ಅನೇಕ ಗಣ್ಯರು ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.
ಪ್ರೀಮಿಯರ್ ಶೋ ನಂತರ ಮಾತನಾಡಿದ ನಟ ಪವನ್ ಕುಮಾರ್, "ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ನನ್ನ ಮುರಳಿ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಸಿನಿಮಾದಲ್ಲೂ ನಟಿಸುವ ಆಸೆಯಿದೆ. ಈ ಕಿರುಚಿತ್ರದಲ್ಲಿ ನನ್ನ ಪಾತ್ರದ ಹೆಸರು ಅಮರ್. ಪ್ರೀತಿ ಹಾಗೂ ಕೆರಿಯರ್ ವಿಷಯ ಬಂದಾಗ ಹುಡುಗ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಎಂಬುದನ್ನು ನಿರ್ದೇಶಕರು ಇದರಲ್ಲಿ ತೋರಿಸಿದ್ದಾರೆ" ಎಂದರು.

ನಂತರ ನಾಯಕಿ ಸಂಜನಾ ಬುರ್ಲಿ ಮಾತನಾಡಿ, "ಕಥೆ ಬಹಳ ಡಿಫರೆಂಟ್ ಆಗಿದೆ. ನನ್ನ ಪಾತ್ರ ಕೂಡ ಚೆನ್ನಾಗಿದೆ. ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತದೆ" ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ನಿರ್ದೇಶಕ ಶ್ರೀಗಣೇಶ್, "ನಾನು ಮೂಲತಃ ಐಟಿ ಉದ್ಯೋಗಿ. ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಅದರ ಪೂರ್ವಭಾವಿಯಾಗಿ ಈ ಕಿರುಚಿತ್ರ ಮಾಡಿದ್ದೇನೆ. ಇದೊಂದು ಪ್ರೇಮ ಕಥಾನಕ. ಈಗಿನ ಪ್ರೇಮಿಗಳ ಮನಸ್ಥಿತಿಯನ್ನು 25 ನಿಮಿಷಗಳಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಈ ಕಿರುಚಿತ್ರದಲ್ಲಿ ವಿ. ನಾಗೇಂದ್ರ ಪ್ರಸಾದ್ ಬರೆದಿರುವ "ಅನುರಾಗದ ನೆನಪೀಗ ಕೊನೆಯಾಗಲಿ' ಎಂಬ ಸುಂದರವಾದ ಹಾಡೊಂದಿದೆ. ಸರಿಗಮಪ ಖ್ಯಾತಿಯ ಸುನೀಲ್, ಅನನ್ಯ ಪ್ರಕಾಶ್ ದನಿಯಾಗಿರುವ ಈ ಹಾಡಿಗೆ ಜೋಯಲ್ ಹಾಗೂ ಅಭಿಲಾಷ್ ಸಂಗೀತ ನೀಡಿದ್ದಾರೆ. ಈ ಹಾಡು A2 music ಮೂಲಕ ಮೊದಲೆ ಬಿಡುಗಡೆಯಾಗಿತ್ತು. 7 ಶೇಡ್ಸ್ ಯೂಟ್ಯೂಬ್ ಚಾನೆಲ್ನಲ್ಲಿ ಕಿರುಚಿತ್ರ ಬಿಡುಗಡೆ ಮಾಡಿದ್ದೇವೆ" ಎಂದು ತಿಳಿಸಿದರು.
- " class="align-text-top noRightClick twitterSection" data="">
ಈ ಚಿತ್ರಕ್ಕೆ ಪ್ರಜ್ವಲ್ ಭಾರದ್ವಾಜ್ ಛಾಯಾಗ್ರಾಹಣವಿದ್ದು, ರಂಜಿತ್ ಶಂಕರೇಗೌಡ ಸಹ ನಿರ್ದೇಶನವಿದೆ. ವಿಭಿನ್ನ ಕಾನ್ಸೆಪ್ಟ್ ಹೊಂದಿರುವ 'ಲವ್ ರೀಸೆಟ್' ಸಿನಿಪ್ರಿಯರನ್ನು ಆಕರ್ಷಿಸುತ್ತಿದೆ.
ಇದನ್ನೂ ಓದಿ: ಅಜಯ್ ರಾವ್ ಬರ್ತ್ಡೇಗೆ ಸ್ಪೆಷಲ್ ಗಿಫ್ಟ್: 'ಧೈರ್ಯಂ' ನಿರ್ದೇಶಕರ ಜೊತೆ ಸಿನಿಮಾ ಘೋಷಣೆ