ಅಭಿಮಾನಿಗಳ ಯುವರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಎರಡೂವರೆ ವರ್ಷ. ಆದರೆ ಈ ನಗುವಿನೊಡೆಯನ ನೆನಪು ಮಾತ್ರ ಸದಾ ಜೀವಂತ. ಚಿತ್ರರಂಗದ ಎಲ್ಲಾ ಹಿರಿ, ಕಿರಿಯ ಕಲಾವಿದರೊಂದಿಗೆ ಅಪ್ಪು ಆತ್ಮೀಯರಾಗಿದ್ದರು. ಬೆಳ್ಳಿತೆರೆ ಮೇಲೆ ನಕ್ಷತ್ರದಂತೆ ಮಿಂಚಿ ಮರೆಯಾಗಿರುವ ಪುನೀತ್ ನಿರ್ವಹಿಸಿದ ಪಾತ್ರಗಳೆಲ್ಲವೂ ವಿಭಿನ್ನವಾಗಿತ್ತು.
ಕೇವಲ 46ನೇ ವರ್ಷಕ್ಕೆ ಹೃದಯಾಘಾತದಿಂದ ಅಭಿಮಾನಿಗಳನ್ನು ಅಗಲಿದ ಪುನೀತ್ ಬಾಲ ನಟನಾಗಿ, ನಾಯಕ ನಟನಾಗಿ ವಿಭಿನ್ನ ಅಭಿನಯದ ಮೂಲಕ ಉತ್ತಮ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ಕನ್ನಡ ಚಿತ್ರಪ್ರೇಮಿಗಳ ಮನ ಗೆದ್ದಿದ್ದರು. ನಟ, ಗಾಯಕ, ಆ್ಯಕ್ಷನ್ ಸ್ಟಾರ್, ಡ್ಯಾನ್ಸರ್ ಆಗಿ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚಿಸುವ ಜೊತೆಗೆ ಸಮಾಜಕ್ಕೆ ಆದರ್ಶವಾಗುವ ಪಾತ್ರಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು.
ಪುನೀತ್ ರಾಜ್ಕುಮಾರ್ ನಾಯಕನಟನಾಗಿ 2002ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಬಾಲನಟನಾಗಿದ್ದ ಪುನೀತ್, 'ಅಪ್ಪು' ಚಿತ್ರದಿಂದ ಬೆಳ್ಳಿತೆರೆ ಮೇಲೆ ನಾಯಕ ನಟನಾಗಿ ಪರಿಚಯಗೊಂಡರು. ನಂತರದ 19 ವರ್ಷದ ಸಿನಿ ಪಯಣದಲ್ಲಿ ಇತಿಹಾಸವನ್ನೇ ಸೃಷ್ಟಿಸಿದರು. ಪುನೀತ್ ಅವರಿಗೆ ಮನೆಯಲ್ಲಿ ಕರೆಯುತ್ತಿದ್ದ ಹೆಸರು ಅಪ್ಪು. ಇದೇ ಹೆಸರನ್ನೇ ಅವರು ನಾಯಕರಾಗಿ ಅಭಿನಯಿಸಿದ್ದ ಚೊಚ್ಚಲ ಚಿತ್ರಕ್ಕೂ ಇಡಲಾಯಿತು.
2002ರಲ್ಲಿ ತೆರೆಕಂಡ ಪುರಿ ಜಗನ್ನಾಥ್ ನಿರ್ದೇಶನದ ಅಪ್ಪು ಸಿನಿಮಾ ಮೂಲಕ ಪವರ್ ಸ್ಟಾರ್ ಸೆಂಚುರಿ ಬಾರಿಸುವ ಮೂಲಕ ಕನ್ನಡ ಚಿತ್ರರಂಗದ ದೊಡ್ಮನೆ ಹುಡುಗ ಎಂದು ಸಾಬೀತುಪಡಿಸಿದರು. ಮೊದಲ ಸಿನಿಮಾದಲ್ಲೇ ಭರ್ಜರಿ ಡ್ಯಾನ್ಸ್ ಮೂಲಕ ಗಮನ ಸೆಳೆದರು. 200 ದಿನಗಳ ನಿರಂತರ ಪ್ರದರ್ಶನ ಕಾಣುವಲ್ಲಿ ಅಪ್ಪು ಚಿತ್ರ ಯಶಸ್ವಿಯಾಯಿತು. ಬಳಿಕ ನಟಿಸಿದ್ದು 'ಅಭಿ' ಚಿತ್ರದಲ್ಲಿ. ನೈಜ ಕಥೆಯಾಧಾರಿತ ಅಭಿ ಸಿನಿಮಾದಲ್ಲಿ ಕಾಲೇಜ್ ಹುಡುಗನಾಗಿ ಪುನೀತ್ ರಾಜ್ಕುಮಾರ್ ಮಿಂಚಿದ್ದರು.
ಬಳಿಕ ತೆರೆಕಂಡ ವೀರ ಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ, ಅಜಯ್, ಅರಸು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ನಂಬರ್ ಒನ್ ಸ್ಟಾರ್ ಪಟ್ಟ ಅಲಂಕರಿಸಿದರು. ಪುನೀತ್ ಅಭಿನಯಿಸಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದರೂ ವಂಶಿ, ರಾಮ್, ಪೃಥ್ವಿ, ಜಾಕಿ, ಹುಡುಗರು, ಪರಮಾತ್ಮ, ಮಿಲನ, ಅಣ್ಣಾ ಬಾಂಡ್, ಯಾರೇ ಕೂಗಾಡಲಿ, ನಿನ್ನಂದಲೇ, ರಣವಿಕ್ರಮ, ಚಕ್ರವ್ಯೂಹ, ಅಂಜನೀಪುತ್ರ, ರಾಜಕುಮಾರ, ಯುವರತ್ನ, ಜೇಮ್ಸ್ ಹಾಗು ಗಂಧದ ಗುಡಿ ಚಿತ್ರಗಳು ದಿ ಬೆಸ್ಟ್ ಸಿನಿಮಾಗಳಾಗಿ ಉಳಿದುಕೊಂಡಿವೆ.
ಬೆಳ್ಳಿತೆರೆ ಮಾತ್ರವಲ್ಲ, ಕಿರುತೆರೆಯಲ್ಲೂ ಪುನೀತ್ ತಮ್ಮದೇ ಆದ ಛಾಪು ಮೂಡಿಸಿದ್ದರು. ಕನ್ನಡದ ಕೋಟ್ಯಧಿಪತಿ ಮತ್ತು ಫ್ಯಾಮಿಲಿ ಪವರ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಕೆಎಂಎಫ್ ಸೇರಿದಂತೆ ಕೆಲ ಬ್ರ್ಯಾಂಡ್ಗಳಿಗೆ ರಾಯಭಾರಿ ಕೂಡ ಆಗಿದ್ದರು.
2009ರಲ್ಲಿ ತೆರೆಕಂಡ ಪೃಥ್ವಿ ಸಿನಿಮಾದಲ್ಲಿ ಬಳ್ಳಾರಿ ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಹೋರಾಡುವ ಜಿಲ್ಲಾಧಿಕಾರಿ ಪಾತ್ರದಲ್ಲಿ ಪುನೀತ್ ಮಿಂಚಿದ್ದರು. ಅಲ್ಲಿಯವರೆಗೂ ಕೌಟುಂಬಿಕ ಹಾಗೂ ಮನರಂಜನೆಯ ಆಧಾರಿತ ಸಿನಿಮಾ ನೀಡುತ್ತಾ ಬಂದಿದ್ದ ಅಪ್ಪು, ಒಂದು ಸಾಮಾಜಿಕ ಕಳಕಳಿ ವ್ಯಕ್ತಪಡಿಸುವ ಪಾತ್ರಕ್ಕೆ ಜೀವ ತುಂಬಿದ್ದರು. 2015ರಲ್ಲಿ ತೆರೆಗೆ ಬಂದ 'ಮೈತ್ರಿ' ಚಿತ್ರ ಸಹ ಸಮಾಜದ ತಪ್ಪನ್ನು ತಿದ್ದುವ ಪಾತ್ರವನ್ನು ನೀಡಿತ್ತು. ಇದರಲ್ಲಿ ವೈದ್ಯಕೀಯ ಕ್ಷೇತ್ರದ ಅಕ್ರಮವನ್ನು ಬಯಲಿಗೆಳೆಯುವ ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ: ಕನ್ನಡಿಗರ 'ಪರಮಾತ್ಮ'ನ ಜನ್ಮದಿನ: ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಅಪ್ಪು
ಕೊನೆಯ ದಿನಗಳಲ್ಲಿ ನಟಿಸಿದ್ದ ಯುವರತ್ನ ಹಾಗೂ ಜೇಮ್ಸ್ ಚಿತ್ರಗಳಲ್ಲಿ ಡ್ರಗ್ಸ್ ಮಹಾಮಾರಿ ವಿರುದ್ಧ ಹೋರಾಡುವ ಪಾತ್ರದಲ್ಲಿ ಪವರ್ ಸ್ಟಾರ್ ಅಭಿಮಾನಿಗಳ ಮನಸ್ಸು ಕದಿದ್ದರು. ಬಾಲ ನಟನಾಗಿ, ನಾಯಕ ನಟನಾಗಿ ಇದುವರೆಗೂ ಪುನೀತ್ ನಟಿಸಿರುವ ಸಿನಿಮಾಗಳ ಸಂಖ್ಯೆ ಸುಮಾರು 44. ಕೆಲವು ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: ನಟನೆಯ ಜೊತೆಗೆ ಗಾಯನದ ಮೂಲಕವೂ ಕನ್ನಡಿಗರ ಮನ ಗೆದ್ದ ಅಪ್ಪು
ಪವರ್ ಸ್ಟಾರ್ಗೆ ವಿಭಿನ್ನ ಪಾತ್ರಗಳಲ್ಲಿ ನಟಿಸುವುದೆಂದರೆ ಬಹಳ ಇಷ್ಟ. ಓರ್ವ ನಟನಾಗಿ ಭಿನ್ನ ಪಾತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಇರುತ್ತದೆ ಎಂದು ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಜೊತೆಗೆ ಹುಚ್ಚನ ಪಾತ್ರ, ವಿಲನ್ ಮತ್ತು ಎಕ್ಸ್ಪರಿಮೆಂಟಲ್ ಪಾತ್ರಗಳಲ್ಲಿ ಅಭಿನಯಿಸುವ ಆಸೆಯನ್ನು ವ್ಯಕ್ತಪಡಿಸಿದ್ದರು. ಆದ್ರೆ ವಿಧಿಯಾಟದ ಮುಂದೆ ಅವರ ಈ ಆಸೆಗಳು ಈಡೇರಲಿಲ್ಲ. ಇನ್ನೂ, ಇಂದು ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಸಾವಿರಾರು ಅಭಿಮಾನಿಗಳಿಂದ ಪೂಜೆ ಜೊತೆ ರಕ್ತದಾನ ಹಾಗು ಅನ್ನದಾನ ನಡೆಯುತ್ತಿದೆ.