2024ರ 'ವಿಶ್ವ ಸುಂದರಿ'ಯಾಗಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಹೊರಹೊಮ್ಮಿದ್ದಾರೆ. ಮುಂಬೈನಲ್ಲಿ ಶನಿವಾರ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಕ್ರಿಸ್ಟಿನಾ ಅವರನ್ನು 2024ರ ಮಿಸ್ ವರ್ಲ್ಡ್ ಎಂದು ಘೋಷಿಸಲಾಯಿತು. 28 ವರ್ಷಗಳ ಸುದೀರ್ಘ ಸಮಯದ ಬಳಿಕ ಭಾರತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ನಿನ್ನೆ ಕೊನೆಯ ದಿನದ ಸಮಾರಂಭ ಅದ್ಧೂರಿಯಾಗಿ ಜರುಗಿತು. ಪೋಲೆಂಡ್ನ ವಿಶ್ವ ಸುಂದರಿ ಕರೋಲಿನಾ ಬಿಲಾಸ್ಕಾ ಅವರು ಕ್ರಿಸ್ಟಿನಾ ಪಿಸ್ಕೋವಾ ಅವರಿಗೆ ಈ ಸಾಲಿನ ವಿಶ್ವ ಸುಂದರಿ ಕಿರೀಟ ತೊಡಿಸಿದರು. ಲೆಬನಾನ್ ಸುಂದರಿ ಯಾಸ್ಮಿನಾ ಜೈಟೌನ್ ಮೊದಲ ರನ್ನರ್ ಅಪ್ ಆದರು. ಭಾರತ ಪ್ರತಿನಿಧಿಸಿದ ಕನ್ನಡತಿ ಸಿನಿ ಶೆಟ್ಟಿ ಟಾಪ್ 8ರಲ್ಲಿ ಸ್ಥಾನ ಪಡೆದರು.
ಅಂತಿಮ ಹಂತದಲ್ಲಿ, ಟಾಪ್ 4 ಸ್ಪರ್ಧಿಗಳು ಮುಂದಿನ ವಿಶ್ವ ಸುಂದರಿಯಾಗಿ ತಮ್ಮ ಗುರಿಗಳನ್ನು "ಶಾರ್ಕ್ ಆಫ್ ಶಾರ್ಕ್ ಟ್ಯಾಂಕ್ ಇಂಡಿಯಾ"ಗೆ ಪ್ರಸ್ತುತಪಡಿಸಬೇಕಾಗಿತ್ತು. ಸ್ಪರ್ಧಿಗಳಿಗೆ ತಮ್ಮ ಐಡಿಯಾಗಳನ್ನು ಹೇಳಲು ಕೇವಲ 60 ಸೆಕೆಂಡು ಸಮಯವಿತ್ತು. ಫಿಲಿಪ್ಪೀನ್ಸ್‌ನ 2013ರ ವಿಶ್ವ ಸುಂದರಿ ಮೇಗನ್ ಯಂಗ್ ಈ ರೌಂಡ್ ನಡೆಸಿಕೊಟ್ಟಿದ್ದು (ಕೋ ಹೋಸ್ಟ್), ಸ್ಪರ್ಧಿಗಳನ್ನು ಪರಿಚಯಿಸಿದರು.
ಟಾಪ್ ನಾಲ್ಕು ಸ್ಪರ್ಧಿಗಳಲ್ಲಿ ಓರ್ವರಾಗಿದ್ದ ಕ್ರಿಸ್ಟಿನಾ ಪಿಸ್ಕೋವಾ, ತೀರ್ಪುಗಾರರನ್ನು ಮತ್ತು ಪ್ರೇಕ್ಷಕರನ್ನು ಉದ್ದೇಶಿಸಿ ಮಾತು ಆರಂಭಿಸಿ, "ಭರವಸೆ ಮತ್ತು ಕನಸುಗಳನ್ನು ಹೊಂದಿರುವ ಪುಟ್ಟ ಮಗುವಿನಂತೆ ನಿಮ್ಮನ್ನು ನೀವು ಪರಿಗಣಿಸಿ. ಆದರೆ, ದಿನ ಕಳೆದಂತೆ ನಿಮ್ಮ ಕನಸುಗಳು ದೂರವಾಗುತ್ತವೆ. ಈಗ ನಿಮ್ಮನ್ನು ನೀವು ಪೋಷಕರಂತೆ ಚಿತ್ರಿಸಿಕೊಳ್ಳಿ. ನಿಮ್ಮ ಮಗುವನ್ನು ನೀವು ಅದೇ ಅಗ್ನಿಪರೀಕ್ಷೆಗೆ ಒಳಪಡಿಸಬೇಕು. ಅವರೂ ಕೂಡ ವಯಸ್ಸಾದಂತೆ, ಅವರ ಕನಸುಗಳೂ ದೂರವಾಗುತ್ತವೆ. ಏಕೆಂದರೆ, ಮಕ್ಕಳು ತಮ್ಮ ಗುರಿಗಳನ್ನು ಅನುಸರಿಸಲು ಅಗತ್ಯವಿರುವ ಶಿಕ್ಷಣ ಹೊಂದಿಲ್ಲ. 2024ರ ಹೊತ್ತಿಗೆ ಜಾಗತಿಕವಾಗಿ 250 ಮಿಲಿಯನ್ ಯುವಕರು ಶಾಲೆಗೆ ಹೋಗಿಲ್ಲ ಎಂಬುದು ಸತ್ಯಾಂಶ. ಆ ಕಾರಣಕ್ಕಾಗಿ, ನನ್ನ ಜೀವನದ ಗುರಿ ಉನ್ನತ ದರ್ಜೆಯ ಶಿಕ್ಷಣವನ್ನು ನೀಡುವುದಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ 'ವಿಶ್ವ ಸುಂದರಿ' ಕಿರೀಟ, ಕನ್ನಡತಿ ಸಿನಿ ಶೆಟ್ಟಿಗೆ ನಿರಾಸೆ
ಮಾತು ಮುಂದುವರಿಸಿ, "ಪ್ರತೀ ಮಗುವಿಗೂ ಶಿಕ್ಷಣ ಪಡೆಯುವ ಮೂಲಭೂತ ಹಕ್ಕಿದೆ ಎಂದು ನಾನು ಭಾವಿಸುತ್ತೇನೆ. ನಾನು ಆ ಮಕ್ಕಳಿಗಾಗಿ ಮಾತನಾಡಲು ಇಲ್ಲಿದ್ದೇನೆ. ನಾನು ಇದನ್ನು ಬಹಳ ಸಮಯದಿಂದ ಮಾಡಿಕೊಂಡು ಬಂದಿದ್ದೇನೆ. ಸ್ಪರ್ಧೆಗಳಲ್ಲಿ ನನ್ನನ್ನು ತೊಡಗಿಸಿಕೊಂಡಿದ್ದಕ್ಕಿಂತ ಹೆಚ್ಚು ಈ ವಿಚಾರವಾಗಿ ಕೆಲಸ ಮಾಡಿದ್ದೇನೆ. ನಾನು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಗೆದ್ದರೂ ಅಥವಾ ಸೋತರೂ, ನಾನಿದನ್ನು ಮನಸ್ಪೂರ್ವಕವಾಗಿ ಮಾಡುತ್ತೇನೆ'' ಎಂದರು.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸಮಾರಂಭ: ಲೈವ್ ವೀಕ್ಷಣೆಯ ಸಮಯ ಯಾವುದು?
ಸ್ಪರ್ಧಿಯ ಈ ಉತ್ತರ ವ್ಯಾಪಕ ಮೆಚ್ಚುಗೆಗೆ ಒಳಗಾಯಿತು. 24ರ ಹರೆಯದ ಈ ಚೆಲುವೆ ತಮ್ಮ ಉತ್ತರಕ್ಕಾಗಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡರು. ಹಿಂದುಳಿದ ಮಕ್ಕಳಿಗೆ ಕಲಿಯುವ ಅವಕಾಶ ಒದಗಿಸುವುದು 2024ರ ವಿಶ್ವಸುಂದರಿ ಕ್ರಿಸ್ಟಿನಾ ಪಿಸ್ಕೋವಾ ಅವರ ಗುರಿಯಾಗಿದೆ.