'ಭೂಲ್ ಭುಲೈಯ್ಯಾ 3', ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಭೂಲ್ ಭುಲೈಯ್ಯಾ 3 ಪ್ರಮೋಶನ್ನಲ್ಲಿ ಸಖತ್ ಬ್ಯುಸಿಯಾಗಿರುವ ನಾಯಕ ನಟ ಇಂದು ಎಕಾನಮಿ ಕ್ಲಾಸ್‌ನಲ್ಲಿ ಜೈಪುರಕ್ಕೆ ವಿಮಾನ ಪ್ರಯಾಣ ಕೈಗೊಂಡರು. ಅಲ್ಲಿದ್ದ ಅಭಿಮಾನಿಗಳು ನಟನನ್ನು ಸುತ್ತುವರೆದರು. ನಗುಮೊಗದಲ್ಲಿ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ ನಟ, ಸೆಲ್ಫಿಗೆ ಪೋಸ್ ಕೂಡಾ ಕೊಟ್ಟರು. ಬಾಲಿವುಡ್ ಯಂಗ್ ಹೀರೋ ಜೊತೆಗೆ ಚಿತ್ರದ ನಿರ್ಮಾಪಕ ಭೂಷಣ್ ಕುಮಾರ್ ಕೂಡಾ ಇದ್ದರು.
ಭೂಲ್ ಭುಲೈಯ್ಯಾ 3ರ ಬಹು ನಿರೀಕ್ಷಿತ ಟ್ರೇಲರ್ ಇಂದು ರಾಜಸ್ಥಾನದ ಜೈಪುರದಲ್ಲಿ ನಡೆಯುವ ಅದ್ದೂರಿ ಸಮಾರಂಭದಲ್ಲಿ ಚಿತ್ರತಂಡ ಅನಾವರಣಗೊಳಿಸಲಿದೆ. ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೊತೆ ವಿದ್ಯಾ ಬಾಲನ್, ತೃಪ್ತಿ ದಿಮ್ರಿ, ರಾಜ್‌ಪಾಲ್ ಯಾದವ್ ಮತ್ತು ರಾಜೇಶ್ ಶರ್ಮಾ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಭೂಲ್ ಭುಲೈಯಾ 2ರ ಯಶಸ್ಸಿನ ನಂತರ ಬರುತ್ತಿರುವ ಈ ಚಿತ್ರವನ್ನು ಅನೀಸ್ ಬಾಜ್ಮಿ ನಿರ್ದೇಶಿಸಿದ್ದಾರೆ. ಸೈಕಲಾಜಿಕಲ್ ಹಾರರ್ ಕಾಮಿಡಿ ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ.
"ನಾವು ಫ್ರೆಶ್ ಕಥೆ ಮತ್ತು ಎಂಟರ್ಟೈನ್ಮೆಂಟ್ ಕೊಡೋ ಉದ್ದೇಶದಿಂದ ಹಾರರ್ ಕಾಮಿಡಿ ಜಾನರ್ನ ಬೌಂಡರಿಗಳನ್ನು ದಾಟಿದ್ದೇವೆ" ಎಂದು ನಿರ್ದೇಶಕ ಅನೀಸ್ ಬಾಜ್ಮೀ ಇತ್ತೀಚೆಗೆ ಮಾಧ್ಯಮಗಳಲ್ಲಿ ತಿಳಿಸಿದ್ದರು. ವಿಶಿಷ್ಟ ಸಿನಿಮೀಯ ಅನುಭವವನ್ನು ಪ್ರೇಕ್ಷಕರಿಗೆ ನೀಡುವ ತಮ್ಮ ಬದ್ಧತೆಯನ್ನೂ ಒತ್ತಿ ಹೇಳಿದ್ದರು. ತಮ್ಮ ಪ್ರತಿಭಾವಂತ ಕಲಾವಿದರು ಮತ್ತು ಸಿಬ್ಬಂದಿಯ ಕೆಲಸವನ್ನೂ ಶ್ಲಾಘಿಸಿದ್ದರು. ಅವರೊಂದಿಗೆ ಕೆಲಸ ಮಾಡೋದು ಒಂದೊಳ್ಳೆ ಅನುಭವ ಎಂದ ನಿರ್ದೇಶಕರು ಪ್ರೇಕ್ಷಕರು ಈ ಸಿನಿಮಾವನ್ನು ಎಂಜಾಯ್ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಚಿತ್ರೀಕರಣ ಪ್ರಾರಂಭವಾಗುವ ಕೆಲವೇ ದಿನಗಳ ಮೊದಲು ನಿರ್ದೇಶಕರ ಕಾಲಿಗೆ ಪೆಟ್ಟಾಗಿತ್ತು. ಗಾಯದ ನೋವಿನಿಂದ ಬಳಲುತ್ತಿದ್ದರೂ ಕೂಡಾ ಅನೀಸ್ ಬಾಜ್ಮಿ ಅವರು ಈ ಮೊದಲೇ ನಿರ್ಧರಿಸಿದ ದಿನಾಂಕಕ್ಕೆ ಚಿತ್ರೀಕರಣ ಪ್ರಾರಂಭಿಸಲು ನಿರ್ಧರಿಸಿದರು. "ನಾನು ಶೂಟಿಂಗ್ ವಿಳಂಬ ಮಾಡಿದ್ದರೆ, ನಾವು ಸಮಯವನ್ನು ಕಳೆದುಕೊಳ್ಳುತ್ತಿದ್ದೆವು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ಪಡೆದು ರಿಷಬ್ ಶೆಟ್ಟಿ, ಪ್ರಶಾಂತ್ ನೀಲ್ ಸ್ಮರಿಸಿದ ವಿಜಯ್ ಕಿರಗಂದೂರು
ಭೂಷಣ್ ಕುಮಾರ್, ಕ್ರಿಶನ್ ಕುಮಾರ್ ಮತ್ತು ಮುರಾದ್ ಖೇತಾನಿ ನಿರ್ಮಾಣದ ಭೂಲ್ ಭುಲೈಯ್ಯಾ 3 ದೀಪಾವಳಿಗೆ ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದಲ್ಲಿ ಜನಪ್ರಿಯ ನಟಿ ವಿದ್ಯಾಬಾಲನ್ ಮಂಜುಲಿಕಾ ಪಾತ್ರವನ್ನು ಮುಂದುವರಿಸಲಿದ್ದಾರೆ.
ಇದನ್ನೂ ಓದಿ: ನಿನ್ನೆ ಪ್ರೀತಿ, ಇಂದು ಮುನಿಸು: ಬಿಗ್ ಬಾಸ್ ಮನೆಯಲ್ಲಿ ಗೊಬ್ಬರ, ಮನಸ್ಸುಗಳೂ ಗೊಬ್ಬರ? ಎಲ್ಲರೂ ನಾಮಿನೇಟ್
ಟ್ರೇಲರ್ ಬಿಡುಗಡೆಗೂ ಮುನ್ನ, ನಿರ್ಮಾಪಕರು ಹಾಂಟೆಡ್ ಪ್ಯಾಲೆಸ್, ರಕ್ತ-ಸಿಕ್ತ ಬಾಗಿಲುಗಳನ್ನು ಚಿತ್ರಿಸುವ ಪೋಸ್ಟರ್ ಸೇರಿದಂತೆ ಇಂಟ್ರೆಸ್ಟಿಂಗ್ ಪ್ರಮೋಶನಲ್ ಕಂಟೆಂಟ್ಗಳೊಂದಿಗೆ ಸಿನಿಪ್ರಿಯರ ಕುತೂಹಲ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟೀಸರ್ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ವಿದ್ಯಾ ಬಾಲನ್ ನಡುವಿನ ಥ್ರಿಲ್ಲಿಂಗ್ ಮುಖಾಮುಖಿಯ ಭರವಸೆ ನೀಡಿದೆ. ಒಟ್ಟಾರೆ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ.