ಒಳ್ಳೆ ಕಥೆ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಇರುವ ಚಿತ್ರಗಳನ್ನು ನೀಡಿದ್ರೆ ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬುದು ಆಗಾಗ ಪ್ರೂವ್ ಆಗುತ್ತಲೇ ಇದೆ. ಇದಕ್ಕೆ ಪೂರಕವಾಗಿ ಎಂಬಂತೆ ನಟ ದೀಕ್ಷಿತ್ ಶೆಟ್ಟಿ ಹಾಗೂ ಚೈತ್ರಾ ಆಚಾರ್ ಸಿನಿಮಾವನ್ನು ಸಿನಿಮಾ ಪ್ರೇಮಿಗಳು ಮೆಚ್ಚಿಕೊಳ್ಳುವ ಮೂಲಕ ಹಾಫ್ ಸೆಂಚುರಿ ಬಾರಿಸಿದೆ. ಇದು ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಈ ಕ್ಷಣಗಳನ್ನು ಚಿತ್ರತಂಡ ಹಂಚಿಕೊಂಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ನಿರ್ಮಾಪಕ ರವಿಚಂದ್ರ ಎ. ಜೆ ಮಾತನಾಡಿ, ಸಿನಿಮಾ ಈ ಲೆವೆಲ್ಗೆ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಮನೆಯವರು ಖುಷಿಯಾಗಿದ್ದಾರೆ. ತಂಡ ಖುಷಿಯಾಗಬೇಕು ಎಂದರೆ ಅಂದುಕೊಂಡಿರುವ ದುಡ್ಡು ಬರಬೇಕು. ಇಡೀ ಸಿನಿಮಾ ತಂಡ ಪ್ರಾಮಾಣಿಕವಾಗಿ ದುಡಿದಿದೆ. ಅವರಿಗೆಲ್ಲಾ ಮುಂದೆ ಒಳ್ಳೆ ಸಿನಿ ಕರಿಯರ್ ಸಿಗಬೇಕು. ಆದಷ್ಟು ಬೇಗ ತೆಲುಗಿಗೂ ಡಬ್ ಮಾಡಿಸುತ್ತೇವೆ. ತಮಿಳು ಡಬ್ ಬಗ್ಗೆ ಚರ್ಚೆ ನಡೆಸಲಾಗಿದೆ. ಈ ಸಿನಿಮಾಗೆ ಭಾಷೆಯ ಎಲ್ಲೆ ಇಲ್ಲ ಎಂದರು.
ನಟ ದೀಕ್ಷಿತ್ ಶೆಟ್ಟಿ ಮಾತನಾಡಿ, ಬಹಳ ಖುಷಿಯಾಗುತ್ತಿದೆ. ಎಷ್ಟೋ ವರ್ಷಗಳ ನಂತರ ಹೊಸಬರ ತಂಡ 50 ದಿನಗಳ ಕಾಲ ಸಿನಿಮಾವನ್ನು ಥಿಯೇಟರ್ನಲ್ಲಿ ಉಳಿಸಿಕೊಂಡಿದ್ದೇವೆ. ನಮಗೆ ನಂಬಲು ಆಗುತ್ತಿಲ್ಲ. ಮೊದಲ ದಿನದಿಂದ ಇಲ್ಲಿವರೆಗೂ ಬಹಳಷ್ಟು ಹೋರಾಟ ಮಾಡಿದ್ದೆವು. ನಾವು ಜನರನ್ನು ಕರೆದುಕೊಂಡು ಥಿಯೇಟರ್ ತುಂಬಿಸುತ್ತಿದ್ದೇವೆ ಎಂದು ಒಂದಷ್ಟು ಜನ ಮಾತನಾಡಿಕೊಂಡರು. ಹಾಗೆ ಹೇಳಿದವರಿಗೆ ಉತ್ತರ 50 ದಿನ. ಸಿನಿಮಾ ಅಷ್ಟು ಕೋಟಿ ಮಾಡಬೇಕು, ಇಷ್ಟು ಕೋಟಿ ಮಾಡಬೇಕು ಎನ್ನುವುದು ನನ್ನ ತಲೆಯಲ್ಲಿ ಇರಲಿಲ್ಲ. ನಿರ್ಮಾಪಕರು ಗೆಲ್ಲಬೇಕು, ನಿಲ್ಲಬೇಕು ಅನ್ನುವುದಷ್ಟೇ ಇತ್ತು. ಹಾಕಿದ ಬಂಡವಾಳ ವಾಪಸ್ ಬರುವುದರಲ್ಲಿದೆ. ಹೀಗಾಗಿ ಖುಷಿ ಇದೆ ಎಂದು ಭಾವಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೊಂದಿಸಿ ಬರೆಯಿರಿ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಮಾತನಾಡಿ, ಐವತ್ತು ಬರೀ ನಂಬರ್ ಅಷ್ಟೇ ಅಲ್ಲ. ಅದಕ್ಕೂ ಮೀರಿ ಸಿನಿಮಾವನ್ನು ಚಿತ್ರತಂಡ ತೆಗೆದುಕೊಂಡು ಹೋದ ರೀತಿ ನಾವು ಹೊಂದಿಸಿ ಬರೆಯಿರಿ ಮಾಡುವ ಟೈಮ್ನಲ್ಲಿ ಮಾಡಿದ ರೀತಿ ಇತ್ತು. ಆ ಜರ್ನಿಯೇ ರೋಚಕ. ಬ್ಲಿಂಕ್ ಸಿನಿಮಾ ನೋಡಿದಾಗ ಇದು ಬೇರೆನೇ ಇದೆ ಎನಿಸಿತು. ಮೂರು ವರ್ಷ ಟ್ರಾವೆಲ್ ಮಾಡಿ ಸಿನಿಮಾ ಮಾಡುವುದು ಒಂದು ಜರ್ನಿಯಾದರೆ, ಸಿನಿಮಾ ತಲುಪಿಸಲು ಅಷ್ಟೇ ಟ್ರಾವೆಲ್ ಮಾಡಬೇಕು. ಸಿನಿಮಾ ಮಾಡಿ ಸುಮ್ಮನೆ ಆಗಬಾರದು. ಸಿನಿಮಾ ಚೆನ್ನಾಗಿ ಇದ್ದಾಗ ನಿಲ್ಲಿಸಲು ಓಡಾಡಬೇಕು ಎಂದರು.
ಥಿಯೇಟರ್ನಲ್ಲಿಯೂ ಭರಪೂರ ಮೆಚ್ಚುಗೆ ಪಡೆದಿದ್ದ ಬ್ಲಿಂಕ್ ಸಿನಿಮಾ ಒಟಿಟಿಯಲ್ಲಿಯೂ ಸದ್ದು ಮಾಡಿದೆ. ಅಮೆಜಾನ್ ಪ್ರೈಮ್ಗೆ ಎಂಟ್ರಿ ಕೊಟ್ಟು 3 ದಿನದಲ್ಲಿಯೇ 7 ಮಿಲಿಯನ್ಸ್ ಮಿನಿಟ್ ಸ್ಟ್ರೀಮಿಂಗ್ ಕಾಣುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. 4ನೇ ದಿನ 10 ಮಿಲಿಯನ್ ಮಿನಿಟ್ಸ್ ರೀಚ್ ಆಗಿದೆ. ಹೊಸಬರ ಚಿತ್ರಕ್ಕೆ ಇಷ್ಟು ಒಳ್ಳೆ ರೆಸ್ಪಾನ್ಸ್ ಸಿಕ್ಕಿರುವುದು ಚಿತ್ರತಂಡಕ್ಕೆ ಖುಷಿ ಇದೆ ಎಂದು ತಿಳಿಸಿದರು.
ದಿಯಾ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಹಾಗೂ ನಟಿ ಚೈತ್ರಾ ಆಚಾರ್ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ಇದರ ಜೊತೆಗೆ ಗೋಪಾಲ್ ದೇಶಪಾಂಡೆ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ಬ್ಲಿಂಕ್ ಚಿತ್ರಕ್ಕೆ ಶ್ರೀನಿಧಿ ಬೆಂಗಳೂರು ಆ್ಯಕ್ಷನ್ ಕಟ್ ಹೇಳಿದ್ದಾರೆ. ರವಿಚಂದ್ರ ಎ. ಜೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಶಿವರಾತ್ರಿ ಹಬ್ಬದಂದು ಸೂಪರ್ ಸ್ಟಾರ್ಸ್ ಸಿನಿಮಾಗಳ ಮಧ್ಯೆ ತೆರೆಗೆ ಬಂದ ‘ಬ್ಲಿಂಕ್’ ಸಿನಿಮಾಗೆ ಪ್ರಾರಂಭದಲ್ಲಿ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದು ಮೂರರಲ್ಲಿ ಮತ್ತೊಂದು ಸಿನಿಮಾ ಎಂದೇ ಅಂದುಕೊಳ್ಳಲಾಗಿತ್ತು. ಆದರೆ, ಆರಂಭದ ದಿನಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾದ ಬಗ್ಗೆ ಮಾತನಾಡಿ ಆದ ಮೌತ್ ಪಬ್ಲಿಸಿಟಿಯಿಂದ ‘ಬ್ಲಿಂಕ್’ ಶೋಗಳು ಏರಿಕೆಯಾಗುತ್ತಾ ಹೋದವು. ಕನ್ನಡ ಸಿನಿಮಾಗಳಿಗೆ ಶೋ ಸಿಕ್ತಿಲ್ಲ ಎಂಬ ಅಪವಾದದ ನಡುವೆ 8 ಶೋಗಳಿಂದ 82 ಶೋ ಬ್ಲಿಂಕ್ ಪಾಲಾಗಿತ್ತು. ಹೀಗಾಗಿ ಶೋ ಹೆಚ್ಚಳದಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದ ಬ್ಲಿಂಕ್ ಸಿನಿಮಾ 50 ದಿನಗಳ ಯಶಸ್ವಿ ಪ್ರದರ್ಶನ ಕಂಡಿದೆ.
ಇದನ್ನೂ ಓದಿ : ಯಶಸ್ವಿ 25 ದಿನ ಪೂರೈಸಿದ 'ಬ್ಲಿಂಕ್': ನನ್ನ ಪಾಲಿಗೆ ಲಕ್ಕಿ ಸಿನಿಮಾ ಎಂದ ನಟಿ ಚೈತ್ರಾ ಆಚಾರ್ - Blink Movie