ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಸಾರಥ್ಯದ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಎಮರ್ಜೆನ್ಸಿ'. ಭಾರತದ ತುರ್ತುಪರಿಸ್ಥಿತಿ ಕುರಿತಾದ 'ಎಮರ್ಜೆನ್ಸಿ' ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದಾದರೂ ಅದಕ್ಕೆ ಶೀಘ್ರ ಬಿಡುಗಡೆ ಭಾಗ್ಯವಿಲ್ಲ. ಕಂಗನಾ ರಣಾವತ್ ಅವರೇ ಕಥೆ ಬರೆದು, ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಈ ಚಿತ್ರ ಈ ಹಿಂದೆ ಜೂನ್ 14ರಂದು ಬಿಡುಗಡೆಯಾಗಲು ರೆಡಿಯಾಗಿತ್ತು. ಆದರೆ, ಸಿನಿಮಾದ ಸಾರಥಿ ಕಂಗನಾ ರಣಾವತ್ ಚುನಾವಣೆಯಲ್ಲಿ ಬ್ಯುಸಿಯಾದ ಹಿನ್ನೆಲೆ, ಕಳೆದ ಮೇ ತಿಂಗಳ ಮಧ್ಯೆ ಸಿನಿಮಾ ಬಿಡುಗಡೆಯನ್ನು ಮುಂದೂಡುತ್ತಿದ್ದೇವೆ ಎಂಬುದಾಗಿ ಚಿತ್ರತಂಡ ತಿಳಿಸಿತ್ತು. ಹಾಗಾಗಿ ಮುಂದಿನ ಅಧಿಕೃತ ದಿನಾಂಕಕ್ಕಾಗಿ ಸಿನಿಪ್ರಿಯರು ಕಾತರರಾಗಿದ್ದರು.
ಇಂದು ಕಂಗನಾ ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಮೂಲಕ ಸಿನಿಮಾದ ಮುಂದಿನ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಹೌದು, ಸೆಪ್ಟೆಂಬರ್ 6 ರಂದು ಈ ಬಹುನಿರೀಕ್ಷಿತ ಚಿತ್ರ ತೆರೆಗಪ್ಪಳಿಸಲಿದೆ. 18ನೇ ಲೋಕಸಭೆ ಅಧಿವೇಶನ ಸೋಮವಾರ ಆರಂಭವಾಗಿದ್ದು, ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿ ಸಂಸದರಾಗಿ ಕಂಗನಾ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ತಮ್ಮ ಮುಂದಿನ ಸಿನಿಮಾದ ಹೊಸ ಬಿಡುಗಡೆ ದಿನಾಂಕವನ್ನೂ ಘೋಷಿಸಿದ್ದಾರೆ .
ಈ ಪೊಲಿಟಿಕಲ್ ಡ್ರಾಮಾ ಕೆಲವು ಬಾರಿ ವಿಳಂಬವನ್ನು ಎದುರಿಸಿದೆ. ಮೂಲತಃ ಚಿತ್ರ ಕಳೆದ ವರ್ಷವೇ ನವೆಂಬರ್ 24ಕ್ಕೆ ಬಿಡುಗಡೆ ಆಗಲು ರೆಡಿಯಾಗಿತ್ತು. ನಂತರ ಜೂನ್ 14ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಚುನಾವಣೆ ಸೇರಿದಂತೆ ನಾನಾ ಕಾಣಗಳಿಂದ ಸಿನಿಮಾ ವಿಳಂಬವಾಗುತ್ತಾ ಬಂತು. ಇದೀಗ ಅಂತಿಮ ಅಧಿಕೃತ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 6 ರಂದು ಭಾರತದ ತುರ್ತುಪರಿಸ್ಥಿತಿ ಕಥೆಯಾಧಾರಿತ 'ಎಮರ್ಜೆನ್ಸಿ' ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಪ್ರಭಾಸ್ 'ಕಲ್ಕಿ' ಚಿತ್ರದ 'ಬುಜ್ಜಿ' ವಾಹನವನ್ನೇರಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ - Rishab Shetty rides Bujji
ಕಂಗನಾ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, "ಸ್ವತಂತ್ರ ಭಾರತದ ಕರಾಳ ಅಧ್ಯಾಯದ 50ನೇ ವರ್ಷದ ಆರಂಭ. ಭಾರತೀಯ ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ವಿವಾದಾತ್ಮಕ ಸಂಚಿಕೆ" ಎಂದು ಬರೆದುಕೊಂಡಿದ್ದಾರೆ. ಇಲ್ಲಿ ಚಿತ್ರದ ಕುತೂಹಲಕಾರಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ. ಅನುಪಮ್ ಖೇರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಶ್ರೇಯಸ್ ತಲ್ಪಾಡೆ, ವಿಶಾಕ್ ನಾಯರ್ ಮತ್ತು ದಿವಂಗತ ಸತೀಶ್ ಕೌಶಿಕ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಕಂಗನಾರ ಮಣಿಕರ್ಣಿಕಾ ಫಿಲ್ಮ್ಸ್ ಜಂಟಿಯಾಗಿ ನಿರ್ಮಿಸಿದೆ.
ಇದನ್ನೂ ಓದಿ: ಆರಾಧನಾ ಜೊತೆಗೆ ರ‍್ಯಾಂಪ್ ವಾಕ್ ಮಾಡಿದ 'ಗೌರಿ' ಚಿತ್ರದ ನಟ ಸಮರ್ಜಿತ್ ಲಂಕೇಶ್ - Ramp Walk