ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆಯಿಂದಲೂ ಇಡೀ ಭಾರತದಲ್ಲಿ ಹೆಸರು ಸಂಪಾದಿಸಿದ ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಕಿರಿಪುತ್ರ ಪುನೀತ್ ರಾಜ್ಕುಮಾರ್ ವಿಧಿವಶರಾಗಿ ಇಂದಿಗೆ ಮೂರು ವರ್ಷ. ಅವರ ಸ್ಮರಣೆಯಲ್ಲಿ ಕರುನಾಡಿದ್ದು, ಮಡದಿ ಅಶ್ವಿನಿ ಪುನೀತ್ ರಾಜ್ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಸರಳ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ತಮ್ಮ ವಿವಿಧ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ನಗಮೊಗದ ಒಡೆಯನ ಫೋಟೋ ಹಂಚಿಕೊಂಡ ಅಶ್ವಿನಿ ಪುನೀತ್ ರಾಜ್ಕುಮಾರ್, ''ಅಪ್ಪು ಅವರ ಸವಿನೆನಪಿನಲ್ಲಿ 3 ವರ್ಷಗಳು'' ಎಂದು ಬರೆದುಕೊಂಡಿದ್ದಾರೆ. ಪೋಸ್ಟರ್ ಮೇಲೆ 'ಫಾರೆವರ್ ಇನ್ ಅವರ್ ಹಾರ್ಟ್ಸ್' ಎಂದು ಬರೆಯಲಾಗಿದೆ. ಜೊತೆಗೆ, ''3ನೇ ವರ್ಷದ ಸವಿನೆನಪು: ಅಪ್ಪು ಅವರು ನಮ್ಮ ನೆನಪುಗಳಲ್ಲಿ ಮತ್ತು ಕಾರ್ಯಗಳಲ್ಲಿ, ನಮ್ಮ ಜೀವನದ ಪ್ರತಿನಿತ್ಯ ಮತ್ತು ನಮ್ಮ ಹೃದಯದಲ್ಲಿ ಶಾಶ್ವತವಾಗಿ ಇರುವ ವಿಶೇಷ ಚೇತನ'' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಪುನೀತ್ ಸಮಾಧಿಗೆ ರಾಜ್ ಕುಟುಂಬದಿಂದ ಪೂಜೆ ಸಲ್ಲಿಕೆ: 'ಪರಮಾತ್ಮ'ನಿಗೆ ನಮನ
ಅಪ್ಪು ಅವರ ಮರಣದ ನಂತರ ತೆರೆಗಪ್ಪಳಿಸಿದ 'ಗಂಧದ ಗುಡಿ' ಸಿನಿಮಾಗೆ ಕಳೆದ ದಿನ ಎರಡು ವರ್ಷಗಳಾಗಿವೆ. ವಿಡಿಯೋ ಹಂಚಿಕೊಂಡಿದ್ದ ಅಶ್ವಿನಿ ಪುನೀತ್ ರಾಜ್ಕುಮಾರ್, ''ಅಪ್ಪು ಅವರ ಕರ್ನಾಟಕದ ಅದ್ಭುತ ಪರಂಪರೆ ಹಾಗೂ ವನ್ಯಜೀವಿಗಳ ವಿಶೇಷ ಆಚರಣೆ 'ಗಂಧದ ಗುಡಿ' ಚಿತ್ರಕ್ಕೆ ಎರಡು ವರ್ಷಗಳ ಸಂಭ್ರಮ'' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: ಸಿನಿಮಾವೆಂಬ 'ಮಾಯಾಬಜಾರ್'ನಲ್ಲಿ 'ದೊಡ್ಮನೆ ಹುಡ್ಗ'ನ ಪವರ್: ರಾಷ್ಟ್ರಪ್ರಶಸ್ತಿ ಸೇರಿ ಅಪ್ಪುಗೆ ಸಂದ ಪ್ರತಿಷ್ಠಿತ ಗೌರವಗಳಿವು