ಹೈದರಾಬಾದ್: ಇನ್ನು ಕೆಲವೇ ಗಂಟೆಗಳಲ್ಲಿ ಪ್ರಭಾಸ್ ಅಭಿನಯದ ಮುಂಬರುವ ಚಿತ್ರ ಕಲ್ಕಿ 2898 AD ನಿರ್ಮಾಪಕರು ಮಹತ್ವದ ಘೋಷಣೆ ಅನಾವರಣಗೊಳಿಸಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶಿಸಿದ ಈ ಚಿತ್ರವು ವಿಶೇಷವಾಗಿ ಅಮಿತಾಬ್ ಬಚ್ಚನ್ ಅಶ್ವತ್ಥಾಮ ಪಾತ್ರವನ್ನು ಒಳಗೊಂಡ ಟೀಸರ್ ಬಹಿರಂಗಪಡಿಸಿದ ನಂತರ ಸಿನಿ ರಸಿಕರಿಂದ ಭಾರಿ ಮೆಚ್ಚುಗೆ ಗಳಿಸಿದೆ. ಈ ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇತ್ತೀಚೆಗೆ, ಕಲ್ಕಿ 2898 AD ಚಿತ್ರ ತಂಡವು ಇನ್ಸ್ಟಾಗ್ರಾಮ್ನಲ್ಲಿ ಅಮಿತಾಬ್ ಬಚ್ಚನ್ ಅವರ ವಿಡಿಯೋವನ್ನು ಹಂಚಿಕೊಂಡಿತ್ತು. ಅದರಲ್ಲಿ ಆರಂಭಿಕ ಟೀಸರ್‌ನಲ್ಲಿ ಕಂಡುಬರುವ ಗುಹೆಯೊಳಗೆ ಅವರು ಶಿವಲಿಂಗವನ್ನು ಸ್ಪರ್ಶಿಸುತ್ತಿದ್ದಾರೆ. ಮತ್ತು ನನ್ನ ಸಮಯ ಬಂದಿದೆ, ಅಂತಿಮ ಯುದ್ಧದ ಸಮಯ" ಎಂದು ಗಂಭೀರವಾಗಿ ಹೇಳುತ್ತಾರೆ. ಇದೀಗ ಇಂದು ಸಂಜೆ 5 ಗಂಟೆಗೆ ಚಿತ್ರ ತಂಡವು ಪ್ರಮುಖ ಪ್ರಕಟಣೆ ಹಂಚಿಕೊಳ್ಳಲಿದೆ ಎಂದು ಸೋಷಿಯಲ್ ಮೀಡಿಯಾ ಪೋಸ್ಟ್ ಬಹಿರಂಗಪಡಿಸಿದೆ.
ಪರಿಷ್ಕೃತ ಬಿಡುಗಡೆ ದಿನಾಂಕ ಘೋಷಣೆ ಸಾಧ್ಯತೆ: ಈ ಟೀಸರ್ ಕಾಮೆಂಟ್‌ಗಳ ವಿಭಾಗದಲ್ಲಿ, ವಿಶೇಷವಾಗಿ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕಕ್ಕೆ ಸಂಬಂಧಿಸಿದಂತೆ ನೆಟ್ಟಿಗರು ಪ್ರಶ್ನೆಗಳ ಮಳೆಯನ್ನು ಸುರಿಸಿದ್ದಾರೆ. ಚಿತ್ರ ಬಿಡುಗಡೆಗೆ ದಿನಾಂಕವನ್ನು ಮೇ 9 ಕ್ಕೆ ನಿಗದಿಪಡಿಸಲಾಗಿತ್ತು. 2024ರಲ್ಲಿ ಲೋಕಸಭಾ ಚುನಾವಣೆಯ ಕಾರಣ ಬಿಡುಗಡೆ ಮುಂದೂಡಲಾಯಿತು. ಮುಂಬರುವ ಪ್ರಕಟಣೆಯ ಸಮಯದಲ್ಲಿ ಪರಿಷ್ಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸುವ ಸಾಧ್ಯತೆ ಹೆಚ್ಚಿದೆ.
ಕಲ್ಕಿ 2898 AD ಚಿತ್ರದ ತಾರಾಬಳಗ: ಕಲ್ಕಿ 2898 AD ಚಿತ್ರವನ್ನು ಪೌರಾಣಿಕ ವೈಜ್ಞಾನಿಕ ಕಾಲ್ಪನಿಕ ರೀತಿಯಲ್ಲಿ ನಾಗ ಅಶ್ವಿನ್ ನಿರ್ದೇಶಕ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್‌ಗಳು ಹಾಗೂ ಗ್ಲಿಂಪ್‌ಗಳು ಚಿತ್ರದ ಕುರಿತ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಬಿಗ್ ಬಿ ಅಮಿತಾಬ್ ಬಚ್ಚನ್, ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ರಾಜೇಂದ್ರ ಪ್ರಸಾದ್, ಪಶುಪತಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿ ಸಿದ್ಧವಾಗುತ್ತಿರುವ ಈ ಸಿನಿಮಾಕ್ಕೆ ಸಂತೋಷ್ ನಾರಾಯಣನ್ ಸಂಗೀತ ನೀಡುತ್ತಿದ್ದಾರೆ. ಜೊತೆಗೆ ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣವನ್ನು ನಿರ್ವಹಿಸುತ್ತಿರುವುದರಿಂದ ಈ ಚಿತ್ರ ಬಗೆಗಿನ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ.
ಇದನ್ನೂ ಓದಿ: ತಮಿಳು ಸಿನಿಮಾಕ್ಕೆ ಕಾಲಿಟ್ಟ ಶ್ರೀಲೀಲಾ; ನಟ ಅಜಿತ್ಗೆ ನಾಯಕಿಯಾಗಲಿರುವ ಕನ್ನಡತಿ - Sreeleela