ಪ್ರಸಿದ್ಧ, ವಿಶ್ವಾಸಾರ್ಹ ಆನ್‌ಲೈನ್ ಪ್ಲ್ಯಾಟ್‌ಫಾರ್ಮ್ ಐಎಂಡಿಬಿ (IMDb) ಈ ವಾರದ ಟಾಪ್ 10 ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯನ್ನು ಅನಾವರಣಗೊಳಿಸಿದೆ. ಐಎಂಡಿಬಿ ಪೇಜ್ ಕ್ಲಿಕ್ ಮಾಡಿದ ಪ್ರಪಂಚದಾದ್ಯಂತದ 200 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರ (monthly users) ನಿರ್ದಿಷ್ಟ ಪೇಜ್ ವೀವ್ಸ್ ಆಧಾರದ ಮೇಲೆ ಈ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಈ ಜನಪ್ರಿಯ ಭಾರತೀಯ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ನಟಿ ಶಾರ್ವರಿ ವಾಘ್ ಸತತ ಮೂರನೇ ವಾರವೂ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಶಾರ್ವರಿ ವಾಘ್ ಅಭಿನಯದ ಹಾರರ್ ಕಾಮಿಡಿ 'ಮುಂಜ್ಯಾ' ಮತ್ತು 'ಮಹಾರಾಜ್'ನಲ್ಲಿನ ವಿಶೇಷ ಪಾತ್ರ ಪ್ರೇಕ್ಷಕರ ಗಮನ ಸೆಳೆದಿವೆ. ಈ ಮೂಲಕ ಈ ವಾರದ ಅತ್ಯಂತ ಜನಪ್ರಿಯ ಭಾರತೀಯ ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ.
ಜನಪ್ರಿಯ ವೆಬ್ ಸೀರಿಸ್ 'ಮಿರ್ಜಾಪುರ್'ದಲ್ಲಿ ಮಾಧುರಿ ಯಾದವ್ ಪಾತ್ರದ ಮೂಲಕ ವ್ಯಾಪಕ ಮನ್ನಣೆ ಗಳಿಸಿರುವ ಇಶಾ ತಲ್ವಾರ್ ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹರ್ಷಿತಾ ಗೌರ್, ಶ್ವೇತಾ ತ್ರಿಪಾಠಿ ಮತ್ತು ಅಲಿ ಫಜಲ್ ಸೇರಿದಂತೆ 'ಮಿರ್ಜಾಪುರ್ 3'ರ ಸಹ-ನಟರು ಕ್ರಮವಾಗಿ 3, 10 ಮತ್ತು 11ನೇ ಸ್ಥಾನಗಳನ್ನು ಪಡೆದಿದ್ದಾರೆ. ಮಿರ್ಜಾಪುರ್ನ ಮೂರನೇ ಸೀಸನ್ ದಾಖಲೆಗಳನ್ನು ಪುಡಿಗಟ್ಟಿದೆ. ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಈ ವೆಬ್ ಸೀರಿಸ್ ಜುಲೈ 5ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರದರ್ಶನ ಪ್ರಾರಂಭಿಸಿತು.
ಆ್ಯಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಚಿತ್ರ 'ಕಿಲ್'ನಲ್ಲಿ ಕಾಣಿಸಿಕೊಂಡಿರುವ ಲಕ್ಷ್ಯ ಈ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನೂ ಶೆರ್ನಾವಾಜ್ ಜಿಜಿನಾ, ಅನಂಗ್ಶಾ ಬಿಸ್ವಾಸ್, ನಿರ್ದೇಶಕ ಎಸ್ ಶಂಕರ್ ಮತ್ತು ಅಲಯಾ ಎಫ್ ಕ್ರಮವಾಗಿ 13, 15, 22 ಮತ್ತು 27ನೇ ಸ್ಥಾನದಲ್ಲಿದ್ದಾರೆ.