ಕನ್ನಡ ಚಿತ್ರರಂಗದಲ್ಲಿ ಸಮಸ್ಯೆಗಳು ಎದುರಾದಾಗ ಡಾ.ರಾಜ್ಕುಮಾರ್, ಅಂಬರೀಷ್ ಸದಾ ಚಿತ್ರರಂಗದ ಪರವಾಗಿ ನಿಲ್ಲುತ್ತಿದ್ದರು. ಅಣ್ಣಾವ್ರು ಬದುಕಿದ್ದಾಗ ನಾವೆಲ್ಲಾ ಕಲಾವಿದರು, ಒಟ್ಟಾಗಿ ಇರಬೇಕು ಎಂಬ ಮಾತನ್ನು ಹೇಳುತ್ತಿದ್ರು. ಅಣ್ಣಾವ್ರ ಮಾತಿನಂತೆ ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರ ಸಮಯದಲ್ಲಿ ಚಾಮರಾಜಪೇಟೆಯಲ್ಲಿ ಕಲಾವಿದರ ಸಂಘದ ಕಟ್ಟಡವನ್ನು ನಿರ್ಮಾಣ ಮಾಡಲಾಗಿತ್ತು. ಅಂಬರೀಷ್ ಕಲಾವಿದರ ಸಂಘದ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ರಾಕ್‌ಲೈನ್ ವೆಂಕಟೇಶ್ ಅಧಿಕಾರ ಸ್ವೀಕರಿಸಿದ್ದರು.
ಕಲಾವಿದರ ಸಂಘದಲ್ಲಿ ಹೋಮ ಹವನಕ್ಕೆ ಸಿದ್ಧತೆ: ಅದರಂತೆ ನಟ ಅಂಬರೀಷ್ ಅವರು ಅಧ್ಯಕ್ಷರಾಗಿದ್ದಾಗ ಚಿತ್ರರಂಗದಲ್ಲಿ ಉದ್ಭವಿಸುವ ವಿವಾದಗಳು, ಸಮಸ್ಯೆಗೆ ಪರಿಹಾರ ಕೊಡಲಾಗುತ್ತಿತ್ತು. ಆದ್ರೆ ಅಂಬರೀಷ್ ನಿಧನದ ನಂತರ ಕಲಾವಿದರ ಸಂಘದಲ್ಲಿ ಸಿನಿಮಾ ಚರ್ಚೆಗಳು ಬಿಟ್ಟು, ಕೇವಲ ಆಡಿಯೋ ಬಿಡುಗಡೆ, ಖಾಸಗಿ ಕಾರ್ಯಕ್ರಮಗಳು ಅಂತಾ ಸೀಮಿತವಾಗಿತ್ತು. ಇದೀಗ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್ ಹಾಗೂ ಹಿರಿಯ ನಟ ದೊಡ್ಡಣ್ಣ ಅವರ ನೇತೃತ್ವದಲ್ಲಿ ಕಲಾವಿದರ ಸಂಘದಲ್ಲಿ ಹೋಮ ಹವನಕ್ಕೆ ಸಿದ್ಧತೆ ನಡೆಯುತ್ತಿವೆ.
ಈ ಬಗ್ಗೆ ಮಾತನಾಡಿರೋ ಫಿಲ್ಮ್ ಚೇಂಬರ್ ಖಜಾಂಚಿ ಜಯಸಿಂಹ ಮುಸುರಿ, ಇದೇ ಆಗಸ್ಟ್ 14ರಂದು ಕಲಾವಿದರ ಸಂಘದಲ್ಲಿ ವಿಶೇಷ ಪೂಜೆ ನಡೆಸುತ್ತಿರುವುದು ಸತ್ಯ. ಕೆಲ ದಿನಗಳ ಹಿಂದೆ ಫಿಲ್ಮ್ ಚೇಂಬರ್ಗೆ ರಾಕ್ ಲೈನ್ ವೆಂಕಟೇಶ್ ಬಂದು ನಮಗೆ ಆಹ್ವಾನ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ಕುಮಾರ್, ಉಪೇಂದ್ರ, ರವಿಚಂದ್ರನ್, ಜಗ್ಗೇಶ್, ಸುದೀಪ್, ಧ್ರುವ ಸರ್ಜಾ, ಯಶ್, ಗಣೇಶ್, ದುನಿಯಾ ವಿಜಯ್ ಸೇರಿದಂತೆ ಯುವ ನಟ ನಟಿಯರು, ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಸೇರಿ ಬಹುತೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಅವರು ಬಿಡುಗಡೆ ಆಗಲಿ ಎಂದು ಹೋಮ ಹವನ ನಡೆಸಲಾಗುತ್ತಿದೆ ಎಂದು ಸಹ ಹೇಳಲಾಗುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮಾಹಿತಿ ಇಲ್ಲ. ಕನ್ನಡದಲ್ಲಿ ಸ್ಟಾರ್ ನಟರ ಸಿನಿಮಾಗಳು ಇಲ್ಲದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಮುಚ್ಚುತ್ತಿವೆ. ಹಾಗಾಗಿ, ಈ ವಿಚಾರದ ಜೊತೆಗೆ ಇಡೀ ಚಿತ್ರರಂಗದ ಕಲಾವಿದರ ಜೊತೆ ಒಂದು ಔತಣಕೂಟ ಏರ್ಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಹಿರಿಯ ನಟಿಯರಲ್ಲಿ ಬಿ.ಸರೋಜಾದೇವಿ, ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಸುಮಲತಾ ಅಂಬರೀಷ್ ಸೇರಿದಂತೆ ಕೆಲವರು ಭಾಗಿಯಾಗಲಿದ್ದಾರಂತೆ. ಅಂಬರೀಷ್ ಅವರ ನಂತರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನವನ್ನು ಯಾರಿಗೆ ವಹಿಸಬೇಕು ಎಂಬುದರ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.