ಮುಂಬೈ: ಬಾಲಿವುಡ್ ಹಿರಿಯ ಸಂಗೀತ ನಿರ್ದೇಶಕ ಮತ್ತು ಖ್ಯಾತ ಗಾಯಕ ಹಿಮೇಶ್ ರೇಶಮಿಯಾ ತಂದೆ ವಿಪಿನ್ ರೇಶಮಿಯಾ ಅವರು ಮೃತಪಟ್ಟಿದ್ದಾರೆ. ಉಸಿರಾಟದ ಸಮಸ್ಯೆ ಮತ್ತು ವಯೋಸಹಜ ಕಾಯಿಲೆಗಳಿಂದ ಬರಳುತ್ತಿದ್ದ ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ರಾತ್ರಿ 8.30ರ ಸುಮಾರಿಗೆ ಮೃತಪಟ್ಟಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ವಿಪಿನ್ ರೇಶಮಿಯಾ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಚಿತ್ರರಂಗದ ಸದಸ್ಯರು ಮತ್ತು ಸ್ನೇಹಿತರು ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಇಂದು ಜುಹುನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬಾಲಿವುಡ್ ಸಂಗೀತ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿರುವ ವಿಪಿನ್ ರೇಶಮಿಯಾ ಹಲವು ಕಲಾವಿದರ ವೃತ್ತಿಜೀವನ ರೂಪುಗೊಳ್ಳಲು ಕಾರಣಾಗಿದ್ದಾರೆ. ಇವರು ಸಿನಿಮಾ ಕ್ಷೇತ್ರವಲ್ಲದೇ ವೈಯಕ್ತಿಕವಾಗಿಯೂ ವಿವಿಧ ಆಯಾಮಗಳಲ್ಲಿ ಸಂಗೀತ ಸಂಯೋಜಿಸಿ ಕೇಳುಗರಿಗೆ ಇಂಪು ನೀಡಿದ್ದಾರೆ. ಪ್ರಸ್ತುತ ಸೌಂಡ್ಗಳಲ್ಲಿ ಸಾಂಪ್ರದಾಯಿಕ ಭಾರತೀಯ ಸಂಗೀತವನ್ನು ಹದಗೊಳಿಸುವ ಕಲೆ ಇವರಿಗಿತ್ತು. ಹಲವು ಬಾಲಿವುಡ್ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ದಿ ಎಕ್ಸ್‌ಪೋಸ್ (2014), ತೇರಾ ಸುರೂರ್ (2016) ಮತ್ತು ಇನ್ಸಾಫ್ ಕಿ ಜಂಗ್ (1988) ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಿಗೆ ವಿಪಿನ್ ರೇಶಮಿಯಾ ಸಂಗೀತ ನೀಡಿದ್ದಾರೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಚಿತ್ರಕ್ಕೂ ವಿಪಿನ್ ಸಂಗೀತ ನಿರ್ದೇಶಿಸಿದ್ದರು. ಸಲ್ಮಾನ್ ಖಾನ್ ಅಭಿನಯದ 'ಪ್ಯಾರ ಕಿಯಾ ತೋ ಢರನಾ ಕ್ಯಾ' ಚಿತ್ರಕ್ಕೆ ಸಂಗೀತ ಸಂಯೋಜಿಸಿ ಸೈ ಎನಿಸಿಕೊಂಡಿದ್ದರು. ಹಾಗೆಯೇ ತಮ್ಮ ಪುತ್ರ ಹಿಮೇಶ್ ಅಭಿನಯದ ದಿ ಎಕ್ಸ್‌ಪೋಸ್ (2014), ತೇರಾ ಸುರೂರ್ (2016) ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದರು.