1999ರಲ್ಲಿ 'ಹೃದಯ ಹೃದಯ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ನಟಿ ಅನು ಪ್ರಭಾಕರ್ ಅವರು ಯಶಸ್ವಿ 25 ವರ್ಷಗಳನ್ನು ಪೂರೈಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್, ಶಿವರಾಜ್ಕುಮಾರ್, ರಮೇಶ್ ಅರವಿಂದ್, ರಾಮ್ಕುಮಾರ್ ಅವರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಅನು ಪ್ರಭಾಕರ್ 80ಕ್ಕೂ ಹೆಚ್ಚು ವಿಭಿನ್ನ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಇತ್ತೀಚೆಗೆ ಚಿತ್ರರಂಗದಲ್ಲಿನ 25 ವರ್ಷಗಳ ಅವರ ಪಯಣವನ್ನು ಸಂಭ್ರಮಿಸಲಾಗಿದೆ.
ಸದ್ಯ ರಿಯಾಲಿಟಿ ಶೋ ಜೊತೆಗೆ ಸಿನಿಮಾಗಳನ್ನು ಮಾಡುತ್ತಿರುವ ಅನು ಪ್ರಭಾಕರ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಮುಂದಿನ ಬಹುನಿರೀಕ್ಷಿತ ಚಿತ್ರ ''ಹಗ್ಗ''. ಈ ಸಿನಿಮಾದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಕಾರ್ಯಕ್ರಮದಲ್ಲಿ ಚಿತ್ರತಂಡ ಅನು ಅವರನ್ನು ಗೌರವಿಸಿದರು. ಕೇಕ್ ಕತ್ತರಿಸಿ ಸಂಭ್ರಮಾಚರಿಸಿದರು. ಈ ಸಂದರ್ಭ ನಟಿ ಹರ್ಷಿಕಾ ಪೂಣಚ್ಚ ಅವರ ಸೀಮಂತ ಶಾಸ್ತ್ರವನ್ನೂ ಸಹ ಚಿತ್ರತಂಡ ಆಯೋಜಿಸಿತ್ತು. ನಟಿ ಪ್ರಿಯಾಂಕಾ ಉಪೇಂದ್ರ, ಗಾಯತ್ರಿ ಪ್ರಭಾಕರ್ ಮತ್ತು ರಘು ಮುಖರ್ಜಿ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
ಈವೆಂಟ್ನಲ್ಲಿ ಮಾತನಾಡಿದ ನಟಿ ಅನು ಪ್ರಭಾಕರ್, ''ಅವಿನಾಶ್ ಹೇಳಿದ ಕಥೆಯಿಂದ ಚಿತ್ರ ಒಪ್ಪಿಕೊಂಡೆ. ನನಗೆ ಹಾರರ್ ಚಿತ್ರಗಳೆಂದರೆ ಇಷ್ಟವಿಲ್ಲ. ಹಾರರ್ ಸಿನಿಮಾಗಳನ್ನು ನೋಡುವುದಿಲ್ಲ. ಅದಾಗ್ಯೂ ಅವರು ಹೇಳಿದ ಕಥೆಯಿಂದ ಒಪ್ಪಿಕೊಂಡೆ. ನನಗೆ ಅವರ ಸ್ಪಷ್ಟತೆ ಇಷ್ಟವಾಯಿತು. ಅವರು ಏನು ಹೇಳಿದ್ದರೋ ಅದನ್ನೇ ತೆರೆ ಮೇಲೆ ತಂದಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಇಷ್ಟೊಂದು ಚೆನ್ನಾಗಿ ಕೆಲಸ ಮಾಡಿದ್ದು ನೋಡಿ ಖುಷಿಯಾಯಿತು. ಹಾಗಂತ ಚಿತ್ರೀಕರಣ ಸುಲಭವಾಗಿರಲಿಲ್ಲ. ನನ್ನ ಭಾಗದ ಚಿತ್ರೀಕರಣ ರಾತ್ರಿ 7ಕ್ಕೆ ಶುರುವಾಗಿ ಬೆಳಗಿನ ಜಾವಕ್ಕೆ ಮುಗಿಯುತ್ತಿತ್ತು. ಎಲ್ಲರೂ ಹೋದ ಬಳಿಕ ನಾನು ಹೋಗಬೇಕಿತ್ತು. ಏಕೆಂದರೆ, ಮೇಕಪ್ ಹಾಕುವುದಕ್ಕೆ ಮತ್ತು ತೆಗೆಯುವುದಕ್ಕೆ ಎರಡು ತಾಸು ಬೇಕಾಗುತ್ತಿತ್ತು. ನನ್ನ ಜೊತೆಗೆ ತಾಳ್ಮೆಯಿಂದ ಕಾದಿದ್ದ ನನ್ನ ತಂಡಕ್ಕೆ ಧನ್ಯವಾದ ಹೇಳಬೇಕು'' ಎಂದರು.
ಬಳಿಕ ನಿರ್ದೇಶಕ ಅವಿನಾಶ್ ಮಾತನಾಡಿ, ಇದಕ್ಕೂ ಮೊದಲು ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಒಂದು ಕಿರುಚಿತ್ರ ನಿರ್ದೇಶಿಸಿದ್ದೆ. ಹಗ್ಗ ನನ್ನ ಚೊಚ್ಚಲ ಚಿತ್ರ. ಸಿನಿಮಾದಲ್ಲಿ ಹಗ್ಗವನ್ನು ಆಯುಧವನ್ನಾಗಿ ಬಳಸಿಕೊಳ್ಳಲಾಗಿದೆ. ಒಳ್ಳೆಯ ವಿಷಯಕ್ಕಾಗಿ ಹಗ್ಗ ಹೋರಾಟ ಮಾಡುತ್ತದೆ. ಇದೊಂದು ಹಾರರ್ ಫ್ಯಾಂಟಸಿ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. ಇಲ್ಲಿ ಸಂದೇಶವಿದೆ, ಸಾಕಷ್ಟು ಗ್ರಾಫಿಕ್ಸ್ ಇದೆ. ಒಂದು ಪಾತ್ರಕ್ಕಾಗಿ ಅನು ಪ್ರಭಾಕರ್ ಇದ್ದರೆ ಚೆನ್ನ ಎಂದೆನಿಸಿತು. ಅವರೂ ಒಪ್ಪಿಕೊಂಡರು. ಆ ನಂತರ ಆ ಪಾತ್ರವನ್ನು ಅವರು ಬಿಟ್ಟರೆ ಯಾರಿಂದಲೂ ಮಾಡಲು ಸಾಧ್ಯವಿಲ್ಲ ಎಂದೆನಿಸಿತು ಅಂದರು.
ಕಾರ್ಯಕಾರಿ ನಿರ್ಮಾಪಕ ದಯಾಳ್ ಪದ್ಮನಾಭನ್ ಮಾತನಾಡಿ, ಇದೊಂದು ಮಹಿಳಾ ಪ್ರಧಾನ ಚಿತ್ರ. ರಾಷ್ಟ್ರೀಯ ಸಮಸ್ಯೆಯ ಕುರಿತಾದ ಕಥೆ ಇದೆ. ಈ ಬಗ್ಗೆ ಯಾರೂ ಚಿತ್ರ ಮಾಡಿರಲಿಲ್ಲ. ದ್ವಿತೀಯಾರ್ಧದಲ್ಲಿ ವಿಎಫ್ಎಕ್ಸ್ ಸಹಕಾರದೊಂದಿಗೆ ಅದನ್ನು ಚೆನ್ನಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ದ್ವಿತೀಯಾರ್ಧ ಬಹಳ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಗೆಲ್ಲುತ್ತದೆ ಎಂಬ ನಂಬಿಕೆ ಇದೆ. ನಿರ್ಮಾಪಕರು ಎಲ್ಲೂ ಕೂಡಾ ರಾಜಿ ಆಗಿಲ್ಲ. ಇತ್ತೀಚೆಗೆ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ ಬೇಡಿಕೆ ಬಂದಿತ್ತು. ಆದರೆ, ನಿರ್ಮಾಪಕರು ಮಾರುವುದಕ್ಕೆ ಒಪ್ಪಲಿಲ್ಲ. ಮುಂದೆ ಇನ್ನೂ ಒಳ್ಳೆಯ ಅವಕಾಶಗಳು ಬರಬಹುದು ಎಂದು ಸುಮ್ಮನಾದರು. ಅವರಿಗೆ ಒಳ್ಳೆಯದಾಗಬೇಕು. ನನಗೆ ಅವರ ಶ್ರದ್ಧೆ ಇಷ್ಟವಾಯಿತು. ಚಂದನ್ ಫಿಲಂಸ್ ಸಂಸ್ಥೆ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದರು.
ನಂತರ ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, ಅನು ಪ್ರಭಾಕರ್ ಅವರನ್ನು ನೋಡಿದರೆ ಅವರಿಗೆ 25 ವರ್ಷ ಆಗಿದೆ ಎಂದೆನಿಸುತ್ತದೆಯೇ ಹೊರತು, ಚಿತ್ರರಂಗದಲ್ಲಿ ಅವರು 25 ವರ್ಷಗಳಿಂದ ಇದ್ದಾರೆ ಎಂದೆನಿಸುವವುದಿಲ್ಲ. ನಮಗೆಲ್ಲಾ ಸ್ಫೂರ್ತಿ ಅವರು. ಅವರು ನಮ್ಮ ಪಾಲಿಗೆ 'ಟೈಟಾನಿಕ್ ಹೀರೋಯಿನ್'. ಅವರ 25ನೇ ವರ್ಷದ ಸಂಭ್ರಮದ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಖುಷಿಯಾಗುತ್ತಿದೆ. ಈ ಚಿತ್ರದಲ್ಲಿ ಅಭಿನಯಿಸಿದ್ದು ಒಂದೊಳ್ಳೆ ಅನುಭವ. ನಿರ್ದೇಶಕರಿಗೆ ತಾವೇನು ಮಾಡುತ್ತಿದ್ದೀನಿ ಎಂಬುದು ಚೆನ್ನಾಗಿ ಗೊತ್ತಿತ್ತು. ನಾವು ಕೇಳುವುದಕ್ಕಿಂತ ಮೊದಲೇ ನಿರ್ಮಾಪಕರು ಸಂಭಾವನೆ ಕೊಡುತ್ತಿದ್ದರು. ಇಂಥಾ ನಿರ್ಮಾಪಕರು ಕಡಿಮೆ. ಇಂಥವರನ್ನು ಚಿತ್ರರಂಗ ಉಳಿಸಿಕೊಳ್ಳಬೇಕು ಎಂದರು. ಈ ಚಿತ್ರದಲ್ಲಿ ಗಾಯತ್ರಿ ಪ್ರಭಾಕರ್, ತಬಲಾ ನಾಣಿ ಅಭಿನಯಿಸಿದ್ದಾರೆ. ರಾಜ್ ಭಾರದ್ವಾಜ್ ನಿರ್ಮಾಣ ಮಾಡಿದ್ದು, ಸೆಪ್ಟೆಂಬರ್ 20ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ.