ಸಂಜು ಎಂಬ ಹೆಸರು ಕನ್ನಡ ಚಿತ್ರರಂಗಕ್ಕೆ ಒಂಥರ ಲಕ್ಕಿ ಹೆಸರು ಜೊತೆಗೆ ಲಕ್ಕಿ ಟೈಟಲ್ ಕೂಡ ಹೌದು. ಕರಾಟೆ ಕಿಂಗ್ ಶಂಕರ್ ನಾಗ್ ಅಭಿನಯದ ಗೀತಾ ಸಿನಿಮಾದಲ್ಲಿ ಅವರ ಹೆಸರು ಸಂಜು ಆಗಿತ್ತು. ಇನ್ನು ರಮ್ಯಾ ಹಾಗೂ ಶ್ರೀನಗರ ಕಿಟ್ಟಿ ನಟನೆಯ ಸಂಜು ವೆಡ್ಸ್ ಗೀತಾ ಚಿತ್ರದಲ್ಲಿಯೂ ಶ್ರೀನಗರ ಕಿಟ್ಟಿ ಅವರ ಹೆಸರು ಕೂಡ ಅದೇ ಆಗಿತ್ತು. ಇದೀಗ ಸಂಜು ಹೆಸರಿನ ಮೇಲೆ ಸಿನಿಮಾ ಬರುತ್ತಿದ್ದು, ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.
![ಸಂಜು ಚಿತ್ರ ತಂಡ](https://etvbharatimages.akamaized.net/etvbharat/prod-images/05-02-2024/kn-bng-01-sharvyya-sanju-cinemage-sikitu-director-guruprasadu-saatu-7204735_05022024130205_0502f_1707118325_519.jpg)
ಹೌದು, ಕನ್ನಡ ಚಿತ್ರರಂಗದ ಪತ್ರಕರ್ತನಾಗಿ ನಂತರ ನಟನಾಗಿ ಈಗ ನಿರ್ದೇಶಕನಾಗಿ ಭರವಸೆ ಹುಟ್ಟಿಸಿರೋ ಯತಿರಾಜ್ ನಿರ್ದೇಶನದ "ಸಂಜು" ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ರೋಜ್ ಸಿನಿಮಾ ಖ್ಯಾತಿಯ ಶ್ರಾವ್ಯ ಹಾಗೂ ಮನ್ವಿತ್ ಅಭಿನಯದ ಈ ಚಿತ್ರಕ್ಕೆ ಮಠ ನಿರ್ದೇಶಕ ಗುರು ಪ್ರಸಾದ್ ಸಾಥ್ ನೀಡಿದ್ದಾರೆ.
ಇತ್ತೀಚೆಗೆ ಸಂಜು ಸಿನಿಮಾದ ಹಾಡು ಬಿಡುಗಡೆ ನಡೆಯಿತು. ನಿರ್ದೇಶಕ ಗುರು ಪ್ರಸಾದ್ ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿನ ಗುರು ದೇಶಪಾಂಡೆ, ರವಿ ಆರ್ ಗರಣಿ, ಪಿ.ಮೂರ್ತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್ ಎಂ ಸುರೇಶ್ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಹಾಡುಗಳ ಬಿಡುಗಡೆ ಸಮಾರಂಭಕ್ಕೆ ಸಾಕ್ಷಿಯಾದರು.
![ಸಂಜು ಚಿತ್ರ ತಂಡ](https://etvbharatimages.akamaized.net/etvbharat/prod-images/05-02-2024/kn-bng-01-sharvyya-sanju-cinemage-sikitu-director-guruprasadu-saatu-7204735_05022024130205_0502f_1707118325_665.jpg)
ಮೊದಲಿಗೆ ಮಾತು ಶುರು ಮಾಡಿದ ನಿರ್ದೇಶಕ ಯತಿರಾಜ್, ಸಂಜು ಚಿತ್ರಕ್ಕೆ "ಅಗಮ್ಯ ಪಯಣಿಗ" ಎಂಬ ಅಡಿಬರಹವಿದೆ. ಇದೊಂದು ಬಸ್ ನಿಲ್ದಾಣದಲ್ಲಿ ನಡೆಯುವ ಕಥೆ. ಇಲ್ಲಿ ನಾಯಕ ಸಾಮಾನ್ಯ ಜನರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಿದೆ. ನಾಯಕಿ ಸರಸ್ವತಿ ಬದುಕು ಕೂಡ ಇದಕ್ಕೆ ಹೊರತಾಗಿಲ್ಲ. ತತ್‌ಕ್ಷಣದ ನಿರ್ಧಾರಗಳು ನಮ್ಮ ಬದುಕಿನಲ್ಲಿ ಎಷ್ಟೆಲ್ಲ ಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇನೆ. ಮಡಿಕೇರಿಯಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ. ಯಾವುದೇ ಕೊರತೆ ಬಾರದಂತೆ ಚಿತ್ರ ನಿರ್ಮಾಣ ಮಾಡಿರುವ ನಿರ್ಮಾಪಕ ಸಂತೋಷ್ ಅವರಿಗೆ, ನನ್ನ ಇಡೀ ತಂಡಕ್ಕೆ ಹಾಗೂ ಹಾಡುಗಳನ್ನು ಲೋಕಾರ್ಪಣೆ ಮಾಡಿದ ಸಮಸ್ತ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
![ಸಂಜು ಚಿತ್ರ ತಂಡ](https://etvbharatimages.akamaized.net/etvbharat/prod-images/05-02-2024/kn-bng-01-sharvyya-sanju-cinemage-sikitu-director-guruprasadu-saatu-7204735_05022024130205_0502f_1707118325_434.jpg)
ನಂತರ ಚಿತ್ರದ ನಾಯಕ ಮನ್ವಿತ್ ಮಾತನಾಡುತ್ತಾ, ನಾನು ಯಾವುದೇ ಸಿನಿಮಾ ಅಥವಾ ರಾಜಕೀಯ ಕುಟುಂಬದಿಂದ ಬಂದವನಲ್ಲ. ಸಾಮಾನ್ಯ ರೈತನ ಮಗ. ನನ್ನನ್ನು ಹೀರೋ ಮಾಡುವುದಕ್ಕಾಗಿ ಇಷ್ಟು ದುಡ್ಡು ಹಾಕಿರುವ ನಿರ್ಮಾಪಕರಿಗೆ ನಾನು ಆಬಾರಿ. ನನಗೆ ಮೊದಲು ನಿರ್ಮಾಪಕರು ಸಿಕ್ಕಿದ್ದರು. ಆನಂತರ ನಿರ್ದೇಶಕ ಯತಿರಾಜ್ ಅವರ ಪರಿಚಯವಾಯಿತು. ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಪಕರು ಚಿತ್ರವನ್ನು ಆರಂಭಿಸಿದ್ದರು ಎಂದರು.
![ಸಂಜು ಚಿತ್ರ ತಂಡ](https://etvbharatimages.akamaized.net/etvbharat/prod-images/05-02-2024/kn-bng-01-sharvyya-sanju-cinemage-sikitu-director-guruprasadu-saatu-7204735_05022024130205_0502f_1707118325_1057.jpg)
ಬಳಿಕ ರೋಜ್ ಸಿನಿಮಾ ಖ್ಯಾತಿಯ ಶ್ರಾವ್ಯ ಮಾತನಾಡಿ, ನಾನು ಚಿತ್ರದಲ್ಲಿ ಸರಸ್ವತಿ(ಸರಸು)ಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಮೊದಲ ಹದಿನೈದು ದೃಶ್ಯಗಳಲ್ಲಿ ನನಗೆ ಮಾತುಗಳಿಲ್ಲ. ಕೇವಲ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಬೇಕಿದೆ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.
![ಸಂಜು ಚಿತ್ರ ತಂಡ](https://etvbharatimages.akamaized.net/etvbharat/prod-images/05-02-2024/kn-bng-01-sharvyya-sanju-cinemage-sikitu-director-guruprasadu-saatu-7204735_05022024130205_0502f_1707118325_356.jpg)
ಈ ಚಿತ್ರಕ್ಕೆ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಸಂಗೀತವಿದ್ದು, ಚಿತ್ರದಲ್ಲಿ ಎರಡು ಹಾಡುಗಳಿದೆ. ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್ ಹಾಗೂ ನವೀನ್ ಸಜ್ಜು ಹಾಡಿದ್ದಾರೆ. ಇನ್ನು ವಿದ್ಯಾ ನಾಗೇಶ್ ಛಾಯಾಗ್ರಾಹಣವಿದ್ದು, ಮದನ್ - ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಹಾಡು ಹಾಗು ಟೀಸರ್ ನಿಂದ ಗಮನ ಸೆಳೆಯುತ್ತು ಸಂಜು ಸದ್ಯದಲ್ಲೇ ತೆರೆಗೆ ಬರಲಿದೆ.
ಇದನ್ನೂ ಓದಿ: ಹೊಸ ಅಲೆಯ ಚಿತ್ರಗಳು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ: ಗಿರೀಶ್ ಕಾಸರವಳ್ಳಿ