ಅಹಮದಾಬಾದ್: ಅಮೀರ್ ಖಾನ್ ಪುತ್ರ ಜುನೈದ್ ಖಾನ್ ನಟನೆಯ ಚೊಚ್ಚಲ ಚಿತ್ರ 'ಮಹಾರಾಜ್' ಬಿಡುಗಡೆಗೆ ನೀಡಲಾಗಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಗುಜರಾತ್ ಹೈಕೋರ್ಟ್ ಇಂದು ತೆರವುಗೊಳಿಸಿತು. ಚಿತ್ರದಲ್ಲಿ ಯಾವುದೇ ರೀತಿಯ ಅವಹೇಳನಕಾರಿ ದೃಶ್ಯಗಳಿಲ್ಲ. ಇದು ಪುಷ್ಟಿಮಾರ್ಗ್ ಪಂಥದ ಸಮುದಾಯವನ್ನು ಗುರಿಯಾಗಿಸಿಕೊಂಡಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಯಶರಾಜ್ ಫಿಲ್ಮ್ಸ್ ನಿರ್ಮಾಣ, ಸಿದ್ಧಾರ್ಥ ಪಿ.ಮಲ್ಹೋತ್ರಾ ನಿರ್ದೇಶನ 'ಮಹಾರಾಜ್' ನೆಟ್ಫ್ಲಿಕ್ಸ್ನಲ್ಲಿ ಕಳೆದ ಶುಕ್ರವಾರ ಬಿಡುಗಡೆಯಾಗಬೇಕಿತ್ತು.
ಚಿತ್ರ ವೈಷ್ಣವ ಧಾರ್ಮಿಕ ಮುಖಂಡ ಮತ್ತು ಸಮಾಜ ಸುಧಾರಕ ಕರ್ಸಂದಾಸ್ ಮುಲ್ಜಿ ಒಳಗೊಂಡ 1862ರ ಮಾನಹಾನಿ ಪ್ರಕರಣವನ್ನು ಆಧರಿಸಿದೆ. ವೈಷ್ಣವ ಪಂಥ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಿದೆ ಎಂದು ಹಿಂದೂಪರ ಸಂಘಟನೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ಸಂಗೀತಾ ವಿಶೇನ್ ಅವರಿದ್ದ ಪೀಠ, ಜೂನ್ 13ರಂದು ಒಟಿಟಿ ವೇದಿಕೆಯಲ್ಲಿ ಚಿತ್ರದ ಬಿಡುಗಡೆಗೆ ಮಧ್ಯಂತರ ತಡೆ ನೀಡಿತ್ತು. ಯಶರಾಜ್ ಫಿಲ್ಮ್ಸ್ ಮತ್ತು ನೆಟ್‌ಫ್ಲಿಕ್ಸ್ ಹಾಗೂ ಕೇಂದ್ರೀಯ ಸೆನ್ಸಾರ್ ಮಂಡಳಿ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನೋಟಿಸ್ ನೀಡಿತ್ತು.
ಚಿತ್ರ ನಿರ್ಮಾಪಕರು ತಡೆಯಾಜ್ಞೆಯನ್ನು ಪ್ರಶ್ನಿಸಿದ್ದರು. ಗುರುವಾರ ಸಂಜೆ ಹೈಕೋರ್ಟ್ ನ್ಯಾಯಾಧೀಶರು ಚಿತ್ರ ವೀಕ್ಷಿಸಿದ್ದಾರೆ. ನಂತರ ಶುಕ್ರವಾರ ಮಧ್ಯಾಹ್ನ ನಡೆದ ಅಂತಿಮ ವಿಚಾರಣೆಯಲ್ಲಿ ಮಧ್ಯಂತರ ತಡೆಯಾಜ್ಞೆಯನ್ನು ಕೋರ್ಟ್ ತೆರವುಗೊಳಿಸಿತು. ಚಿತ್ರದಲ್ಲಿ ಆಕ್ಷೇಪಾರ್ಹವಾದುದೇನೂ ಇಲ್ಲ. ಇದು ತಾವು ಹೇಳಿದ ಪಂಥದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.