ತಮ್ಮದೇ ರಿವಾಲ್ವಾರ್ನಿಂದ ಮಿಸ್ ಫೈರ್ ಆಗಿ, ಗುಂಡು ಕಾಲಿಗೆ ತಗುಲಿ ಬಾಲಿವುಡ್ ಹಿರಿಯ ನಟ ಮತ್ತು ಶಿವಸೇನಾ ನಾಯಕ ಗೋವಿಂದ ಅವರು ಮಂಗಳವಾರ ಬೆಳಗ್ಗೆ ಗಾಯಗೊಂಡಿದ್ದರು. ಗುಂಡೇಟಿನಿಂದ ಗಾಯಗೊಂಡ ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ನಟನ ಕಾಲಿಗೆ ತಗುಲಿದ ಬುಲೆಟ್ ಎಂದು ಹೇಳಲಾಗುತ್ತಿದೆ.
ನಟನ ಕಾಲಿನಿಂದ ಹೊರತೆಗೆಯಲಾದದ್ದು ಎಂದು ಹೇಳಲಾದ ಗುಂಡಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಫೋಟೋವನ್ನು ಯಾರು ವೈರಲ್ ಮಾಡಿದ್ದಾರೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಆದರೆ, ಪೋಸ್ಟ್ಗಳು ಗೋವಿಂದ ಅವರ ಅಭಿಮಾನಿಗಳ ನಡುವೆ ಚರ್ಚೆ ಹುಟ್ಟುಹಾಕಿದೆ. ಫ್ಯಾನ್ಸ್ ಈ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ.
The bullet is out of the body. He is completely out of danger. #Govinda pic.twitter.com/sNSYI2FJwJ
— Gaurav Srivastav (@gauravnewsman) October 1, 2024
"ಗುಂಡು ಕಾಲಿನಲ್ಲಿ ಸಿಕ್ಕಿಹಾಕಿಕೊಂಡಿದೆ. ಆದ್ರೆ ಯಾವುದೇ ದೊಡ್ಡ ತೊಡಕುಗಳಾಗದಂತೆ ನಾವದನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದೇವೆ" ಎಂದು ಡಾ.ಅಗರ್ವಾಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಆಗಮಿಸಿದ ಗೋವಿಂದ ಅವರ ಕಾಲಿಗೆ 8-10 ಸ್ಟಿಚ್ಡ್ ಹಾಕಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇದೀಗ ಅವರ ಸ್ಥಿತಿ ಸ್ಥಿರವಾಗಿದೆ. ನಟ ಚೇತರಿಸಿಕೊಳ್ಳುತ್ತಿದ್ದು, ರಿಕವರಿ ರೂಮ್ಗೆ ಶಿಫ್ಟ್ ಮಾಡಲಾಗಿದೆ.
ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಅವರು ಈ ಘಟನೆ ಒಂದು ಆ್ಯಕ್ಸಿಡೆಂಟ್ ಎಂದು ಹೇಳಿದ್ದರೆ, ಅವರ ಸಹೋದರ ಕೀರ್ತಿ ಕುಮಾರ್ ಮಾತನಾಡಿ "ಇದೊಂದು ಸ್ಟ್ರೇಂಜ್ ಆ್ಯಕ್ಸಿಡೆಂಟ್, ಆದ್ರೆ ಅವರು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆ ಪಡೆದಿರುವುದು ನಮಗೆ ಸಮಾಧಾನ ತಂದಿದೆ" ಎಂದು ಹೇಳಿದ್ದಾರೆ.
ಗೋವಿಂದ ಅವರು ಆಡಿಯೋ ಮೆಸೇಜ್ ಮೂಲಕ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. "ನನ್ನ ಅಭಿಮಾನಿಗಳು ಮತ್ತು ದೇವರ ಆಶೀರ್ವಾದದಿಂದ ನಾನೀಗ ಬೆಟರ್" ಎಂದು ಹೇಳಿದ್ದಾರೆ. ಕಳೆದ ದಿನ ಬೆಳಗ್ಗೆ ಈ ವಿಷಯ ತಿಳಿದು ಬಂದಿತ್ತು. ನಟನ ಅಪಾರ ಸಂಖ್ಯೆಯ ಅಭಿಮಾನಿಗಳು ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಜೊತೆಗೆ, ಶೀಘ್ರ ಚೇತರಿಕೆಗೆ ಹಾರೈಸಿದ್ದರು.
ಮುಂಬೈ ಪೊಲೀಸರು ಗೋವಿಂದ ಅವರ ರಿವಾಲ್ವರ್ ಅನ್ನು ವಶಪಡಿಸಿಕೊಂಡಿದ್ದಾರೆ. ಘಟನೆ ಬಗ್ಗೆ ತನಿಖೆ ಆರಂಭಿಸಿದ್ದಾರೆ. ನಟನ ನಿವಾಸದಲ್ಲಿ ಪಂಚನಾಮ ನಡೆಸಲಾಗಿದ್ದು, ಅಪರಾಧ ವಿಭಾಗದ ಅಧಿಕಾರಿಗಳು ವಿಚಾರಣೆಯ ಭಾಗವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ನಿನ್ನೆ ಕೋಲ್ಕತ್ತಾಗೆ ಪ್ರಯಾಣಿಸಬೇಕಿದ್ದ ಹಿನ್ನೆಲೆ, ತಮ್ಮ ರಿವಾಲ್ವಾರನ್ನು ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಕೈಯಿಂದ ಆಕಸ್ಮಿಕವಾಗಿ ರಿವಾಲ್ವಾರ್ ಜಾರಿದ ಪರಿಣಾಮ ಗುಂಡು ಹಾರಿತ್ತು. ಬುಲೆಟ್ ನಟನ ಕಾಲಿಗೆ ತಗುಲಿದ್ದರಿಂದ ಗಾಯಗೊಂಡಿದ್ದರು. ತಕ್ಷಣವೇ ನಟನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.