ಹೈದರಾಬಾದ್: ಖ್ಯಾತ ನಟ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಹಾಗೂ ಕ್ಯಾರೆಕ್ಟರ್ ರಿವೀಲ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿವೆ. ಮೇ 22ರಂದು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಭಾಸ್ ಮತ್ತು 'ಕಲ್ಕಿ' ಚಿತ್ರದ 'ಬುಜ್ಜಿ' ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.
ಪ್ರಭಾಸ್ ಹಾಗೂ ಬಹುದೊಡ್ಡ ತಾರಾಗಣದ 'ಕಲ್ಕಿ' ಚಿತ್ರವು ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಸಿನಿಮಾ ಬಿಡುಗಡೆಗೆ ಇನ್ನು ಒಂದು ತಿಂಗಳು ಮಾತ್ರ ಬಾಕಿ ಇದೆ. ಆದಕಾರಣ ನಿರ್ಮಾಪಕರು ಚಿತ್ರದ ಪ್ರಚಾರವನ್ನು ಅದ್ಧೂರಿಯಾಗಿ ನಡೆಸುತ್ತಿದ್ದಾರೆ. ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಸಿರುವ 'ಕಲ್ಕಿ' ಚಿತ್ರದ ಸೂಪರ್ ಸ್ಟಾರ್, 'ಬುಜ್ಜಿ' ಪಾತ್ರವನ್ನು ಮೇ 22ರಂದು ಅನಾವರಣಗೊಳಿಸುವುದಾಗಿ ಚಿತ್ರತಂಡ ಘೋಷಿಸಿದೆ.
ಇತ್ತೀಚೆಗಷ್ಟೇ ಬಿಡುಗಡೆಯಾದ 'ಬಜ್ಜಿ' ಪಾತ್ರದ ವಿಡಿಯೋ ಕೂಡ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಇದೀಗ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮೇ 22ರಂದು ಪ್ರಭಾಸ್ ಮತ್ತು ಅವರ ಆನ್-ಸ್ಕ್ರೀನ್ ಸಹವರ್ತಿ 'ಬುಜ್ಜಿ' ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚಿತ್ರತಂಡವು ಅಧಿಕೃತವಾದ ಮಾಹಿತಿ ಹಂಚಿಕೊಂಡಿದೆ.
'ಕಲ್ಕಿ 2898 ಎಡಿ' ಚಿತ್ರತಂಡವು ಹೊಸ ಪೋಸ್ಟರ್ಅನ್ನೂ ಬಿಡುಗಡೆ ಮಾಡಿದೆ. ನಮ್ಮ ಬುಜ್ಜಿ ಮತ್ತು ಭೈರವ ಅವರನ್ನು ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಮೇ 22ರಂದು ಸಂಜೆ 5 ಗಂಟೆಗೆ ಭೇಟಿ ಮಾಡಿ ಎಂದು ವೈಜಯಂತಿ ಮೂವೀಸ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ನಾಗ್ ಅಶ್ವಿನ್ ನಿರ್ದೇಶಿಸಿದ 'ಕಲ್ಕಿ 2898 ಎಡಿ' ಚಿತ್ರವು ಪೌರಾಣಿಕ ಪ್ರಭಾವಗಳೊಂದಿಗೆ ಭವಿಷ್ಯದ ವೈಜ್ಞಾನಿಕ ಕಾಲ್ಪನಿಕ ಚಿತ್ರವಾಗಿದೆ ಎಂದು ಹೇಳಲಾಗುತ್ತದೆ. ಈ ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಹಿರಿಯ ನಟರಾದ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ.
ಪ್ಯಾನ್ ಇಂಡಿಯಾದ ಈ ಚಿತ್ರವು ಜೂನ್ 27ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಈ ಹಿಂದೆ ಜನವರಿ 12ರಂದು, ಬಳಿಕ ಮೇ 9ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಅಂತಿಮವಾಗಿ ಜೂನ್ 27ರಂದು ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಮೊದಲ ಲುಕ್ಅನ್ನು ಸ್ಯಾನ್ ಡಿಯಾಗೋ ಕಾಮಿಕ್ ಕಾನ್ನಲ್ಲಿ 2023ರ ಜುಲೈ 21ರಂದು ಅನಾವರಣಗೊಳಿಸಲಾಗಿತ್ತು. ಆಗಲೇ ಇದೊಂದು ಪೌರಾಣಿಕ ಒಳನೋಟ ಹೊಂದಿರುವ ಕಥೆಯ ಬಗ್ಗೆ ಸುಳಿವು ನೀಡಿತ್ತು. ಈ ಚಿತ್ರದಲ್ಲಿ ಪ್ರಭಾಸ್ ಭೈರವನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅಶ್ವತ್ಥಾಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಮಲ್ ಹಾಸನ್ ಪಾತ್ರದ ಬಗ್ಗೆ ವಿವರಗಳು ರಹಸ್ಯವಾಗಿದೆ.
ಇದನ್ನೂ ಓದಿ: ಬಾಲಿವುಡ್ ನಟಿ ಕತ್ರಿನಾ ಕೈಫ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರಾ? ನೆಟ್ಟಿಗರ ತಲೆ ಬಿಸಿ ಮಾಡಿದ ಫೋಟೋ