ಅದು 1993ರ ಕಾಲಘಟ್ಟ. ಬಾಲಿವುಡ್ ತಾರೆಯೋರ್ವರು ತಮ್ಮ ಚಿತ್ರವೊಂದಕ್ಕೆ ಕೋಟ್ಯಂತರ ಸಂಭಾವನೆ ತೆಗೆದುಕೊಳ್ಳಲಾರಂಭಿಸಿದರು. ಅಂದಿನಿಂದ, ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ ಬೆಳೆಯುತ್ತಲೇ ಬಂದಿದ್ದಾರೆ. ಹಿಟ್ ಚಿತ್ರಗಳೊಂದಿಗೆ ಭಾರತೀಯ ಸಿನಿ ಮಾರುಕಟ್ಟೆಯಲ್ಲಿ ಕಿಂಗ್ ಎನಿಸಿಕೊಂಡರು. ಪ್ರತೀ ಚಿತ್ರಕ್ಕೆ ಸರಿಸುಮಾರು 100 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಮಾತು ಪ್ರತೀ ಬಾರಿ ದಟ್ಟವಾಗಿ ಕೇಳಿಬರುತ್ತದೆ. ಹೀಗೆ ಭಾರತದ ಅತ್ಯಂತ ಶ್ರೀಮಂತ ನಟ ಎಂಬ ಖ್ಯಾತಿ ಗಳಿಸಿರೋ ಹೀರೋ ಬೇರೆ ಯಾರೂ ಅಲ್ಲ. ಬಾಲಿವುಡ್ ಬಾದ್ ಶಾ ಶಾರುಖ್ ಖಾನ್. ಅವರ ಪಯಣ ಸಾಧಾರಣ ಜೀವನ ಶೈಲಿಯಿಂದ ಹಿಡಿದು, ಐಷಾರಾಮಿ ಮನ್ನತ್ ಬಂಗಲೆ ಹೊಂದುವವರೆಗೆ ತಲುಪಿದೆ.
ಶಾರುಖ್ ಖಾನ್ 30 ವರ್ಷಗಳಿಂದ ಬಾಲಿವುಡ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಯಶಸ್ವಿ ನಾಯಕ ನಟ. ಸಲ್ಮಾನ್ ಖಾನ್, ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಅವರಂತಹ ಬಹುಬೇಡಿಕೆ ನಾಯಕರೆದುರು ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿದ್ದಾರೆ. ಹೀಗೆ ಯಶಸ್ವಿ ವೃತ್ತಿಜೀವನ ಅವರನ್ನು ದೇಶ ಮಾತ್ರವಲ್ಲದೇ ವಿಶ್ವದ ಶ್ರೀಮಂತ ನಟನನ್ನಾಗಿ ಮಾಡಿದೆ. ಆಂಗ್ಲ ಮಾಧ್ಯಮಗಳ ವರದಿಗಳ ಪ್ರಕಾರ, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಆಸ್ತಿ ಸರಿಸುಮಾರು ತಲಾ 3 ಸಾವಿರ ಕೋಟಿ ರೂ., 1,500 ಕೋಟಿ ರೂಪಾಯಿ. ಇಂಡಿಯನ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಆಸ್ತಿ 3,300 ಕೋಟಿ ರೂಪಾಯಿ. ಅದೇ, ಶಾರುಖ್ ಖಾನ್ ಆಸ್ತಿ 6,300 ಕೋಟಿ ರೂ.
ಶಾರುಖ್ ಖಾನ್ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿ, ದೆಹಲಿಯ ಉತ್ತಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಆದರೆ ತಮ್ಮ ಅಧ್ಯಯನವನ್ನು ಬದಿಗಿಟ್ಟು, ಕಿರುತೆರೆ ಕಲಾವಿದನಾಗಲು ನಿರ್ಧರಿಸಿದ ಕೂಡಲೇ ತೊಂದರೆ, ಸವಾಲುಗಳು ಎದುರಾದವು. ಮುಂಬೈ ತಲುಪಿದಾಗ, ಹಣವಿಲ್ಲದೇ ರೈಲ್ವೆ ನಿಲ್ದಾಣ ಹಾಗೂ ಫುಟ್ ಪಾತ್ಗಳಲ್ಲಿ ಮಲಗಿದ್ದರು. ಆ ನಂತರ ಒಂದೊಂದೇ ಹೆಜ್ಜೆ ಇಡುತ್ತಾ ಈ ಹಂತಕ್ಕೆ ಬಂದು ತಲುಪಿದ್ದಾರೆ. ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡ ಹಿನ್ನೆಲೆ, ಶ್ರಮ ಹಾಕಿ ತಮ್ಮ ಪ್ರತಿಭೆಯನ್ನು ಮನೆ ಮನೆಗೆ ತಲುಪಿಸಿದ ಪರಿಣಾಮವಾಗಿ ಮುಂಬೈನ ಬಾಂದ್ರಾದಲ್ಲಿ ನೂರಾರು ಕೋಟಿ ರೂ. ಮೌಲ್ಯದ ಮನ್ನತ್ ಎಂಬ ಐಷಾರಾಮಿ ಬಂಗಲೆ ಕಟ್ಟಲು ಸಾಧ್ಯವಾಯಿತು.
2010ರವರೆಗೂ ಬಾಲಿವುಡ್‌ನಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದ ಶಾರುಖ್ ಖಾನ್ 2013-14ರ ಸಂದರ್ಭ ಕೆಲ ಸಿನಿಮಾಗಳ ಹಿನ್ನಡೆಯಿಂದ ಕಂಗಾಲಾಗಿದ್ದರು. ಚೆನ್ನೈ ಎಕ್ಸ್ಪ್ರೆಸ್, ಹ್ಯಾಪಿ ನ್ಯೂ ಇಯರ್ ಹಿನ್ನಡೆ ಬಳಿಕ ಬಂದ ಫ್ಯಾನ್, ರಯೀಸ್ ಮತ್ತು ಝೀರೋ ಸಿನಿಮಾಗಳು ಕೂಡ ನಿರೀಕ್ಷಿತ ಮಟ್ಟ ತಲುಪಲಿಲ್ಲ. ಹಾಗಾಗಿ 2018ರಿಂದ ಐದು ವರ್ಷಗಳ ಕಾಲ ಕಂಟೆಂಟ್ ಸ್ಟೋರಿಗಳತ್ತ ಗಮನ ಹರಿಸಿ, 2023ರಲ್ಲಿ 'ಪಠಾಣ್' ಮತ್ತು 'ಜವಾನ್' ಮೂಲಕ ತಲಾ ಸಾವಿರ ಕೋಟಿ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅದಾದ ನಂತರ ಬಂದ 'ಡಂಕಿ' ಕೂಡ ಸರಿಸುಮಾರು 470 ಕೋಟಿ ರೂ. ಗಳಿಕೆಯೊಂದಿಗೆ ಉತ್ತಮ ಯಶಸ್ಸು ಪಡೆಯಿತು.
ಇದನ್ನೂ ಓದಿ: ರಾಜಕೀಯ ಸಭೆಗಳಿಗೂ ಮುನ್ನ ದೆಹಲಿಗೆ ಭೇಟಿ ಕೊಟ್ಟ ತಲೈವಾ; ಕುತೂಹಲ ಮೂಡಿಸಿದ ರಜನಿಕಾಂತ್ ನಡೆ - Rajinikanth Visits Delhi