ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್ 'ದಿಲ್ ಖುಷ್' ಚಿತ್ರದ ಹಾಡು ಬಿಡುಗಡೆ ಮಾಡಿದ್ದು, ಹೊಸಬರ ಚಿತ್ರವನ್ನು ಬೆಂಬಲಿಸಿದ್ದಾರೆ.
ಸಾಹಿತಿ ಗೌಸ್ ಫಿರ್ ಬರೆದಿರುವ 'ನೀನೇ ನೀನೇ' ಎಂಬ ಸುಮಧುರ ಹಾಡು ಇತ್ತೀಚಿಗೆ ಬಿಡುಗಡೆಯಾಗಿದೆ. ಸರಿಗಮಪ ಖ್ಯಾತಿಯ ನಿಹಾಲ್ ತೌರೊ ಹಾಗೂ ಆರತಿ ಅಶ್ವಿನ್ ಈ ಹಾಡಿಗೆ ಧ್ವನಿಯಾಗಿದ್ದು, ಪ್ರಸಾದ್ ಕೆ.ಶೆಟ್ಟಿ ಸಂಗೀತ ಒದಗಿಸಿದ್ದಾರೆ.
ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕರಾದ ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಬಹದ್ದೂರ್ ಚೇತನ್ ಕುಮಾರ್, "ಚಿತ್ರದ ಹಾಡುಗಳು ಹಾಗೂ ಟೀಸರ್ ತುಂಬಾ ಚೆನ್ನಾಗಿದೆ. ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಪ್ರಮೋದ್, ಈ ಚಿತ್ರದ ಮೂಲಕ ಪರಿಪೂರ್ಣ ನಿರ್ದೇಶಕರಾಗಿದ್ದಾರೆ. ಮನಸ್ಸು ಉಲ್ಲಾಸಗೊಳಿಸುವ ಹಾಡು ಹಾಗೂ ಟೀಸರ್ ಮೂಲಕ ಭರವಸೆ ಮೂಡಿಸಿದ್ದಾರೆ. ಚಿತ್ರ ಕೂಡ ಚೆನ್ನಾಗಿ ಮೂಡಿ ಬರುವ ನಿರೀಕ್ಷೆ ಇದೆ. ಇತ್ತೀಚೆಗೆ ಉತ್ತಮ ಕಥೆಗಳಿರುವ ಚಿತ್ರಗಳು ಕನ್ನಡದಲ್ಲಿ ಹೆಚ್ಚು ಬರುತ್ತಿದೆ. ದಯವಿಟ್ಟು ಜನ ಕುಟುಂಬ ಸಮೇತ ಚಿತ್ರಮಂದಿರಗಳಿಗೆ ಬಂದು ಹರಸಬೇಕು. ಆಗ ಮಾತ್ರ ಚಿತ್ರಗಳು ಯಶಸ್ಸಿಯಾಗಲು ಸಾಧ್ಯ" ಎಂದು ಮನವಿ ಮಾಡಿದರು.
ನಿರ್ದೇಶಕ ಪ್ರಮೋದ್ ಜಯ ಮಾತನಾಡಿ, "ನಾನು ಸಿಂಪಲ್ ಸುನಿ ಅವರ ಬಳಿ ಸಹ ನಿರ್ದೇಶಕರಾಗಿ ಸಾಕಷ್ಟು ಕೆಲಸ ಕಲಿತಿದ್ದೇನೆ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಹಾಡು ಬಿಡುಗಡೆ ಮಾಡಿಕೊಟ್ಟ ಮೂವರು ನಿರ್ದೇಶಕರಿಗೆ ಧನ್ಯವಾದ. ಚಿತ್ರ ತೆರೆಗೆ ಬರಲು ಅಣಿಯಾಗಿದೆ. ಸದ್ಯದಲ್ಲೇ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದು" ಎಂದರು.
ಯುವ ನಟ ರಂಜಿತ್ ಮಾತನಾಡಿ, "ಈ ಚಿತ್ರದಲ್ಲಿ ಖುಷ್ ನನ್ನ ಹೆಸರು. ಲವಲವಿಕೆಯ ಹುಡುಗನಾಗಿ ಕಾಣಿಸಿಕೊಂಡಿದ್ದೇನೆ" ಎಂದರು. ನಾಯಕಿ ಸ್ಪಂದನ ಸೋಮಣ್ಣ ಮಾತನಾಡಿ, "ದಿಲ್ಮಯ ನನ್ನ ಪಾತ್ರದ ಹೆಸರು. ನನ್ನ ಪಾತ್ರ ಕೂಡ ಚೆನ್ನಾಗಿದೆ" ಎಂದರು.
ಹಿರಿಯ ನಟ ರಂಗಾಯಣ ರಘು, ಅರುಣ ಬಾಲರಾಜ್, ಧರ್ಮಣ್ಣ, ರಘು ರಾಮನಕೊಪ್ಪ ಮಂತಾದ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿವಾಸ್ ನಾರಯಣ್ ಕ್ಯಾಮರಾವರ್ಕ್ ಮಾಡಿದ್ದು, ಪ್ರಸಾದ್ ಕೆ.ಶೆಟ್ಟಿ ಸಂಗೀತ ನೀಡಿದ್ದಾರೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಹಾಗೂ ಪ್ರಭ ಶೇಖರ್ ನಿರ್ಮಿಸಿದ್ದಾರೆ.