ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಸಕ್ಸಸ್ ಆಗೋದು ಸುಲುಭದ ಕೆಲಸವಲ್ಲ. ತಾನು ಎಷ್ಟೇ ಕ್ರಿಯೇಟಿವ್ ಆಗಿದ್ರೂ, ಹಣಕಾಸು ವಿಚಾರಕ್ಕೆ ಪ್ರಾಣವನ್ನ ಕಳೆದುಕೊಂಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಚಿತ್ರರಂಗ ನೋಡಿದೆ. ಇದೀಗ ಕಿರುತೆರೆ ಹಾಗು 'ಅಶೋಕ ಬ್ಲೇಡ್' ಸಿನಿಮಾ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ ಮಾಡಿಕೊಂಡಿದ್ದು, ವಿಚಾರ ಆಪ್ತರು ಹಾಗು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಷ್ಟಕ್ಕೂ ವಿನೋದ್ ದೋಂಡಾಲೆ ಆತ್ಮಹತ್ಯೆ ಕಾರಣ ಏನು ಎಂಬುದರ ಬಗ್ಗೆ ವಿನೋದ್ ಅವರ ಆಪ್ತರಲ್ಲಿ ಒಬ್ಬರಾಗಿರುವ ಸಂಭಾಷಣೆಗಾರ ವಿರೇಂದ್ರ ಮಲ್ಲಣ್ಣ ಮಾತನಾಡಿದ್ದಾರೆ. "ನಿರ್ದೇಶಕ ವಿನೋದ್ ಸಾವಿಗೆ ಕಾರಣ ಅವರೇ ಶುರು ಮಾಡಿದ ಅಶೋಕ ಬ್ಲೇಡ್ ಎಂಬ ಸಿನಿಮಾ. ಆ ಚಿತ್ರ ಅವರ ಸಾವಿಗೆ ಕಾರಣ ಆಗಿದೆ. ಪಿ.ಶೇಷಾದ್ರಿ ಅವರ ಜೊತೆ 8 ವರ್ಷ ಸಿನಿಮಾ, ಧಾರಾವಾಹಿಗಳನ್ನು ಮಾಡಿ ನಂತರ ಮುಕ್ತ ಧಾರಾವಾಹಿಗೆ ಟಿ.ಎನ್. ಸೀತಾರಾಮ್ ಸರ್ ಜೊತೆಯಾದವರು ವಿನೋದ್. ಅಲ್ಲಿಂದ ನರಹರಿರಾವ್, ದೀಪಕ್ ಮತ್ತು ವಿನೋದ್ ಸೇರಿ ತಮ್ಮದೇ ಪ್ರೊಡಕ್ಷನ್ ಹೌಸ್ ಕಟ್ಟಿದರು. ಒಬ್ಬ ಕ್ಯಾಮರಾಮ್ಯಾನ್, ಒಬ್ಬ ನಿರ್ದೇಶಕ, ಮತ್ತೊಬ್ಬ ಪ್ರೊಡಕ್ಷನ್ ಮ್ಯಾನೇಜರ್. ಈ ಕಾಂಬಿನೇಶನ್ ವರ್ಕ್ ಆಗುವ ಸಮಯದಲ್ಲಿ ದೀಪಕ್ ಇಲ್ಲವಾದರು." ಎಂದು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
"ವಿನೋದ್ ದೋಂಡಾಲೆ ಕರಿಮಣಿ, ಮೌನರಾಗ, ಶಾಂತಂ ಪಾಪಂ ಸೇರಿದಂತೆ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶನ ಮಾಡಿ ಸಕ್ಸಸ್ ಕಂಡವರು. ಕಳೆದ 20 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ವಿನೋದ್ ದೋಂಡಾಲೆ ನೀನಾಸಂ ಸತೀಶ್ ನಟನೆಯ ಅಶೋಕ ಬ್ಲೇಡ್ ಚಿತ್ರ ನಿರ್ದೇಶನ ಮಾಡುತ್ತಿದ್ದರು. ಧಾರಾವಾಹಿಯ ಮೂಲಕ ಸ್ವಂತ ಸಿನಿಮಾ ಮಾಡುವಷ್ಟು ಬೆಳೆದರಲ್ಲಾ ಅಂತ ಬಹಳ ಜನರು ಗೆಳೆಯರು ಖುಷಿ ಪಟ್ಟಿದ್ರು. ಬಹುಶಃ ಧಾರಾವಾಹಿಯೇ ಮಾಡಿಕೊಂಡಿದ್ದರೆ ಎಲ್ಲವೂ ಚೆನ್ನಾಗೇ ಇರುತ್ತಿತ್ತೇನೋ. ಆದರೆ, ಸಿನಿಮಾ ಕನಸು ಅಂತೊಂದಿದೆಯಲ್ಲಾ, ಅದು ಎಲ್ಲರ ಪಾಲಿಗೂ ನನಸಾಗುವ ಸವಿಗನಸೇ ಅಲ್ಲ. ದುಃಸ್ವಪ್ನವೂ ಆಗಬಹುದು." ಎಂದರು.
ನೀನಾಸಂ ಸತೀಶ್ ನಾಯಕರಾಗಿ, ಮುಕ್ಕಾಲು ಭಾಗ ಶೂಟಿಂಗ್ ಮಾಡಲಾಗಿತ್ತು. ಆದರೆ ಸಿನೆಮಾ ಇನ್ನೂ ಶೂಟಿಂಗ್ ಮುಗಿದಿರಲಿಲ್ಲ. ಆ ಚಿತ್ರದ ಚಿತ್ರೀಕರಣಕ್ಕಾಗಿ 2-3 ಕೋಟಿಗೂ ಹೆಚ್ಚಿನ ಸಾಲ ಮಾಡಿದ್ರು ಎನ್ನಲಾಗಿದೆ. ನಿರ್ದೇಶಕ ವಿನೋದ್ ದೋಂಡಾಲೆ ಸಾವಿಗೆ ಹಿರಿಯ ನಿರ್ದೇಶಕರಾದ ಪಿ ಶೇಷಾದ್ರಿ, ನಟ ನೀನಾಸಂ ಸತೀಶ್ ಸೇರಿದಂತೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಖ್ಯಾತ ಧಾರಾವಾಹಿಗಳ ನಿರ್ದೇಶಕ ವಿನೋದ್ ದೋಂಡಾಲೆ ಆತ್ಮಹತ್ಯೆ - Director Vinod Dondale Suicide