'ಪೊಗರು' ಬಳಿಕ ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಣ್ಣ ಹಚ್ಚಿರುವ ಬಹುನಿರೀಕ್ಷಿತ ಚಿತ್ರ 'ಮಾರ್ಟಿನ್'. ಪೋಸ್ಟರ್, ಟೀಸರ್ನಿಂದಲೇ ಸೌತ್ ಸಿಸಿ ಇಂಡಸ್ಟ್ರಿಯಲ್ಲಿ ಸಖತ್ ಕ್ರೇಜ್ ಹುಟ್ಟಿಸಿರೋ ಮಾರ್ಟಿನ್ ಬಗ್ಗೆ ಅಭಿಮಾನಿಗಳು ಭಾರಿ ನಿರೀಕ್ಷೆ, ಕುತೂಹಲವನ್ನಿಟ್ಟುಕೊಂಡಿದ್ದಾರೆ. ಎ.ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಅಂದುಕೊಂಡಂತೆ ನಡೆದಿದ್ದರೆ ಇಷ್ಟು ಹೊತ್ತಿಗಾಗಲೇ ತೆರೆ ಮೇಲೆ ಅಬ್ಬರಿಸಬೇಕಿತ್ತು. ಆದರೆ 250 ದಿನಗಳ ಚಿತ್ರೀಕರಣ, ಹೆಚ್ಚು ಸಿ.ಜಿ ವರ್ಕ್ ಇರುವ ಕಾರಣ ಮಾರ್ಟಿನ್ ರಿಲೀಸ್ ಡೇಟ್ ಮುಂದೂಡಿಕೆಯಾಗುತ್ತಾ ಬಂತು. ಇದೀಗ ನಿರ್ಮಾಪಕ ಉದಯ್ ಮೆಹ್ತಾ 'ಮಾರ್ಟಿನ್' ರಿಲೀಸ್ ಡೇಟ್ ಅನ್ನು ಆಫೀಶಿಯಲ್ ಆಗಿ ಅನೌನ್ಸ್ ಮಾಡಿ, ಸಿನಿಪ್ರಿಯರ ಸಂತಸಕ್ಕೆ ಕಾರಣರಾಗಿದ್ದಾರೆ.
ಶುಕ್ರವಾರದಂದು ಖಾಸಗಿ ಹೋಟೆಲ್ನಲ್ಲಿ ಮಾರ್ಟಿನ್ ಚಿತ್ರದ ಬಿಗ್ ಅಪ್ಡೇಟ್ ಕೊಡಲು ನಿರ್ಮಾಪಕ ಉದಯ್ ಮೆಹ್ತಾ, ನಟ ಧ್ರುವ ಸರ್ಜಾ, ನಿರ್ದೇಶಕ ಎ.ಜಿ ಅರ್ಜುನ್, ಕ್ಯಾಮರಾ ಮ್ಯಾನ್ ಸತ್ಯ ಹೆಗ್ಡೆ, ಕಲಾ ನಿರ್ದೇಶಕ ಮೋಹನ್ ಬಿ.ಕೆರೆ ಹಾಗೂ ಹಿನ್ನೆಲೆ ಸಂಗೀತ ನೀಡಿರುವ ರವಿ ಬಸ್ರೂರ್ ಸೇರಿದಂತೆ ಇಡೀ ತಂಡ ಉಪಸ್ಥಿತವಿತ್ತು. ಈವೆಂಟ್ನಲ್ಲಿ ಮಾತನಾಡಿದ ಉದಯ್ ಕೆ ಮೆಹ್ತಾ, ಅಕ್ಟೋಬರ್ 11ಕ್ಕೆ ದೇಶಾದ್ಯಂತ ಮಾರ್ಟಿನ್ ಚಿತ್ರವನ್ನು ಕನ್ನಡ, ತೆಲುಗು, ತಮಿಳು, ಹಿಂದಿ ಹಾಗು ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡುತ್ತೇವೆಂದು ಘೋಷಿಸಿದರು. ಜೊತೆಗೆ ಇಂದಿನಿಂದಲೇ ಸಿನಿಮಾ ಪ್ರಮೋಷನ್ ಶುರುವಾಗಲಿದೆ ಎಂದರು.
ನಿರ್ದೇಶಕ ಎ.ಪಿ. ಅರ್ಜುನ್ ಮಾತನಾಡಿ, ''ನಾನು ಮತ್ತು ನಮ್ಮ ಹೀರೋ ಎಲ್ಲಿ ಹೋದ್ರು ಎಂದು ಕೇಳ್ತಿದ್ರು. ರಿಲೀಸ್ ಯಾವಾಗ ಅಂತಾ ಇನ್ಮುಂದೆ ಕೇಳಬೇಡಿ. ಇದೇ ಲಾಸ್ಟ್, ಸದ್ಯ ತಿಳಿಸಿರುವ ಡೇಟ್ನಲ್ಲೇ ಬಂದೇ ಬರುತ್ತೇವೆ. ನನಗೆ ಎಲ್ಲಾ ಸಿನಿಮಾನ ಕೂಡ ಮೊದಲನೇ ಮಗು. ಲೆಕ್ಕದ ಪ್ರಕಾರ, ಮಾರ್ಟಿನ್ ಆರನೇ ಮಗು. ಎಲ್ಲದಕ್ಕೂ ನಿಮ್ಮೆಲ್ಲರ ಆಶೀರ್ವಾದ ಬೇಕು'' ಎಂದು ಕೇಳಿಕೊಂಡರು.
ನಟ ಧ್ರುವ ಸರ್ಜಾ ಮಾತನಾಡಿ, ಈ ಸಿನಿಮಾಗೆ ಎರಡೂವರೆ ವರ್ಷ ನಾನು ಕೆಲಸ ಮಾಡಿದ್ದೇನೆ. ನೂರಕ್ಕೆ ನೂರರಷ್ಟು ಶ್ರದ್ಧೆಯಿಂದ ಕೆಲಸ ಮಾಡಿದ್ದೇವೆ. ನನ್ನ ಎಲ್ಲಾ ಸಿನಿಮಾಗಳನ್ನು ಕೈ ಹಿಡಿದಿದ್ದೀರ. ನಾವು ಬಂದ ದಾರಿಯನ್ನು ಎಂದಿಗೂ ಮರೆಯಬಾರದು. ಸಿನಿಮಾವನ್ನು ನಮ್ಮ ಕನ್ನಡದಲ್ಲೇ ಮೊದಲು ಘೋಷಣೆ ಮಾಡಿದ್ದೆವು. ಅದೇ ನಮ್ಮ ಆಸೆಯಾಗಿತ್ತು. ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲವೆಂಬ ದೂರಿದೆ. ಅದಕ್ಕೆ ನಾನು ಇನ್ಮುಂದೆ ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡುತ್ತೇನೆಂದು ಅಭಿಮಾನಿಗಳಿಗೆ ಭರವಸೆ ನೀಡಿದರು.
ಮಾರ್ಟಿನ್ ಔಟ್ ಅಂಡ್ ಔಟ್ ಸಾಹಸಮಯ ಚಿತ್ರ. ಇದರಲ್ಲಿ ದೇಶ ಪ್ರೇಮ, ಒಂದು ಮುದ್ದಾದ ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಸ್ಟೋರಿನೂ ಇರಲಿದೆ. ಧ್ರುವ ಸರ್ಜಾ ಜೋಡಿಯಾಗಿ ವೈಭವಿ ಶಾಂಡಿಲ್ಯ ನಟಿಸಿದ್ದು, ಅನ್ವೇಶಿ ಜೈನ್, ನಿಕಿತೀನ್ ಧೀರ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ. ಬೆಂಗಳೂರು, ಕಾಶ್ಮೀರದ ಸುಂದರ ತಾಣಗಳಲ್ಲಿ ಮಾರ್ಟಿನ್ ಚಿತ್ರೀಕರಣ ಮಾಡಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿರಲಿದೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಚಿತ್ರಕ್ಕೆ ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಮಹೇಶ್‌ರೆಡ್ಡಿ ಅವರ ಸಂಕಲನ ಈ ಚಿತ್ರಕ್ಕಿದೆ. ಉದಯ್ ಮೆಹ್ತಾ ಮಾರ್ಟಿನ್ ಚಿತ್ರಕ್ಕೆ ಹಣ ಹೂಡಿದ್ದಾರೆ. ಇದೇ ಮೊದಲ ಬಾರಿಗೆ ನಿರ್ಮಾಪಕ ಉದಯ್ ಮೆಹ್ತಾ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಮಾಡಿದ್ದು, ಈ ವರ್ಷದ ವಿಜಯದಶಮಿಗೆ ಮಾರ್ಟಿನ್ ಬಿಡುಗಡೆಯಾಗಲಿದೆ.