ಬೆಂಗಳೂರು: ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪದಡಿ ನಟ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಗೌಡತಿಯರ ಸೇನೆ ಹೆಸರಿನ ಮಹಿಳಾ ಸಂಘಟನೆಯೊಂದು ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.
ದರ್ಶನ್ ಅಭಿನಯದ ಕಾಟೇರ ಸಿನಿಮಾ ಯಶಸ್ಸು ಹಾಗೂ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಫೆಬ್ರವರಿ 17ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಿರ್ಮಲಾನಂದ ಸ್ವಾಮೀಜಿ, ವಿನಯ್ ಗುರೂಜಿ, ಸಂಸದೆ ಸುಮಲತಾ ಅಂಬರೀಶ್, ನಟರಾದ ವಿನೋದ್ ರಾಜ್, ಪ್ರೇಮ್ ಸೇರಿದಂತೆ ಸಾಕಷ್ಟು ಜನ ಗಣ್ಯರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ದರ್ಶನ್, "ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ" ಎಂಬ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಗೌಡತಿಯರ ಸೇನೆ ಮಹಿಳಾ ಸಂಘಟನೆ, ಮಹಿಳಾ ಆಯೋಗಕ್ಕೆ ದರ್ಶನ್ ವಿರುದ್ಧ ದೂರು ನೀಡಿದೆ.
"ಯುವಜನರಿಗೆ ಮಾದರಿಯಾಗಬೇಕಿದ್ದ ಒಬ್ಬ ನಾಯಕ ನಟ ಅಸಹಜ ಹೇಳಿಕೆಗಳನ್ನು ಕೊಡುತ್ತಿರುವುದು ಸರಿಯಲ್ಲ. ಬೆಳ್ಳಿಪರ್ವ ಕಾರ್ಯಕ್ರಮದಲ್ಲಿ ಗಣ್ಯರು, ಸಾವಿರಾರು ಅಭಿಮಾನಿಗಳ ಎದುರು "ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ಅವಳ ಅಜ್ಜಿನಾ ಬಡಿಯಾ" ಎಂದು ಹೆಣ್ಣು ಮಕ್ಕಳ ಬಗ್ಗೆ ಕೀಳುಭಾವನೆಯಿಂದ ಉಡಾಫೆಯಾಗಿ ಮಾತನಾಡಿದ್ದಾರೆ. ಮಾದರಿಯಾಗಬೇಕಿದ್ದ ನಟ ಈ ರೀತಿ ಮಾತನಾಡುವುದು ಅಕ್ಷಮ್ಯ ಅಪರಾಧವಾಗಿದ್ದು, ವಿಚಾರಣೆ ನಡೆಸಿ, ಆತ ಉಪಯೋಗಿಸಿರುವ ಪದಗಳನ್ನು ಯಾವ ಭಾವನೆಯಿಂದ ಹೇಳಿದ್ದಾರೆಂದು ವಿವರಣೆ ಕೇಳಬೇಕು" ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
"ಈ ನಾಯಕ ಯುವಜನತೆಗೆ ನೀಡುತ್ತಿರುವ ಸಂದೇಶವೇನು ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿ, ಕ್ಷಮೆ ಕೇಳಬೇಕು. ದರ್ಶನ್ ಸಂಪೂರ್ಣವಾಗಿ ಬದಲಾಗಬೇಕು. ತೆರೆಯ ಮೇಲೆ ಹೆಣ್ಣು ಮಕ್ಕಳನ್ನು ಗೌರವಿಸುವಂತೆ ತೆರೆಯ ಹಿಂದೆಯೂ ಗೌರವಿಸಬೇಕು. ಈ ನಿಟ್ಟಿನಲ್ಲಿ ಮಹಿಳಾ ಆಯೋಗ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಮುಂದೆ ಸಾರ್ವಜನಿಕವಾಗಿ ಈ ರೀತಿ ಮಾತನಾಡದಂತೆ ಎಚ್ಚರಿಕೆ ನೀಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ" ಎಂದು ದೂರಿನ ಮೂಲಕ ಗೌಡತಿಯರ ಸೇನೆ ಎಚ್ಚರಿಸಿದೆ.
ಇದನ್ನೂ ಓದಿ: ದರ್ಶನ್ ವೃತ್ತಿಜೀವನಕ್ಕೆ 25 ವರ್ಷದ ಸಂಭ್ರಮ: ಮಂಡ್ಯದಲ್ಲಿಂದು ಅದ್ಧೂರಿ 'D25 ಬೆಳ್ಳಿ ವರ್ವ' ಸಮಾರಂಭ