ಹೈದರಾಬಾದ್: 77ನೇ ಕೇನ್ಸ್ ಚಲನಚಿತ್ರೋತ್ಸವ ಮುಕ್ತಾಯ ಹಂತ ತಲುಪಿದ್ದು, ಪ್ರತಿಷ್ಠಿತ ಪಾಮ್ ಡಿ'ಓರ್ ಪ್ರಶಸ್ತಿಯನ್ನು ಯಾರು ಮುಡಿಗೇರಿಸಿಕೊಳ್ಳುತ್ತಾರೆ ಎಂಬ ಬಗ್ಗೆ ಎಲ್ಲರ ಚಿತ್ತ ನೆಟ್ಟಿದೆ. ಕೇನ್ಸ್ 2024 ಸಮಾರೋಪ ಸಮಾರಂಭವು ಫ್ರಾನ್ಸ್ ಸಮಯ ಸಂಜೆ 6:45ಕ್ಕೆ, ಭಾರತೀಯ ಕಾಲಮಾನ ರಾತ್ರಿ 10:15ಕ್ಕೆ ಪ್ರಾರಂಭವಾಗಲಿದೆ. ಸಮಾರಂಭದ ನೇರ ಪ್ರಸಾರವನ್ನು ಬ್ರೂಟ್ ಇಂಟರ್ನ್ಯಾಷನಲ್ ಅಥವಾ ಫ್ರಾನ್ಸ್ನಲ್ಲಿದ್ದರೆ ಫ್ರಾನ್ಸ್ 2 ನಲ್ಲಿ ವೀಕ್ಷಿಸಬಹುದು.
ಎಲ್ಲರ ಕಣ್ಣುಗಳು ಮುಖ್ಯ ಸ್ಪರ್ಧೆಯಲ್ಲಿ ಪ್ರಥಮ ಪ್ರದರ್ಶನ ಕಂಡ 22 ಚಿತ್ರಗಳ ಮೇಲೆ ನೆಟ್ಟಿದೆ. ಈ ಎಲ್ಲ ಸಿನಿಮಾಗಳು ಪಾಮ್ ಡಿ'ಓರ್ ಮತ್ತು ಗ್ರ್ಯಾಂಡ್ ಪ್ರಿಕ್ಸ್, ಅತ್ಯುತ್ತಮ ನಟಿ ಮತ್ತು ಅತ್ಯುತ್ತಮ ನಟನಂತಹ ಇತರ ಅಪೇಕ್ಷಿತ ಬಹುಮಾನಗಳಿಗಾಗಿ ಪೈಪೋಟಿ ನಡೆಸುತ್ತಿವೆ. ಈ ಬಾರಿ ಗ್ರೆಟಾ ಗೆರ್ವಿಗ್ ನೇತೃತ್ವದ ಒಂಬತ್ತು ಸದಸ್ಯರು ತೀರ್ಪುಗಾರರಾಗಿದ್ದಾರೆ.
ಕೇನ್ಸ್ 2024ನಲ್ಲಿ ಪಾಮ್ ಡಿ'ಓರ್ ಪ್ರಶಸ್ತಿಗೆ ಮುಂಚೂಣಿಯಲ್ಲಿರುವ ಸಿನಿಮಾಗಳು: ಮೊಹಮ್ಮದ್ ರಸೌಲೋಫ್ ಅವರ 'ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್' ಮತ್ತು ಸೀನ್ ಬೇಕರ್ ಅವರ ಅನೋರಾ ಹಾಗೂ ಭಾರತವನ್ನು ಪ್ರತಿನಿಧಿಸುತ್ತಿರುವ ಪಾಯಲ್ ಕಪಾಡಿಯಾ ಅವರ 'ಆಲ್ ವಿ ಇಮ್ಯಾಜಿನ್ ಆಸ್ ಲೈಟ್' ಪ್ರಶಸ್ತಿ ಜಯಿಸುವ ಸಾಲಿನ ಮುಂಚೂಣಿ ಸಿನಿಮಾಗಳಾಗಿವೆ.
ಮೊಹಮ್ಮದ್ ರಸೌಲೋಫ್ ನಿರ್ದೇಶನದ ದಿ ಸೀಡ್ ಆಫ್ ದಿ ಸೇಕ್ರೆಡ್ ಫಿಗ್ ಸಿನಿಮಾ 2022ರಲ್ಲಿನ ಇರಾನ್‌ನ ಪ್ರಕ್ಷುಬ್ಧ ಪರಿಸ್ಥಿತಿ ಮತ್ತು ಇರಾನಿನ ಕುಟುಂಬದ ಹೋರಾಟದ ಕಥಾಹಂದರ ಹೊಂದಿದೆ. ಇರಾನ್‌ನಲ್ಲಿಯೇ ಗೌಪ್ಯವಾಗಿ ಚಿತ್ರೀಕರಿಸಲಾದ ಚಿತ್ರವು ನೈಜ ದೃಶ್ಯಗಳನ್ನು ಒಳಗೊಂಡಿದೆ. ರಸೌಲೋಫ್ ಅವರು ಸೊಹೈಲಾ ಗೊಲೆಸ್ತಾನಿ ನಟನೆ ಮತ್ತು ಮಿಸ್ಸಾಗ್ ಝರೆಹ್ ಅವರ ಛಾಯಾಚಿತ್ರಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ.
ಪಾಯಲ್ ಕಪಾಡಿಯಾ ನಿರ್ದೇಶನದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಭರವಸೆಯಾಗಿದೆ. ಕೇನ್ಸ್‌ನ ಈ ಪ್ರಶಸ್ತಿಯಲ್ಲಿ ಭಾರತೀಯ ಚಲನಚಿತ್ರರಂಗದ ಮೂರು ದಶಕಗಳ ಬರವನ್ನು ಈ ಸಿನಿಮಾ ನೀಗಿಸುತ್ತದೆ ಎಂಬ ಆಸೆ ಚಿಗುರೊಡೆಯುವಂತೆ ಮಾಡಿದೆ. ಮುಂಬೈನ ನಗರದ ಜಂಜಾಟದಲ್ಲಿ ನರ್ಸ್ ಪ್ರಭಾ ಮತ್ತು ಅವಳ ಉತ್ಸಾಹಭರಿತ ರೂಮ್‌ಮೇಟ್ ಅನು ಅವರ ಜೀವನ ಕುರಿತು ಚಿತ್ರ ಕಥೆ ಇದೆ.
ಅನೋರಾ: ಟ್ವಿಸ್ಟ್ ಹೊಂದಿರುವ ಆಧುನಿಕ ದಿನದ ಸಿಂಡ್ರೆಲಾ ಕಥೆ: ಅನೋರಾದಲ್ಲಿ, ದಿ ಫ್ಲೋರಿಡಾ ಪ್ರಾಜೆಕ್ಟ್‌ನ ಹಿಂದೆ ಅಮೆರಿಕನ್ ಚಲನಚಿತ್ರ ನಿರ್ಮಾಪಕರು ಆಧುನಿಕ ಸಿಂಡ್ರೆಲಾ ಕಥೆಯನ್ನು ತಿರುವಿನೊಂದಿಗೆ ರೂಪಿಸಿದ್ದಾರೆ. ಬ್ರೂಕ್ಲಿನ್ ನ ರೋಮಾಂಚಕ ಬೀದಿಗಳಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ಯುವ ಲೈಂಗಿಕ ಕಾರ್ಯಕರ್ತೆಯೊಬ್ಬಳು ರಷ್ಯಾದ ಶ್ರೀಮಂತನ ಮಗನೊಂದಿಗೆ ಪ್ರಣಯದಲ್ಲಿ ಮುಳುಗಿರುವುದನ್ನು ತೋರಿಸುತ್ತದೆ.
ಇನ್ನು ಪಾಯಲ್ ಅವರ ನಿರ್ದೇಶನದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಪಾಮ್ ಡಿ'ಓರ್ ಪ್ರಶಸ್ತಿಯನ್ನು ಗೆದ್ದರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅವರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವಂತೆ ಮಾಡುತ್ತದೆ. ಹಿಂದೆಂದೂ ಭಾರತೀಯ ಮಹಿಳಾ ನಿರ್ದೇಶಕರು ಕೇನ್ಸ್‌ನ ಉನ್ನತ ಪ್ರಶಸ್ತಿಗಾಗಿ ಸ್ಪರ್ಧಿಸಿಲ್ಲ ಅಥವಾ ದೇಶದ ಯಾವುದೇ ಚಲನಚಿತ್ರ ನಿರ್ಮಾಪಕರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ ಪಡೆದಿಲ್ಲ.