ಮುಂಬೈ: ಹಿಂದಿ ಕಿರುತೆರೆ ನಟಿ ಡಾಲಿ ಸೋಹಿ ತಮ್ಮ 48ನೇ ವಯಸ್ಸಿನಲ್ಲಿ ಇಂದು ನಿಧನ ಹೊಂದಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಅವರು ಬಳಲುತ್ತಿದ್ದರು. ನಿನ್ನೆಯಷ್ಟೇ ಸಹೋದರಿ, ನಟಿ ಅಮನದೀಪ್ ಸೋಹಿ ಸಾವನ್ನಪ್ಪಿದ್ದರು. ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಸಹೋದರಿಯರ ಸಾವಿನ ಸುದ್ದಿ ಅಭಿಮಾನಿಗಳು, ಚಿತ್ರರಂಗಕ್ಕೆ ಸಿಡಿಲು ಬಡಿದಂತಾಗಿದೆ.
'ಬಡ್ತಮೀಜ್ ದಿಲ್' ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿದ್ದ ಅಮನದೀಪ್ ಅವರು ಕಾಮಾಲೆ (ಜಾಂಡಿಸ್) ಕಾಯಿಲೆಯಿಂದ ಬಳಲುತ್ತಿದ್ದರು. ಡಾಲಿ ಕುಟುಂಬ ಇಂದು ಮುಂಜಾನೆ ನಿಧನ ವಿಚಾರವನ್ನು ದೃಢಪಡಿಸಿದೆ. ಸಹೋದರ ಮನು ಸೋಹಿ ನಿನ್ನೆ ನಟಿ ಅಮನದೀಪ್ ಸೋಹಿ ನಿಧನ ವಾರ್ತೆಯನ್ನು ಬಹಿರಂಗಪಡಿಸಿದ್ದರು.
ಇಬ್ಬರೂ ಸಹೋದರಿಯರು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಾಲಿಯ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. "ನಮ್ಮ ಪ್ರೀತಿಯ ಡಾಲಿ ಮುಂಜಾನೆ ತನ್ನ ಸ್ವರ್ಗ ನಿವಾಸಕ್ಕೆ ತೆರಳಿದ್ದಾರೆ. ಆಕೆಯ ಸಾವಿನಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ಅಂತಿಮ ವಿಧಿ-ವಿಧಾನಗಳನ್ನು ಇಂದು ನಡೆಸಲಾಗುವುದು" ಎಂದು ಕುಟುಂಬ ತಿಳಿಸಿದೆ.
ಡಾಲಿ ಸೋಹಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರು. ಇತ್ತೀಚಿನ ಪೋಸ್ಟ್‌ಗಳಲ್ಲಿ, ಕ್ಯಾನ್ಸರ್‌ನೊಂದಿಗೆ ತನ್ನ ಸವಾಲಿನ ಪ್ರಯಾಣದ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದರು. ಜೀವನದಲ್ಲಿ ಸ್ಥಿತಿಸ್ಥಾಪಕತ್ವದ ಮಹತ್ವದ ಬಗ್ಗೆಯೂ ಅವರು ಮಾತನಾಡಿದ್ದರು.
ನಟಿ ಡಾಲಿ ಅವನೀತ್ ಧನೋವಾ ಎಂಬವರನ್ನು ವಿವಾಹವಾಗಿದ್ದರು. ದಂಪತಿಗೆ ಅಮೆಲಿ ಎಂಬ ಹೆಣ್ಣು ಮಗಳಿದ್ದಾಳೆ.
ಭಾಭಿ, ಕಲಾಶ್, ಮೇರಿ ಆಶಿಕಿ ತುಮ್ ಸೆ ಹೈ ಮತ್ತು ಖೂಬ್ ಲಾಡಿ ಮರ್ದಾನಿ, ಝಾನ್ಸಿ ಕಿ ರಾಣಿಯಲ್ಲಿನ ತಮ್ಮ ಅಮೋಘ ನಟನೆಯಿಂದ ಡಾಲಿ ಹೆಚ್ಚು ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ನಟಿಯ ಅಗಲಿಕೆಯಿಂದ ಅಭಿಮಾನಿಗಳು ಮತ್ತು ಇಡೀ ಕಿರುತೆರೆ ರಂಗವೇ ಶೋಕದಲ್ಲಿ ಮುಳುಗಿದೆ.
ಇದನ್ನೂ ಓದಿ: ನಿರ್ಮಾಪಕನಿಗೆ ₹ 2.75 ಕೋಟಿ ಮರು ಪಾವತಿಸಲು ಒಪ್ಪಿಕೊಂಡ ಬಾಲಿವುಡ್ ನಟಿ ಅಮೀಶಾ ಪಟೇಲ್