ಬಾಲಿವುಡ್, ತೆಲುಗು ಚಿತ್ರಗಳಲ್ಲಿ ನಟಿಸಿರುವ ಹಾಗೂ ರಾಮ್ ಗೋಪಾಲ್ ವರ್ಮ ಅವರ 'ಡೇಂಜರಸ್' ಚಿತ್ರದ ಮೂಲಕ ಜನಪ್ರಿಯರಾಗಿರುವ ನಟಿ ಅಪ್ಸರ ರಾಣಿ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಎಂ.ಶಂಕರ್ ನಿರ್ದೇಶನ ಹಾಗೂ ನಿರ್ಮಾಣದ 'ಮುದುಡಿದ ಎಲೆಗಳು' ಚಿತ್ರದ ಅತಿಥಿ ಪಾತ್ರದಲ್ಲಿ ಪಾತ್ರ ಮಾಡಿದ್ದಾರೆ. ಅಪ್ಸರ ರಾಣಿ ನಟನೆಯ ಹಾಡಿನ ಚಿತ್ರೀಕರಣ ಇತ್ತೀಚಿಗೆ ಬೆಂಗಳೂರಿನ ಹೆಬ್ಬಾಳದ ಪಶು ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು.
ದುಬಾರಿ ಕಾರಿನಲ್ಲಿ ಕಾಲೇಜಿಗೆ ಕಾಲಿಟ್ಟ ಹುಡುಗಿಯ ಸೌಂದರ್ಯ ಹಾಗೂ ಶೈಲಿಗೆ ಕಾಲೇಜು ಹುಡುಗರು ಮಾರು ಹೋಗುತ್ತಾರೆ. ಹೊಸದಾಗಿ ಕಾಲೇಜು ಸೇರಿರುವ ಹುಡುಗಿ ಇರಬಹುದೆಂದು ಹುಡುಗರು ಆಲೋಚಿಸುತ್ತಿದ್ದಾಗ, ಅವರು ಕಾಲೇಜು ಸೇರಲು ಬಂದಿರುವ ಹುಡುಗಿಯಲ್ಲ. ಕೆಮಿಸ್ಟ್ರಿ ಟೀಚರ್ ಎಂಬುದು ಗೊತ್ತಾಗುತ್ತದೆ. ಇದನ್ನು ನಿರ್ದೇಶಕರು ಹಾಡಿನ ಮೂಲಕ ತೋರಿಸಿದ್ದಾರೆ. ಭಜರಂಗಿ ಮೋಹನ್ ನೃತ್ಯ ಸಂಯೋಜಿಸಿದ ಈ ಹಾಡಿನಲ್ಲಿ ಅಪ್ಸರ ರಾಣಿ, ರಂಜಿತ್ ಕುಮಾರ್ ಹಾಗೂ ಪಂಕಜ್ ನಾರಾಯಣ್ ಅಭಿನಯವನ್ನು ನೋಡಬಹುದು.
ರಂಜಿತ್ ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಪಂಕಜ್ ಎಸ್. ನಾರಾಯಣ್, ಪಾವನ ಗೌಡ, ನಿಕಿತಾ ಸ್ವಾಮಿ, ಸೂರ್ಯದರ್ಶನ್, ಪ್ರೀತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಹರ್ಷಿಕಾ ಪೂಣಚ್ಚ, ರಮೇಶ್ ಭಟ್, ಭವ್ಯ, ಶೋಭರಾಜ್, ಶಂಕರ್ ಅಶ್ವತ್ಥ್, ಪೂನಂ ಪಾಂಡೆ, ಪದ್ಮಾ ವಾಸಂತಿ, ಜೋಸೈಮನ್ ಮುಂತಾದವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ರಿಯೋ ಪ್ರೊಡಕ್ಷನ್ ಫಿಲಂ ಲಾಂಛನದಲ್ಲಿ ಚಿತ್ರ ನಿರ್ಮಿಸುತ್ತಿರುವ ಎಂ.ಶಂಕರ್ ಅವರೇ 'ಮುದುಡಿದ ಎಲೆಗಳು' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ರಂಜನಿ ಸಹ ನಿರ್ಮಾಪಕಿ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣವಿದೆ.
'ಮುದುಡಿದ ಎಲೆಗಳು' ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ಭಾಗಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಒಂದು ಹಾಡಿನ ಚಿತ್ರೀಕರಣ ಕಾಶ್ಮೀರದಲ್ಲಿ ನಡೆದಿದೆ. ಮತ್ತೊಂದು ಹಾಡಿನ ಚಿತ್ರೀಕರಣವನ್ನು ತಜಕಿಸ್ತಾನದಲ್ಲಿ ಮಾಡಲು ಚಿತ್ರತಂಡ ಯೋಜಿಸಿದೆ.
ಇದನ್ನೂ ಓದಿ: ನಿವೇದಿತಾ ಶಿವ ರಾಜ್ಕುಮಾರ್ ನಿರ್ಮಾಣದ 'ಫೈರ್ ಫ್ಲೈ' ಚಿತ್ರದಲ್ಲಿ ಅಚ್ಯುತ್ ಕುಮಾರ್ ಅಭಿನಯ - Fire Fly Movie