ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ನ ಮೊದಲ ವಾರಾಂತ್ಯ ಸಂಚಿಕೆ ವೀಕ್ಷಣೆಗೆ ಕ್ಷಣಗಣನೆ ಆರಂಭವಾಗಿದೆ. ಕೋಟ್ಯಂತರ ಪ್ರೇಕ್ಷಕರನ್ನು ಸಂಪಾದಿಸಿರುವ ಈ ಕಾರ್ಯಕ್ರಮದ ಹೈಲೆಟ್ ಕಿಚ್ಚ ಸುದೀಪ್ ಅಂದ್ರೆ ಅತಿಶಯೋಕ್ತಿಯಲ್ಲ. ವಾರಾಂತ್ಯದ ಕಿಚ್ಚನ ಕತೆ ನೋಡೋದಕ್ಕೆಂದೇ ಅದೆಷ್ಟೋ ಮಂದಿ ಕಾದು ಕುಳಿತಿರುತ್ತಾರೆ. ವಾರದ ಸಂಚಿಕೆಗಳನ್ನು ವೀಕ್ಷಿಸದವರೂ ಕೂಡಾ ವಾರಾಂತ್ಯದ ಎಪಿಸೋಡ್ಗಳನ್ನು ಕಿಚ್ಚ ಸುದೀಪ್ ಅವರಿಗಾಗಿಯೇ ನೋಡೋದುಂಟು. ಅವರ ನಿರೂಪಣಾ ಶೈಲಿ ಅಷ್ಟರ ಮಟ್ಟಿಗೆ ಜನಪ್ರಿಯವಾಗಿದೆ.
ನರಕ ಮತ್ತು ಸ್ವರ್ಗ ಕಾನ್ಸೆಪ್ಟ್ ಮೂಲಕ ನಡೆಯುತ್ತಿರುವ ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮದ ವೀಕೆಂಡ್ ಎಪಿಸೋಡ್ ಇಂದು ಸಂಜೆ ಪ್ರಸಾರ ಕಾಣಲಿದೆ. ಮೊದಲ ವಾರವೇ ಮನೆಯಲ್ಲಿ ಕಿಚ್ಚು ಹೊತ್ತಿದೆ. ಈಗಾಗಲೇ ಸೋಮವಾರದಿಂದ ಶುಕ್ರವಾರದವರೆಗಿನ ಸಂಚಿಕೆಗಳು ಪ್ರಸಾರ ಕಂಡಿವೆ. ಇಂದು ಕಿಚ್ಚನ ಪಂಚಾಯಿತಿ. ಎಪಿಸೋಡ್ ರಿಲೀಸ್ಗೆ ಕ್ಷಣಗಣನೆ ಆರಂಭವಾಗಲಿದ್ದು, ನೋಡುಗರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ.
ಕಿಚ್ಚನ ಮೊದಲ ಪಂಚಾಯ್ತಿಯಲ್ಲಿ ಸರಿ-ತಪ್ಪುಗಳ ನಿರ್ಧಾರ! ವಾರದ ಕತೆ ಕಿಚ್ಚನ ಜೊತೆ. ಇಂದು ರಾತ್ರಿ 9ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.
''ಹೈ-ಡ್ರಾಮಾ ತುಂಬಿದ ಮೊದಲ ವಾರಕ್ಕೆ ಕಿಚ್ಚನ ಮೊದಲ ಪಂಚಾಯ್ತಿ. ವಾರದ ಕತೆ ಕಿಚ್ಚನ ಜೊತೆ'' ಮತ್ತು ''ಕಿಚ್ಚನ ಪಂಚಾಯ್ತಿಯಲ್ಲಿ ಯಾರ ವಿಷ್ಯ ಚರ್ಚೆ ಆಗಲೇಬೇಕು ಕಮೆಂಟ್ ಮಾಡಿ. ವಾರದ ಕತೆ ಕಿಚ್ಚನ ಜೊತೆ'' ಶೀರ್ಷಿಕೆಯಡಿ ಈಗಾಗಲೇ ಪ್ರೋಮೋಗಳು ಅನಾವರಣಗೊಂಡಿವೆ. ಪ್ರೋಮೋಗಳು ಸಂಚಿಕೆಯಲ್ಲಾಗುವ ಚರ್ಚೆ, ಸರಿ ತಪ್ಪುಗಳ ನಿರ್ಧಾರ, ಯಾರು ಎಲಿಮಿನೇಟ್ ಆಗುತ್ತಾರೆ? ಎಂಬುದರ ಬಗ್ಗೆ ಕುತೂಹಲ ಕೆರಳಿಸಿದೆ.
ಎಲಿಮಿನೇಶನ್ಗೆ ನಾಮಿನೇಟ್ ಆದವರಾರು?
- ಯಮುನಾ ಶ್ರೀನಿಧಿ
- ಹಂಸಾ
- ಭವ್ಯಾ ಗೌಡ
- ಲಾಯರ್ ಜಗದೀಶ್
- ಗೌತಮಿ ಜಾದವ್
- ಶಿಶಿರ್ ಶಾಸ್ತ್ರೀ
- ಮಾನಸಾ
- ಮೋಕ್ಷಿತಾ ಪೈ
- ಚೈತ್ರಾ ಕುಂದಾಪುರ
ಇಷ್ಟು ಮಂದಿ ಎಲಿಮಿನೇಶನ್ಗೆ ನಾಮಿನೇಟ್ ಆಗಿದ್ದರು. ಆದ್ರೆ ಹಂಸಾ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆಲುವು ಕಂಡಿರುವ ಹಿನ್ನೆಲೆ, ಎಲಿಮಿನೇಶನ್ನಿಂದ ಪಾರಾಗಿದ್ದಾರೆ. ಉಳಿದವರ ಪೈಕಿ ಈ ವಾರ ಓರ್ವರು ಹೊರ ಹೋಗಲಿದ್ದಾರೆ. ಮೊದಲ ವಾರ ಆದ ಹಿನ್ನೆಲೆ ಎಲಿಮಿನೇಶನ್ ಇರದಿರುವ ಸಾಧ್ಯತೆಗಳೂ ಹೆಚ್ಚಿವೆ. ಯಾವುದಕ್ಕೂ ಸಂಪೂರ್ಣ ಸಂಚಿಕೆ ವೀಕ್ಷಿಸಬೇಕಿದೆ.
ಲಾಯರ್ ಜಗದೀಶ್ ಅವರ ದನಿ ಬಹಳಾನೇ ಏರಿತ್ತು. ತಾನೇ ಬಿಗ್ ಬಾಸ್ ಎಂದು ಹೇಳಿಕೊಂಡಿದ್ದರು. ಅಲ್ಲದೇ ಬಿಗ್ ಬಾಸ್ ಅನ್ನೇ ಎಕ್ಸ್ಪೋಸ್ ಮಾಡುತ್ತೇನೆಂದು ತಿಳಿಸಿದ್ದರು. ಪ್ರತೀ ಬಾರಿಯೂ ಇತರೆ ಸ್ಪರ್ಧಿಗಳನ್ನು ಕೆಣಕುವಂತೆ ಕಂಡುಬಂದಿತ್ತು. ಹಾಗಾಗಿ ಸುದೀಪ್ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಗಳಿವೆ.