'ಭೈರತಿ ರಣಗಲ್' ಕನ್ನಡ ಚಿತ್ರರಂಗ ಮಾತ್ರವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿರುವ ಸಿನಿಮಾ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿರುವ ಭೈರತಿ ರಣಗಲ್ ಈಗಾಗಲೇ ಟೀಸರ್ನಿಂದಲೇ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಕನ್ನಡದ ಬಹುನಿರೀಕ್ಷಿತ ಚಿತ್ರ ಆಗಸ್ಟ್ 15ರಂದೇ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಬಿಡುಗಡೆ ದಿನಾಂಕ ಮುಂದೆ ಹೋಯ್ತು. ಆನಂತರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ಈ ಚಿತ್ರ ಯಾವಾಗ ಬಿಡುಗಡೆಯಾಗಬಹುದೆಂದು ಕಾತುರದಿಂದ ಕಾಯುತ್ತಿದ್ದರು. ಆ ಪ್ರಶ್ನೆಗೀಗ ಉತ್ತರ ಸಿಕ್ಕಿದೆ.
![Bhairathi Ranagal release date announcement event](https://etvbharatimages.akamaized.net/etvbharat/prod-images/27-08-2024/22306239_rsdgtfyrd.jpg)
ಬೆಂಗಳೂರಿನ ಯಲಹಂಕದಲ್ಲಿರುವ ಗ್ಯಾಲೇರಿಯಾ ಮಾಲ್ನಲ್ಲಿ ಇದೇ ಮೊದಲ ಬಾರಿಗೆ ವಿನೂತನವಾಗಿ ಚಿತ್ರಿಸಲಾಗಿರುವ ''Graffiti Art'' ಅನ್ನು ಅನಾವರಣಗೊಳಿಸುವ ಮೂಲಕ "ಭೈರತಿ ರಣಗಲ್" ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಯಿತು. ಬಹುನಿರೀಕ್ಷಿತ ಚಿತ್ರ ನವೆಂಬರ್ 15ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
![Bhairathi Ranagal release date announcement event](https://etvbharatimages.akamaized.net/etvbharat/prod-images/27-08-2024/22306239_ehjsrgfye.jpg)
ನಿರ್ಮಾಪಕಿ ಗೀತಾ ಶಿವರಾಜ್ಕುಮಾರ್, ನಿರ್ದೇಶಕ ನರ್ತನ್ ಹಾಗೂ ನಿವೇದಿತಾ ಶಿವರಾಜ್ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಹಸ್ರಾರು ಅಭಿಮಾನಿಗಳು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು. ಗ್ರ್ಯಾಫಿಟಿ ಆರ್ಟ್ನಲ್ಲಿ ಮೂಡಿಬಂದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಅವರ ಲುಕ್ಗೆ ಅಭಿಮಾನಿಗಳು ಫಿದಾ ಆದರು.
#BhairathiRanagalNovember15 | Release Date of BHAIRATHI RANAGAL in a Massive 3550sq.ft Banger!! From Graffiti to Screens NOVEMBER 15 🪑 @NimmaShivanna #Narthan @rukminitweets @aanandaaudio @RahulBose1 @actorshabeer @RaviBasrur #NaveenKumarI @The_BigLittle
— Geetha Pictures (@GeethaPictures) August 26, 2024
#GeethaPictures pic.twitter.com/vgJ7m3CRWg
ಬಿಡುಗಡೆ ದಿನಾಂಕ ಘೋಷಣೆಯಾದ ನಂತರ ಮಾತನಾಡಿದ ನಿರ್ಮಾಪಕಿ ಗೀತಾ ಶಿವರಾಜಕುಮಾರ್, ಭೈರತಿ ರಣಗಲ್ ನಮ್ಮ ಸಂಸ್ಥೆಯಿಂದ ನಿರ್ಮಾಣವಾಗಿರುವ ಎರಡನೇ ಚಿತ್ರ. ನಮ್ಮ ಸಂಸ್ಥೆಯ ಮೊದಲ ಚಿತ್ರ "ವೇದ"ಗೆ ನೀವೆಲ್ಲರೂ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದಗಳು. ಈ ಚಿತ್ರಕ್ಕೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ವಿನೂತನ ರೀತಿಯಲ್ಲಿ ಬಿಡುಗಡೆ ದಿನಾಂಕ ಅನೌನ್ಸ್ ಆಗಿದೆ. ಮುಂದೆ ಬೆಳಗಾವಿಯಲ್ಲೂ ಈ ಚಿತ್ರದ ಕುರಿತಾದ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಚಿತ್ರದ ಬಿಡುಗಡೆ ದಿನಾಂಕವನ್ನು ವಿಭಿನ್ನವಾಗಿ ಅನೌನ್ಸ್ ಮಾಡಲು ನಿರ್ಧರಿಸಲಾಗಿತ್ತು. ಇದೇ ಮೊದಲ ಬಾರಿಗೆ 3,550 ಸ್ಕ್ವೇರ್ ಫೀಟ್ ವಿಸ್ತೀರ್ಣದ ಬೃಹತ್ 'Graffiti Art' ಅನಾವರಣ ಮಾಡುವ ಮೂಲಕ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸಹಸ್ರಾರು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದೀರಿ. ನಿಮಗೆಲ್ಲರಿಗೂ ಅನಂತ ಧನ್ಯವಾದಗಳು. ನವೆಂಬರ್ 15ರಂದು ನಮ್ಮ ಚಿತ್ರ ಬಿಡುಗಡೆಯಾಗಲಿದೆ. ನಮ್ಮ ಚಿತ್ರವನ್ನು ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನೋಡುವ ಮೂಲಕ ಪ್ರೋತ್ಸಾಹ ನೀಡಿ ಎಂದು ತಿಳಿಸಿದರು ನಿರ್ದೇಶಕ ನರ್ತನ್.
ಇದನ್ನೂ ಓದಿ: ಸೆ.13ಕ್ಕೆ ತೆರೆಕಾಣಲಿದೆ 'ದಿ ಜರ್ನಿ ಅಫ್ ಬೆಳ್ಳಿ': ಅನುಭವ ಹಂಚಿಕೊಂಡ ಚಿತ್ರತಂಡ - The Journey of Belli
'ಮಫ್ತಿ' ಚಿತ್ರದ ಪ್ರೀಕ್ವೆಲ್ ಆಗಿರುವ 'ಭೈರತಿ ರಣಗಲ್’ ಚಿತ್ರವನ್ನು ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜ್ಕುಮಾರ್ ನಿರ್ಮಿಸಿದ್ದಾರೆ. ನರ್ತನ್ ನಿರ್ದೇಶಿಸಿರುವ ಈ ಚಿತ್ರದ ತಾರಾಬಳಗದಲ್ಲಿ ರುಕ್ಮಿಣಿ ವಸಂತ್, ರಾಹುಲ್ ಬೋಸ್, ಅವಿನಾಶ್, ದೇವರಾಜ್, ಮಧು ಗುರುಸ್ವಾಮಿ, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ ಸೇರಿದಂತೆ ಹಲವರಿದ್ದಾರೆ. ನವೀನ್ ಕುಮಾರ್ ಅವರ ಛಾಯಾಗ್ರಹಣ ಮತ್ತು ರವಿ ಬಸ್ರೂರು ಅವರ ಸಂಗೀತ ನಿರ್ದೇಶನ "ಭೈರತಿ ರಣಗಲ್" ಚಿತ್ರಕ್ಕಿದೆ.