ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ನಿರ್ಮಾಣದ 'ಲಾಫಿಂಗ್ ಬುದ್ಧ' ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿ ಗೆಲುವಿನ ನಗೆ ಬೀರಿದೆ. ಪ್ರಮೋದ್ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಕಾಣಿಸಿಕೊಂಡಿರುವ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಸೆಲೆಬ್ರಿಟಿಗಳು ಸಹ ಮೆಚ್ಚಿಕೊಂಡಿದ್ದಾರೆ. ಡೊಳ್ಳೊಟ್ಟೆ ಪೊಲೀಸ್ ಕಾನ್ಸ್ಟೇಬಲ್ ಸುತ್ತ ನಡೆಯುವ ಕಾಮಿಡಿ ಕಥೆಯನ್ನೊಳಗೊಂಡಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಿದು.
ಮಲೆನಾಡಿನ ಶಿವಮೊಗ್ಗದ ಒಂದು ಹಳ್ಳಿಯ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಗೋವರ್ಧನ್ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಕಾಣಿಸಿಕೊಸಿಕೊಂಡಿದ್ದಾರೆ. ಬಾಯಿ ಚಪಲದ ದಡೂತಿ ದೇಹದ ಗೋವರ್ಧನ್, ಕೇವಲ ತಿಂಡಿ ತಿನಿಸು ತಿನ್ನುವುದಷ್ಟೇ ಅಲ್ಲ, ಕೈಗೆ ಬಂದ ಕೇಸ್ ಅನ್ನೂ ಕೂಡಾ ಅಷ್ಟೇ ಚೆನ್ನಾಗಿ ನಿಭಾಯಿಸುವ ಚಾಣಾಕ್ಷ್ಯ. ಇದರ ಜೊತೆಗೆ ದಡೂತಿ ದೇಹದ ಬಗ್ಗೆ ಆಗಾಗ್ಗೆ ಆಪ್ತರಿಂದಲೇ ಡೊಳ್ಳು ಹೊಟ್ಟೆ ಪೊಲೀಸಪ್ಪ ಎಂದು ಅಪಹಾಸ್ಯಕ್ಕೆ ಒಳಗಾಗುತ್ತಿರುತ್ತಾರೆ. ಅದಾಗ್ಯೂ ತನಗೆ ಇಷ್ಟವಾದ ಊಟ, ತಿಂಡಿ ತಿನಿಸು ತಿನ್ನುವುದರ ಜೊತೆಗೆ ತನ್ನ ಕೆಲಸವಾಯ್ತೆಂದು ಜೀವನ ಸಾಗಿಸುತ್ತಿರುತ್ತಾರೆ. ಅಂಥ ಸಂದರ್ಭದಲ್ಲೇ ಗೋವರ್ಧನನ ತೂಕ ಕೆಲಸಕ್ಕೆ ಕುತ್ತು ತರುತ್ತದೆ. ಅಲ್ಲಿಂದ ಲಾಫಿಂಗ್ ಬುದ್ಧನ ಅಸಲಿ ಕಥೆ ಶುರುವಾಗುತ್ತದೆ.
ಸದ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್ಟೇಬಲ್ ಅಧಿಕಾರಿಗಳು ಹಾಗೂ ಕೆಳದರ್ಜೆಯ ಪೊಲೀಸರು ಎದುರಿಸುತ್ತಿರುವ ಸಮಸ್ಯೆಗಳ ಜೊತೆಗೆ ಅವರ ಜೀವನ ಮತ್ತು ಕುಟುಂಬ ನಿರ್ವಹಣೆ ಬಗ್ಗೆ 'ಲಾಫಿಂಗ್ ಬುದ್ಧ' ಬೆಳಕು ಚೆಲ್ಲಿದೆ. ಪ್ರಮೋದ್ ಶೆಟ್ಟಿ ಡೊಳ್ಳು ಹೊಟ್ಟೆ ಗೋವರ್ಧನ್ ಪಾತ್ರಕ್ಕಾಗಿ 35 ಕೆ.ಜಿಗೂ ಅಧಿಕ ತೂಕ ಹೆಚ್ಚಿಸಿಕೊಂಡು ಅಭಿನಯಿಸಿರೋದು ವಿಶೇಷ. ಪ್ರಮೋದ್ ಶೆಟ್ಟಿ ಜೋಡಿಯಾಗಿ ಸತ್ಯವತಿ ಪಾತ್ರದಲ್ಲಿ ತೇಜು ಬೆಳವಾಡಿ ನೋಡುಗರಿಗೆ ಇಷ್ಟವಾಗ್ತಾರೆ. ದಿಗಂತ್ ಮಂಚಾಲೆ ಈ ಚಿತ್ರದಲ್ಲಿ ಹೊಸ ತಿರುವು ನೀಡುವ ಪಾತ್ರ ನಿರ್ವಹಿಸಿದ್ದಾರೆ. ಉಳಿದಂತೆ ಸುಂದರ್ ರಾಜ್ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: ಕಾದಂಬರಿ ಜೇತ್ವಾನಿ ಕುಟುಂಬಕ್ಕೆ ರಾಜಕೀಯ ಮುಖಂಡನಿಂದ ಕಿರುಕುಳ: ಮಾಧ್ಯಮಗಳೆದುರು ಕಣ್ಣೀರಿಟ್ಟ ನಟಿ - Kadambari Jethwani
ಈ ಹಿಂದೆ ನಿರ್ದೇಶಕ ಭರತ್ ರಾಜ್ ಅವರು ರಿಷಬ್ ಶೆಟ್ಟಿ ಜೊತೆಗೆ ಹೀರೋ ಸಿನಿಮಾ ಮಾಡಿದ್ದರು. ಇದೀಗ ಲಾಫಿಂಗ್ ಬುದ್ಧ ಮೂಲಕ ಪೊಲೀಸ್ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದಾರೆ. ಡೊಳ್ಳು ಹೊಟ್ಟೆಯಿಂದ ಏನೆಲ್ಲ ಸಮಸ್ಯೆ, ಅವಮಾನಗಳು ಆಗುತ್ತವೆ ಅನ್ನೋದನ್ನು ತೆರೆಮೇಲೆ ಹೇಳುವ ಪ್ರಯತ್ನ ಮಾಡಿದ್ದಾರೆ. ವಿಷ್ಣು ವಿಜಯ್ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾದರೆ, ಎಸ್ ಚಂದ್ರಶೇಖರ್ ಅವರ ಕ್ಯಾಮರಾ ವರ್ಕ್ ಮತ್ತಷ್ಟು ಮೆರಗು ನೀಡಿದೆ.
ಹೀಗಾಗಿ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳು ಸೇರಿದಂತೆ ಬೆಂಗಳೂರು ನಗರ ಪೊಲೀಸ್ ಕಮೀಷನರ್ ಬಿ. ದಯಾನಂದ್ ಅವರು ಈ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರೀಮಿಯರ್ ಶೋಗೆ ಬಂದಿದ್ದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಈ ಚಿತ್ರ ನಮ್ಮ ಪೊಲೀಸ್ ಇಲಾಖೆಯಲ್ಲಿರುವ ಸಮಸ್ಯೆ ಹಾಗೂ ದಡೂತಿ ದೇಹದಿಂದ ಏನೇನಲ್ಲಾ ತೊಂದತೆ ಆಗುತ್ತದೆ ಅನ್ನೋದನ್ನು ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಾರೆ ಲಾಫಿಂಗ್ ಬುದ್ಧ ಚಿತ್ರವನ್ನು ಕುಟುಂಬ ಸಮೇತ ನೋಡುಬಹುದಾಗಿದ್ದು, ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಗೆಲುವಿನ ಖುಷಿ ಹಂಚಿಕೊಳ್ಳುತ್ತಿದ್ದಾರೆ.