ಕನ್ನಡ ಚಿತ್ರರಂಗದಲ್ಲಿ ಶಕ್ತಿ ದೇವತೆಗಳು ಹಾಗೂ ನಿಗೂಢ ಸ್ಥಳ ಅಥವಾ ಮನೆಗಳ ಬಗ್ಗೆ ಸಿನಿಮಾ ಮಾಡಲು ಮುಂದಾದಾಗ ಆ ಚಿತ್ರತಂಡದವರಿಗೆ ಆಗೋಚರ ಶಕ್ತಿಯ ಅನುಭವ ಆಗೋದು ಸಹಜ. ಅದರಂತೆ, ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ ಬಹುನಿರೀಕ್ಷಿತ ''ಭೈರಾದೇವಿ'' ವಿಚಾರದಲ್ಲೂ ಆಗುತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ, ನಿನ್ನೆಯ ಸೆಲೆಬ್ರಿಟಿ ಶೋನಲ್ಲಿ ಒಂದು ವಿಭಿನ್ನ ಘಟನೆ ನಡೆದಿದೆ.
ಒರಾಯನ್ ಮಾಲ್ನಲ್ಲಿ ಸಿನಿಮಾ ಇಂಡಸ್ಟ್ರಿ ಸ್ನೇಹಿತರಿಗಾಗಿ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ನಿರ್ಮಾಪಕ ರವಿರಾಜ್ ಸ್ಪೆಷಲ್ ಶೋ ಒಂದನ್ನು ಹಮ್ಮಿಕೊಂಡಿದ್ದರು. ಸಿನಿಮಾ ವೀಕ್ಷಣೆ ವೇಳೆ ಕಾಳಿ ದೇವತೆ ಮೈ ಮೇಲೆ ಬಂದ ಹಾಗೆ ಒಬ್ಬ ಮಹಿಳೆ ಆರ್ಭಟಿಸಿದ್ದಾರೆ. ಆ ಸಿನಿಮಾ ನೋಡಲು ಬಂದಿದ್ದ ಸಿನಿಪ್ರಿಯರು, ತಾರೆಯರು ಹಾಗೂ ಭೈರಾದೇವಿ ಚಿತ್ರತಂಡದವರಿಗೆ ಇದು ಅಚ್ಚರಿ ಮೂಡಿಸಿದೆ.
ನಮಗೆ ಹೊಸ ಹೊಸ ಅನುಭವಗಳು ಅರಿವಿಗೆ ಬರ್ತಿವೆ: ಈ ಘಟನೆ ಬಗ್ಗೆ ಗಾಂಧಿನಗರ ಸಿನಿಮಾ ಮಂದಿ (ಕೆಲವರು) ಪ್ರಚಾರ ತಂತ್ರ ಅಂತಾ ಹೇಳುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಹಾಗೂ ರಾಧಿಕಾ ಕುಮಾರಸ್ವಾಮಿ ಸಹೋದರ ರವಿರಾಜ್ ಮಾತನಾಡಿ, ನಿನ್ನೆ ಸಿನಿಮಾ ಪ್ರದರ್ಶನ ವೇಳೆ ಕಾಳಿ ದೇವಿ ಸನ್ನಿವೇಶ ಬಂದಾಗ ಏಕಾಏಕಿ ಮಹಿಳೆ ಕುಣಿದರು. ಆದರೆ, ಈ ಘಟನೆ ನಮಗೆ ಹೊಸತಲ್ಲ. ಏಕೆಂದರೆ ನಾವು ಭೈರಾದೇವಿ ಸಿನಿಮಾ ಶುರು ಮಾಡಿದಾಗಿನಿಂದಲೂ ನಮಗೆ ಈ ರೀತಿಯ ಅನುಭಗಳು ಆಗುತ್ತಿವೆ ಎಂದು ತಿಳಿಸಿದರು.
ಒಮ್ಮೆ ಈ ಚಿತ್ರದ ಪ್ರಚಾರಕ್ಕೆಂದು ಮೈಸೂರಿಗೆ ಹೋದಾಗ, ರಾಧಿಕಾ ಅವರರು ಕಾಳಿ ಅವತಾರದಲ್ಲಿ ಕಾಣಿಸಿಕೊಂಡಿರುವ ಹಾಡು ಬಂದಾಗ ಅಲ್ಲಿ ಇಬ್ಬರು ಹುಡುಗಿಯರು ದೇವಿ ಮೈ ಮೇಲೆ ಬಂದಂತೆ ವರ್ತಿಸಿದ್ದರು. ಆಗ ನಾನೇ ಅವರಿಗೆ ದೃಷ್ಟಿ ತೆಗೆದು ಆಸ್ಪತ್ರೆಗೆ ಸೇರಿಸಿದ್ದೆ. ಹಾಗಾಗಿ ಈ ಘಟನೆ ನಮಗೆ ಹೊಸತನಿಸಲಿಲ್ಲ ಅಂತಾರೆ ರವಿರಾಜ್.
ಇನ್ನೂ ರಾಧಿಕಾ ಅವರಿಗೂ ಬೆಂಗಳೂರಿನ ಸ್ಮಶಾನವೊಂದರಲ್ಲಿ ರಾತ್ರಿ ಚಿತ್ರೀಕರಣ ಮಾಡುವ ಸಂದರ್ಭ ಮೂರು ಗಂಟೆಗಳ ಕಾಲ ಅಭಿನಯಿಸಲು ಆಗಿರಲಿಲ್ಲ. ನಾವು ಈ ಸಿನಿಮಾ ಮಾಡಬೇಕೋ? ಅರ್ಧಕ್ಕೆ ನಿಲ್ಲಿಸಬೇಕೋ? ಎಂಬಂತೆ ಸಮಸ್ಯೆ ಎದುರಾಗಿತ್ತೆಂದು ರವಿರಾಜ್ ಹೇಳಿದರು.
ಕೆಲ ಬಾರಿ ಚಿತ್ರೀಕರಣ ನಿಲ್ಲಿಸಿದ್ದೂ ಇದೆ: ಜೊತೆಗೆ, ಸಿನಿಮಾ ಶೂಟಿಂಗ್ ಸಂದರ್ಭ ನಮಗೆ ಗೊತ್ತಿಲ್ಲದ ಶಕ್ತಿಗಳ ಪರಿಣಾಮದಿಂದ ಸಾಕಷ್ಟು ಬಾರಿ ಚಿತ್ರೀಕರಣ ನಿಲ್ಲಿಸಿದ್ದೇವೆ. ಇಂದಿಗೂ ನಮಗೆ ಸಮಸ್ಯೆಗಳು ಎದುರಾಗುತ್ತಿವೆ. ಒಮ್ಮೆ ರಾಧಿಕಾ ಅವರನ್ನು ಕಾಳಿ ಮೇಕಪ್ನಲ್ಲಿ ನೋಡಿ ನಮಗೇನೆ ಒಮ್ಮೆ ಭಯ ಆಗಿತ್ತು ಎಂದು ತಿಳಿಸಿದರು.
ನಿನ್ನೆ ಸೆಲೆಬ್ರಿಟಿ ಶೋನಲ್ಲಿ ಆ ಮಹಿಳೆ ಕುಣಿದ ಬಗ್ಗೆ ವಿಚಾರಿಸಿದಾಗ, ಈ ಚಿತ್ರದಲ್ಲಿ ನೃತ್ಯ ಸಂಯೋಜನೆ ಮಾಡಿರುವ ಡ್ಯಾನ್ಸ್ ಮಾಸ್ಟರ್ ಮೋಹನ್ ಕಡೆಯವರು ಅನ್ನೋದು ಗೊತ್ತಾಯಿತು. ಹಾಗಾಗಿ, ಕಾಳಿ ದೇವತೆಗೆ ಶಾಂತಿ ಜೊತೆಗೆ ಪೂಜೆ ಮಾಡಲು ತಯಾರಿ ಮಾಡಿಕೊಂಡಿದ್ದೇವೆ ಎಂದು ನಿರ್ಮಾಪಕ ರವಿರಾಜ್ ತಿಳಿಸಿದ್ದಾರೆ.
ಭೈರಾದೇವಿ ಚಿತ್ರ ದೈವ ಹಾಗೂ ದುಷ್ಟ ಶಕ್ತಿಯ ನಡುವ ನಡೆಯುವ ಸಂಘರ್ಷವಾಗಿದ್ದು, ಎರಡು ಶೇಡ್ನಲ್ಲಿ ರಾಧಿಕಾ ಕುಮಾರಸ್ವಾಮಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ಹೆಣ್ಣು ಅಘೋರಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ರಮೇಶ್ ಅರವಿಂದ್, ರಂಗಾಯಣ ರಘು, ರವಿಶಂಕರ್, ಸ್ಕಂದ, ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಗಣ ಇದೆ.
ಇದನ್ನೂ ಓದಿ: 'ಅವಾರ್ಡ್ ಕೊಡುತ್ತೇವೆಂದು ಕರೆಸಿ, ಕೊಡಲಿಲ್ಲ': ಐಫಾ ಬಗ್ಗೆ ನಿರ್ದೇಶಕ ಹೇಮಂತ್ ಅಸಮಾಧಾನ - Hemanth Rao IIFA Experience
ಈ ಹಿಂದೆ ಆರ್ ಎಕ್ಸ್ ಸೂರಿ ಸಿನಿಮಾ ನಿರ್ದೇಶನ ಮಾಡಿ ಗಮನ ಸೆಳೆದಿದ್ದ ಶ್ರೀ ಜೈ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ರವಿರಾಜ್ ನಿರ್ಮಾಣ ಮಾಡಿದ್ದು, ಯಾದವ್ ಅವರ ಸಹ ನಿರ್ಮಾಣವಿದೆ. ಜೆ.ಎಸ್.ವಾಲಿ ಛಾಯಾಗ್ರಹಣ, ಕೆ.ಕೆ.ಸೆಂಥಿಲ್ ಪ್ರಸಾದ್ ಸಂಗೀತ ನಿರ್ದೇಶನ ಹಾಗೂ ರವಿಚಂದ್ರನ್ ಅವರ ಸಂಕಲನವಿದೆ. ಶಮಿಕಾ ಎಂಟರ್ ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಭೈರಾದೇವಿ, ಅಜಾಗ್ರತ ಚಿತ್ರಗಳು ನಿರ್ಮಾಣ ಆಗಿವೆ. ಬಹುನಿರೀಕ್ಷಿತ "ಭೈರಾದೇವಿ" ಚಿತ್ರ ಅಕ್ಟೋಬರ್ 3 ರಂದು ಅದ್ದೂರಿಯಾಗಿ ಬಿಡುಗಡೆಯಾಗಲಿದೆ.