ಕನ್ನಡ ಚಿತ್ರರಂಗದ ಭರವಸೆಯ ನಟ ಡಾಲಿ ಧನಂಜಯ್ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. 38ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ವುಡ್ ನಟರಾಕ್ಷಸನಿಗೆ ಕುಟುಂಬಸ್ಥರು, ಆತ್ಮೀಯರು, ಗೆಳೆಯರು, ಚಿತ್ರರಂಗ ಗಣ್ಯರೂ ಸೇರಿದಂತೆ ಫ್ಯಾನ್ಸ್ ವಿಶ್ ಮಾಡುತ್ತಿದ್ದಾರೆ. ನಿರೀಕ್ಷೆಯಂತೆ ಧನಂಜಯ್ ಮುಖ್ಯಭೂಮಿಕೆಯ ಮುಂದಿನ ಪ್ರಾಜೆಕ್ಟ್ಗಳ ಪೋಸ್ಟರ್ಗಳು ಅನಾವರಣಗೊಳ್ಳುತ್ತಿದೆ. 'ಅಣ್ಣ From Mexico' ನಟನ ಮುಂದಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು.
ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭ ಡಾಲಿ ಧನಂಜಯ್ ನಟನೆಯ ಹೊಸ ಸಿನಿಮಾ, ಪೋಸ್ಟರ್ಸ್, ಟೀಸರ್ಸ್ ಹೀಗೆ ಅಪ್ಡೇಟ್ಸ್ ಅನಾವರಣಗೊಂಡಿತ್ತು. ಅದರಂತೆ, ಸೂಪರ್ ಹಿಟ್ ಬಡವ ರಾಸ್ಕಲ್ ಚಿತ್ರತಂಡದಿಂದ ಹೊಸ ಸಿನಿಮಾ ಘೋಷಣೆಯಾಗಿತ್ತು. ಅದುವೇ 'ಅಣ್ಣ From Mexico'. ಕ್ಯಾಚಿ ಟೈಟಲ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಂತರ, ಡಿಸೆಂಬರ್ ನಡುವಲ್ಲಿ ಮುಹೂರ್ತ ಸಮಾರಂಭ ಕೂಡ ನೆರವೇರಿತ್ತು. 2024ರ ಆರಂಭದಲ್ಲಿ ಸೆಟ್ಟೇರಿದ ಸಿನಿಮಾವಿಂದು ಪೋಸ್ಟರ್ ಅನಾವರಣಗೊಳಿಸಿ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಅಣ್ಣ ಫ್ರಂ ಮೆಕ್ಸಿಕೋ ಶಂಕರ್ ಗುರು ಆ್ಯಕ್ಷನ್ ಕಟ್ ಹೇಳುತ್ತಿರುವ ಎರಡನೇ ಚಿತ್ರ. ಇದೊಂದು ಆ್ಯಕ್ಷನ್ ಸಿನಿಮಾ. ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಪ್ರೊಜೆಕ್ಟ್ ಕೂಡಾ ಹೌದು. ನಿರ್ಮಾಪಕ ಸತ್ಯ ರಾಯಲ ದಿ ರಾಯಲ್ ಸ್ಟುಡಿಯೋಸ್ ಬ್ಯಾನರ್ ಅಡಿ ನಿರ್ಮಾಣ ಮಾಡುತ್ತಿದ್ದಾರೆ. ಐರಾ ಫಿಲ್ಮ್ಸ್ಕೂಡಾ ಕೈ ಜೋಡಿಸಿದೆ. ವಾಸುಕಿ ವೈಭವ್ ಅವರ ಸಂಗೀತ ಈ ಚಿತ್ರಕ್ಕಿದೆ.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೇ ಚಿತ್ರದ ಮೂಲಕ ಡಾಲಿ ಧನಂಜಯ್ ನಿರ್ಮಾಪಕರಾಗಿಯೂ ವೃತ್ತಿಜೀವನ ಆರಂಭಿಸಿದ್ದರು. ಶಂಕರ್ ಗುರು ನಿರ್ದೇಶನದ ಚೊಚ್ಚಲ ಚಿತ್ರವೂ ಹೌದು. ಇದೀಗ ಅಣ್ಣ ಫ್ರಂ ಮೆಕ್ಸಿಕೋ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಸಿನಿಮಾ ಕುರಿತ ಮತ್ತಷ್ಟು ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.
ಡಾಲಿ ಧನಂಜಯ್ ಹೆಚ್ಚಾಗಿ ತಮ್ಮ ಜನ್ಮದಿನವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಾರೆ. ಆದ್ರೆ ಈ ಬಾರಿ ಅದು ಸಾಧ್ಯವಾಗಿಲ್ಲ. ಹಾಗಾಗಿ ಮೊನ್ನೆಯಷ್ಟೇ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ಆಗಸ್ಟ್ 23, ಪ್ರತಿ ವರ್ಷದಂತೆ ನಿಮ್ಮೊಂದಿಗೆ ಹುಟ್ಟುಹಬ್ಬ ಸಂಭ್ರಮಿಸುವ ಉತ್ಸಾಹ ಇದ್ದರೂ ಕೂಡಾ ಕಾರಣಾಂತರಗಳಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ, ಹಾರೈಸಿ. ಆದಷ್ಟು ಬೇಗ ಸಿಗೋಣ, ಸಾಕಷ್ಟು ಒಳ್ಳೆ ವಿಷಯಗಳೊಂದಿಗೆ, ಸಂಭ್ರಮಗಳೊಂದಿಗೆ, ಪ್ರೀತಿಯಿರಲಿ. ಇಂತಿ ನಿಮ್ಮ ಪ್ರೀತಿಯ ಡಾಲಿ ಧನಂಜಯ'' ಎಂದು ಬರೆದುಕೊಂಡಿದ್ದರು. ನಟ ಇದಕ್ಕೆ ಸ್ಪಷ್ಟ ಕಾರಣ ನೀಡಿಲ್ಲ. ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಹಿನ್ನೆಲೆ ಅಭಿಮಾನಿಗಳೊಂದಿಗೆ ಬರ್ತ್ಡೇ ಸೆಲೆಬ್ರೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಊಹಿಸಲಾಗಿದೆ.
ಇದನ್ನೂ ಓದಿ: ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಡಾಲಿ ಧನಂಜಯ್ - Daali Dhananjay Apology