ಕೇನ್ಸ್ (ಫ್ರಾನ್ಸ್): ವಿಶ್ವ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವದೊಂದಿಗಿನ ಭಾರತದ ನಂಟು ಬಹಳ ವರ್ಷದ್ದು. ಭಾರತೀಯ ಸೆಲೆಬ್ರಿಟಿಗಳು ಸಾಗರೋತ್ತರ ಪ್ರದೇಶದ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ಭಾರತ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡು ಇತಿಹಾಸ ಸೃಷ್ಟಿಸಿದೆ.
ಹೌದು, ಅನಸೂಯಾ ಸೇನ್‌ಗುಪ್ತಾ (Anasuya Sengupta) ಅವರು ಕೇನ್ಸ್ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಇತಿಹಾಸ ಸೃಷ್ಟಿಸಿದ್ದಾರೆ. ಜಾಗತಿಕ ಮಟ್ಟದ ಚಲನಚಿತ್ರೋತ್ಸವದ 77ನೇ ಆವೃತ್ತಿಯಲ್ಲಿ ಭಾರತೀಯ ಚಿತ್ರರಂಗ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಇಂದು ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನ ಅಧಿಕೃತ ವೆಬ್‌ಸೈಟ್ ವಿಜೇತರನ್ನು ಘೋಷಿಸಿತು.
ವಿಶೇಷ ಪ್ರದರ್ಶನಗಳಿಂದ ಹಿಡಿದು ಪ್ರಸಿದ್ಧ ರೆಡ್ ಕಾರ್ಪೆಟ್‌ನಲ್ಲಿ ಸೆಲೆಬ್ರಿಟಿಗಳು, ಪ್ರಭಾವಿಗಳು ಬೆರಗುಗೊಳಿಸುವಂಥ ನೋಟ ಬೀರುವವರೆಗೆ ಕೇನ್ಸ್ ಚಲನಚಿತ್ರೋತ್ಸವಕ್ಕೆ ಭಾರತೀಯ ಚಿತ್ರರಂಗ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಅದಾಗ್ಯೂ, ಈ ಬಾರಿ 'ದಿ ಶೇಮ್‌ಲೆಸ್'ನಲ್ಲಿ (The Shameless) ಅನಸೂಯಾ ಅವರ ಅಭಿನಯ ವ್ಯಾಪಕವಾಗಿ ಗಮನ ಸೆಳೆದಿದೆ.
ಬಲ್ಗೇರಿಯನ್ ನಿರ್ದೇಶಕ ಕಾನ್‌ಸ್ಟಾಂಟಿನ್ ಬೊಜಾನೋವ್ ಬರೆದು ನಿರ್ದೇಶಿಸಿರುವ 'ದಿ ಶೇಮ್‌ಲೆಸ್' ರೇಣುಕಾಳ ಕಥೆಯನ್ನು ಹೇಳುತ್ತದೆ. ಕಾನೂನು ಜಾರಿಯೊಂದಿಗೆ, ದೆಹಲಿಯ ವೇಶ್ಯಾಗೃಹದಿಂದ ಪಲಾಯನ ಮಾಡುವ ಕಥೆಯನ್ನು ಚಿತ್ರಿಸಲಾಗಿದೆ. ಅನಸೂಯಾ ಸೇನ್‌ಗುಪ್ತಾರ ಚಿತ್ರಣ ಪ್ರೇಕ್ಷಕರನ್ನು, ವಿಮರ್ಶಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಸದ್ಯ ಅತ್ಯುತ್ತಮ ನಟಿ (Un Certain Regard Prize) ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮೈಸೂರಿನ ಚಿದಾನಂದರ 'ಸನ್‌ಫ್ಲವರ್ಸ್'ಗೆ ಕೇನ್ಸ್‌ನ ಪ್ರತಿಷ್ಠಿತ ಪ್ರಶಸ್ತಿ - Chidananda S Naik
ಅನಸೂಯಾ ಅವರ ಗೆಲುವು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮತ್ತೊಂದು ಮಹತ್ವದ ಕ್ಷಣವಾಗಿದೆ. ಇದಕ್ಕೂ ಮುನ್ನ ಮೈಸೂರಿನ ಚಿದಾನಂದ ಎಸ್.ನಾಯಕ್ ನಿರ್ದೇಶನದ ಸನ್‌ಫ್ಲವರ್ಸ್ ವೇರ್ ದಿ ಫಸ್ಟ್ ಒನ್ಸ್ ಟು ನೋ ಚಿತ್ರ ಲಾ ಸಿನೆಫ್ನಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಇದೇ ಲಾ ಸಿನೆಫ್ ಸ್ಪರ್ಧೆಯಲ್ಲಿ ಮಾನ್ಸಿ ಮಹೇಶ್ವರಿ ನಿರ್ದೇಶನದ 'ಬನ್ನಿಹುಡ್' ಎಂಬ ಅನಿಮೇಟೆಡ್ ಚಿತ್ರ ಮೂರನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ಗ್ರೀಸ್‌ನ ಥೆಸ್ಸಲೋನಿಕಿಯ ಅರಿಸ್ಟಾಟಲ್ ಯೂನಿವರ್ಸಿಟಿಯ ನಿಕೋಸ್ ಕೊಲಿಯೊಕೋಸ್ ನಿರ್ದೇಶನದ 'ದಿ ಚಾಓಸ್ ಶಿ ಲೆಫ್ಟ್ ಬಿಹೈಂಡ್' ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯದ ಆಸ್ಯಾ ಸೆಗಾಲೊವಿಚ್ರ 'ಔಟ್ ಆಫ್ ದಿ ವಿಡೋ ಥ್ರೂ ದಿ ವಾಲ್' ಎರಡನೇ ಸ್ಥಾನ ಹಂಚಿಕೊಂಡಿದೆ.
ಇದನ್ನೂ ಓದಿ: ಅ.11ಕ್ಕೆ ಮಾರ್ಟಿನ್ ಬಿಡುಗಡೆ: ಇನ್ಮುಂದೆ ವರ್ಷಕ್ಕೆ 3 ಸಿನಿಮಾ ಮಾಡುತ್ತೇನೆಂದ ಧ್ರುವ ಸರ್ಜಾ - Martin Release Date