ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಪುಷ್ಪ-2: ದಿ ರೂಲ್' ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದ್ದು, ಬಹುತೇಕ ಮೆಚ್ಚುಗೆ ವ್ಯಕ್ತವಾಗಿದೆ. ಆದ್ರೆ ದುರ್ಘಟನೆಯೊಂದರಲ್ಲಿ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸದ್ಯ ಈ ಪ್ರಕರಣದ ಬಗ್ಗೆ ಅಲ್ಲು ಅರ್ಜುನ್ ತಂಡ ಪ್ರತಿಕ್ರಯೆ ನೀಡಿದೆ.
ಮಹಿಳಾ ಅಭಿಮಾನಿ ಸಾವು: ಇಂದು ಸಿನಿಮಾದ ಅದ್ಧೂರಿ ಬಿಡುಗಡೆ ಹಿನ್ನೆಲೆ, ಕಳೆದ ರಾತ್ರಿ ಹೈದರಾಬಾದ್ನ ಆರ್ಟಿಸಿ ಕ್ರಾಸ್ ರೋಡ್ನ ಸಂಧ್ಯಾ ಥಿಯೇಟರ್ನಲ್ಲಿ ಬೆನಿಫಿಟ್ ಶೋ (ಪ್ರೀ ರಿಲೀಸ್/ಸ್ಪೆಷಲ್ ಶೋ) ಏರ್ಪಡಿಸಲಾಗಿತ್ತು. ಇಲ್ಲಿಗೆ ಅಲ್ಲು ಅರ್ಜುನ್ ಆಗಮಿಸಿದ್ದರು. ಹಾಗಾಗಿ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದು ಜಮಾಯಿಸಿದ್ದರು. ಸ್ಟಾರ್ ಹೀರೋನನ್ನು ನೋಡಲು ಹೆಚ್ಚಿನ ಸಂಖ್ಯೆಯ ಜನರು ಮುಗಿಬಿದ್ದ ಹಿನ್ನೆಲೆ, ಕಾಲ್ತುಳಿತ ಉಂಟಾಯಿತು. ಘಟನೆಯಲ್ಲಿ ಮಹಿಳಾ ಅಭಿಮಾನಿ ಓರ್ವರು ಮೃತಪಟ್ಟಿದ್ದಾರೆ.
ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ, ಪೊಲೀಸರು ಜನರನ್ನು ಚದುರಿಸುವ ವೇಳೆ ರೇವತಿ ಎಂಬ ಮಹಿಳೆ ತಮ್ಮ ಮಗನೊಂದಿಗೆ ಕೆಳಗೆ ಬಿದ್ದಿದ್ದಾರೆ. ಕಾಲ್ತುಳಿತಕ್ಕೆ ಒಳಗಾಗಿ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದರು. ಆ ಕೂಡಲೇ ಪೊಲೀಸರು ಅಮ್ಮ ಮಗನನ್ನು ಪಕ್ಕಕ್ಕೆ ಕರೆದೊಯ್ದು ಸಿಪಿಆರ್ ಮಾಡಿದ್ದಾರೆ. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ತಾಯಿ ಮೃತಪಟ್ಟಿದ್ದಾರೆ. ಮಗನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
We are extremely heartbroken by the tragic incident during last night’s screening. Our thoughts and prayers are with the family and the young child undergoing medical treatment.
— Mythri Movie Makers (@MythriOfficial) December 5, 2024
We are committed to standing by them and extending all possible support during this difficult time.…
ಹೀಗಿದೆ ಅಲ್ಲು ಅರ್ಜುನ್ ತಂಡದ ಪ್ರತಿಕ್ರಿಯೆ? ಸಂಧ್ಯಾ ಥಿಯೇಟರ್ನಲ್ಲಾದ ಘಟನೆಗೆ ಪ್ರತಿಕ್ರಿಯಿಸಿದ ಅಲ್ಲು ಅರ್ಜುನ್ ತಂಡ, ಕಾಲ್ತುಳಿತದ ಘಟನೆ ನಿಜಕ್ಕೂ ದುರಾದೃಷ್ಟಕರ. ಸದ್ಯ ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕುಟುಂಬಕ್ಕೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದೆ.
ಸುಳ್ಳು ಸುದ್ದಿಗಳನ್ನು ಹರಡಿಸಬೇಡಿ: ಗಾಯಗೊಂಡ ಬಾಲಕ ಶ್ರೀತೇಜ್ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 78 ಗಂಟೆ ಕಳೆಯೋವರೆಗೂ ಬಾಲಕನ ಆರೋಗ್ಯದ ಬಗ್ಗೆ ಏನೂ ಹೇಳಲಾಗದು. ಸದ್ಯ ಶ್ರೀತೇಜ್‌ಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಹಲವು ಯೂಟ್ಯೂಬ್ ಚಾನಲ್ಗಳು ಬಾಲಕ ಮೃತಪಟ್ಟಿದ್ದಾನೆ ಎಂದು ಸುಳ್ಳು ಸುದ್ದಿ ಹರಡಿಸಲಾಗುತ್ತಿದೆ. ಈ ಬಗ್ಗೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ಇಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಡಿ ಎಂದ ಅಲ್ಲು ಅರ್ಜುನ್ ತಂಡ, ಎಲ್ಲರೂ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ಕೋರಿದೆ.
ಮೈತ್ರಿ ಮೂವಿ ಮೇಕರ್ಸ್ ಹೇಳಿಕೆ: ಪುಷ್ಪ 2 ನಿರ್ಮಿಸಿರುವ ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸಂತಾಪ ವ್ಯಕ್ತಪಡಿಸಿದೆ. ತಮ್ಮ ಅಧಿಕೃತ ಎಕ್ಸ್ ಪೋಸ್ಟ್ನಲ್ಲಿ, ''ಕಳೆದ ರಾತ್ರಿಯ ಸ್ಕ್ರೀನಿಂಗ್ ಸಮಯದಲ್ಲಿ ಸಂಭವಿಸಿರುವ ದುರಂತ ನಮಗೆ ತೀವ್ರ ದುಃಖ ನೀಡಿದೆ. ನಮ್ಮ ಪ್ರಾರ್ಥನೆ ಆ ಕುಟುಂಬ ಮತ್ತು ಚಿಕಿತ್ಸೆಗೊಳಗಾಗಿರುವ ಚಿಕ್ಕ ಮಗುವಿನೊಂದಿಗಿದೆ. ಈ ಕಠಿಣ ಸಂದರ್ಭ ಅವರೊಂದಿಗೆ ನಿಲ್ಲಲು, ಸಾಧ್ಯವಿರುವ ಎಲ್ಲಾ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.
ಸಿಖಂದರಾಬಾದ್‌ನ ಕಿಮ್ಸ್ ಆಸ್ಪತ್ರೆ ಹೇಳಿಕೆ: ಗಾಯಗೊಂಡ ಬಾಲಕನಿಗೆ ಸಿಕಂದರಾಬಾದ್‌ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. 8 ವರ್ಷದ ಮಗುವನ್ನು ಅರೆಪ್ರಜ್ಞಾವಸ್ಥೆಯಲ್ಲಿ ಎಲರ್ಜೆನ್ಸಿ ರೂಮ್ಗೆ ತರಲಾಯಿತು. ಅದಕ್ಕೂ ಮೊದಲು, ಪೊಲೀಸ್ ಮತ್ತು ಜನರು ಪರಿಸ್ಥಿತಿ ಹದಗೊಳಿಸುವ ಪ್ರಯತ್ನ ಮಾಡಿದ್ದರು. ಸಿಪಿಆರ್ ಕೊಡಲಾಗಿತ್ತು. ನಂತರ, ಆಸ್ಪತ್ರೆಗೆ ದಾಖಲಿಸಲಾಯಿತು. ಮಗುವಿನ ಉಸಿರಾಟದಲ್ಲಿ ತೊಂದರೆ ಇತ್ತು. ಮೆದುಳು ಮತ್ತು ಬೆನ್ನುಮೂಳೆಯ ಸಿ.ಟಿ ಸ್ಕ್ಯಾನ್ ಮಾಡಲಾಗಿದೆ. ಯಾವುದೇ ಗಮನಾರ್ಹ ಅಸಹಜತೆಗಳಿಲ್ಲ. ಲ್ಯಾಕ್ಟಿಕ್ ಆಸಿಡೋಸಿಸ್ ಸುಧಾರಿಸಿದ್ದರೂ ಕೂಡಾ ಮಗು ಸಂಪೂರ್ಣ ಚೇತರಿಸಿಕೊಂಡಿಲ್ಲ. ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ತಂಡ ನಿಗಾ ವಹಿಸಿದೆ.
ಮುಂದುವರಿದ ತನಿಖೆ: ಸಂಧ್ಯಾ ಥಿಯೇಟರ್ನಲ್ಲಾದ ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆಂದು ವರದಿಯಾಗಿದೆ. ಈ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪೈರಸಿಗೆ ಬಲಿಯಾದ 'ಪುಷ್ಪ 2': ತೆರೆಕಂಡ ದಿನವೇ HDಯಲ್ಲಿ ಲೀಕ್ ಆಯ್ತು ಅಲ್ಲು ಅರ್ಜುನ್ ರಶ್ಮಿಕಾ ಸಿನಿಮಾ
ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ಈ ಬಿಗ್ ಬಜೆಟ್ ಪ್ರಾಜೆಕ್ಟ್ ಅನ್ನು ನಿರ್ಮಾಣ ಮಾಡಿದೆ. ಚಿತ್ರಕ್ಕೆ ಸುಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೀಕ್ವೆಲ್ನಲ್ಲಿ ಪುಷ್ಪ ರಾಜ್ ಕಥೆ ಮುಂದುವರಿದಿದೆ. ಪುಷ್ಪ ರಾಜ್ ಪಾತ್ರದಲ್ಲಿ ಅಲ್ಲು ಅರ್ಜುನ್, ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಮುಂದುವರಿದಿದ್ದಾರೆ. ಸಿನಿಮಾ ತನ್ನ ಮೊದಲ ದಿನ ಬರೋಬ್ಬರಿ 270 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎಂದು ಇಂಡಸ್ಟ್ರಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪುಷ್ಪ-2 ಚಿತ್ರದ ಬೆನಿಫಿಟ್ ಶೋದಲ್ಲಿ ಅಲ್ಲು ಅರ್ಜುನ್: ಕಾಲ್ತುಳಿತದಲ್ಲಿ ಮಹಿಳೆ ಸಾವು