ಹೈದರಾಬಾದ್: ಪ್ರತಿಷ್ಠಿತ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ ''ಪುಷ್ಪ 2: ದಿ ರೂಲ್''. ಸಿನಿಮಾ ಸುತ್ತಲಿನ ಕುತೂಹಲ ದೊಡ್ಡ ಮಟ್ಟದಲ್ಲಿರುವ ಈ ಹೊತ್ತಲ್ಲಿ ಚಿತ್ರತಂಡ ಹೊಸ ಪೋಸ್ಟರ್ ಅನಾವರಣಗೊಳಿಸಿದ್ದಾರೆ. ಸಿನಿಮಾದಿಂದ ಹೊಸದಾಗಿ ಬಿಡುಗಡೆಯಾಗಿರುವ ಪೋಸ್ಟರ್ 'ಪುಷ್ಪ 2' ಅದ್ಭುತ ಸಿನಿಮೀಯ ಅನುಭವ ನೀಡಲಿದೆ ಎಂಬ ಭರವಸೆ ಕೊಟ್ಟಿದೆ. ಇದು 2024ರ ಬಹುನಿರೀಕ್ಷಿತ ಪ್ರೊಜೆಕ್ಟ್ಗಳಲ್ಲಿ ಒಂದಾಗಿದೆ.
ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅವರ ಖಡಕ್ ಕ್ಲೋಸ್-ಅಪ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಪೋಸ್ಟರ್ ಪವರ್ಫುಲ್ ಆಗಿ ಮೂಡಿಬಂದಿದೆ. ರೆಡ್ ಕಲರ್ ಥೀಮ್ನಲ್ಲಿ ರೆಡಿಯಾಗಿರುವ ಪೋಸ್ಟರ್ ಅಲ್ಲು ಅರ್ಜುನ್ ನಿಭಾಯಿಸಿರುವ ಪಾತ್ರವಾದ ಪುಷ್ಪ ರಾಜ್ನ ಒಂದು ನೋಟ ಒದಗಿಸಿದೆ. ಕಣ್ಣುಗಳಲ್ಲಿ ತೀವ್ರತರನಾದ ನೋಟವಿದೆ. ಪೋಸ್ಟರ್ ಹಂಚಿಕೊಂಡ ಚಿತ್ರ ತಯಾರಕರು, "ಪುಷ್ಪ 2ಗೆ 100 ದಿನಗಳು. ಐಕಾನಿಕ್ ಬಾಕ್ಸ್ ಆಫೀಸ್ ಅನುಭವಕ್ಕಾಗಿ ಸಿದ್ಧರಾಗಿ. 2024ರ ಡಿಸೆಂಬರ್ 6ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದುಕೊಂಡಿದ್ದಾರೆ.
ಸುಕುಮಾರ್ ನಿರ್ದೇಶನದ 'ಪುಷ್ಪ 2: ದಿ ರೂಲ್' ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಫಹಾದ್ ಫಾಸಿಲ್ ಪ್ರಮುಖ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು, ಅಭಿಮಾನಿಗಳು ಕೌಂಟ್‌ಡೌನ್ ಶುರುಮಾಡಿದ್ದಾರೆ. ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್ ವೀಕ್ಷಿಸಲು ಸಾಕಷ್ಟು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ನಟ ಜಯಸೂರ್ಯ ಸೇರಿ 7 ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಟಿಯರ ಹೇಳಿಕೆ ದಾಖಲು - Sexual Allegations Against Actors
ಮೈತ್ರಿ ಮೂವಿ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಾಣದ ಬಿಗ್ ಬಜೆಟ್ ಚಿತ್ರದಲ್ಲಿ ಕನ್ನಡದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್, ರಾವ್ ರಮೇಶ್, ಜಗದೀಶ್ ಪ್ರತಾಪ್ ಭಂಡಾರಿ, ಜಗಪತಿ ಬಾಬು, ಅಜಯ್, ಬ್ರಹ್ಮಾಜಿ, ಸುನಿಲ್, ಅನಸೂಯಾ ಭಾರದ್ವಾಜ್, ಮೈಮ್ ಗೋಪಿ, ಶ್ರೀತೇಜ್ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ರಕೀಬ್ ಆಲಂ ಅವರ ಸಾಹಿತ್ಯಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದರೆ, ಶ್ರೇಯಾ ಘೋಷಾಲ್ ದನಿಯಾಗಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ, ಬೆಂಗಾಲಿ ಸೇರಿ ಹಲವು ಭಾಷೆಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಈಗಾಗಲೇ ಅನಾವರಣಗೊಂಡಿರುವ ಚಿತ್ರದ ಪೋಸ್ಟರ್ಸ್, ಗ್ಲಿಂಪ್ಸ್ ಸಿನಿಮಾ ಸುತ್ತಲಿನ ಕುತೂಹಲ ಹೆಚ್ಚಿಸಿದೆ.
ಇದನ್ನೂ ಓದಿ: ಚಿತ್ರತಂಡದವರಿಗೆ ಊಟ ಬಡಿಸಿದ ಚಿಯಾನ್ ವಿಕ್ರಮ್: 'ತಂಗಲಾನ್' ಸಂಭ್ರಮಾಚರಣೆಯ ವಿಡಿಯೋ ನೋಡಿ - Thangalaan Success Party