ಯಶಸ್ವಿ ಸಿನಿಮಾಗಳು, ವಿಭಿನ್ನ ಪಾತ್ರಗಳಿಂದ ಹಿಡಿದು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಜನಪ್ರಿಯರಾಗಿರುವ ಆಲಿಯಾ ಭಟ್ ಅವರೀಗ ಅಮೆಜಾನ್ ಒರಿಜಿನಲ್ ಸೀರಿಸ್ 'ಪೋಚರ್'ಗೆ (Poacher) ಕಾರ್ಯನಿರ್ವಾಹಕ ನಿರ್ಮಾಪಕಿಯಾಗುವ ಆಗುವ ಮೂಲಕ ಗಮನ ಸೆಳೆದಿದ್ದಾರೆ. ರಿಚಿ ಮೆಹ್ತಾ ರಚನೆಯ ಈ ಸರಣಿಯು ಭಾರತೀಯ ಇತಿಹಾಸದಲ್ಲೇ, ದಂತಬೇಟೆಗೆ ಸಂಬಂಧಿಸಿದಂತೆ ನಿಜ ಜೀವನದ ದೊಡ್ಡ ಕಥೆಯನ್ನು ಹೇಳಲಿದೆ.
ನಿಮಿಷಾ ಸಜಯನ್, ರೋಷನ್ ಮ್ಯಾಥ್ಯೂ ಮತ್ತು ದಿಬ್ಯೆಂದು ಭಟ್ಟಾಚಾರ್ಯ ಸೇರಿದಂತೆ ಹಲವರು ನಟಿಸಿದ್ದಾರೆ. ಪೋಚರ್ ಭಾರತ ಸೇರಿದಂತೆ 240ಕ್ಕೂ ಹೆಚ್ಚು ದೇಶಗಳಲ್ಲಿ ಇದೇ ಫೆಬ್ರವರಿ 23ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಹುಭಾಷೆಗಳಲ್ಲಿ ಪ್ರೀಮಿಯರ್ ಆಗಲಿದೆ.
ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯೊಂದರಲ್ಲಿ ಮಾತನಾಡಿದ ನಟಿ ಆಲಿಯಾ ಭಟ್, 'ವೈಲ್ಡ್ಲೈಫ್ ಕ್ರೈಮ್ಸ್' ಮೇಲೆ ಬೆಳಕು ಚೆಲ್ಲುವ ಈ ಮಹತ್ವದ ಯೋಜನೆಯ ಭಾಗವಾಗಿರುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದಾರೆ. ರಿಚಿ ಮೆಹ್ತಾ ಅವರ ಸ್ಟೋರಿಟೆಲ್ಲಿಂಗ್ ಶೈಲಿ, ತುರ್ತು ಸಮಸ್ಯೆಗಳ ಕುರಿತಾದ ಸರಣಿಗಳ ರಚನೆ ಬಗ್ಗೆ ಶ್ಲಾಘಿಸಿದರು. 'ಪೋಚರ್' ಸಹಾನುಭೂತಿ ಮತ್ತು ಸಹಬಾಳ್ವೆಯ ಮಹತ್ವದ ಬಗ್ಗೆ ಅರಿವು ಮೂಡಿಸಲಿದೆ ಎಂದು ನಾನು ಭಾವಿಸುತ್ತೇನೆಂದು ನಟಿ ತಿಳಿಸಿದರು.
ಚಲನಚಿತ್ರ ನಿರ್ಮಾಣ ಸಂಸ್ಥೆ 'ಎಟರ್ನಲ್ ಸನ್‌ಶೈನ್ ಪ್ರೊಡಕ್ಷನ್ಸ್' ಮೂಲಕ ನಟಿ ಆಲಿಯಾ ಭಟ್ ನಿರ್ಮಾಪಕಿಯಾಗಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ. 2022ರ ನೆಟ್‌ಫ್ಲಿಕ್ಸ್ ಸಿನಿಮಾ 'ಡಾರ್ಲಿಂಗ್ಸ್' ಇವರ ಚೊಚ್ಚಲ ನಿರ್ಮಾಣದ ಚಿತ್ರವಾಗಿದೆ. ಆಲಿಯಾ, ಸುಸ್ಥಿರತೆ, ಅನಿಮಲ್ ವೆಲ್ಫೇರ್, ಸುಸ್ಥಿರ ಫ್ಯಾಶನ್ ಅನ್ನು ಉತ್ತೇಜಿಸುತ್ತಾ ಬಂದಿದ್ದಾರೆ. ರಿಚಿ ಮೆಹ್ತಾ, ಕ್ಯೂ.ಸಿ ಎಂಟರ್‌ಟೈನ್‌ಮೆಂಟ್ ಮತ್ತು ಪ್ರೈಮ್ ವಿಡಿಯೋ ಸಹಯೋಗದೊಂದಿಗೆ ಆಲಿಯಾ ಭಟ್ ಈ ಸೀರಿಸ್ ಅನ್ನು ನಿರ್ಮಾಣ ಮಾಡುತ್ತಿದ್ದಾರೆ. ತುರ್ತು ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸಕಾರಾತ್ಮಕ ಬದಲಾವಣೆಯನ್ನು ಪ್ರೇರೇಪಿಸುವ ಕಥೆಗಳಿಗೆ ಕೊಡುಗೆ ನೀಡುವ ಗುರಿಯನ್ನು ಆಲಿಯಾ ಹೊಂದಿದ್ದಾರೆ.
ಇದನ್ನೂ ಓದಿ: 'ಲವ್ ಸ್ಟೋರಿಯಾನ್': ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ ನಿಜ ಜೀವನದ 6 ಪ್ರೇಮಕಥೆಗಳ ಸೀರೀಸ್
ಇನ್ನು ಆಲಿಯಾ ಭಟ್ ನಟನೆಯ ಸಿನಿಮಾಗಳನ್ನು ಗಮನಿಸೋದಾದರೆ, ವಾಸನ್ ಬಾಲಾ ನಿರ್ದೇಶನದ 'ಜಿಗ್ರಾ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕರಣ್ ಜೋಹರ್ ನಿರ್ಮಾಣದ ಈ ಚಿತ್ರದಲ್ಲಿ ಆಲಿಯಾ ನಟಿಸುವ ಜೊತೆ ಸಹ-ನಿರ್ಮಾಪಕಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಲವ್ ಆ್ಯಂಡ್ ವಾರ್ ಮತ್ತೊಂದು ಬಹುನಿರೀಕ್ಷಿತ ಸಿನಿಮಾ. ರಾಷ್ಟ್ರಪ್ರಶಸ್ತಿ ವಿಜೇತ ನಟಿಯ ಪತಿ ರಣ್ಬೀರ್ ಕಪೂರ್ ಜೊತೆ ಎರಡನೇ ಬಾರಿ ತೆರೆಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ನಿರೂಪ್ ಭಂಡಾರಿ - ಸಾಯಿಕುಮಾರ್ ನಟನೆಯ ಸಿನಿಮಾ ಟೈಟಲ್ ರಿವೀಲ್; ಹೆಚ್ಚಿದ ಕುತೂಹಲ
ರಣ್ಬೀರ್ ಕಪೂರ್ ಜೊತೆ ಮೊದಲ ಬಾರಿ ಬ್ರಹ್ಮಾಸ್ತ್ರದಲ್ಲಿ ತೆರೆ ಹಂಚಿಕೊಂಡರೆ, 2022ರಲ್ಲಿ ಬಿಡುಗಡೆಯಾದ ಗಂಗೂಬಾಯಿ ಕಥಿಯಾವಾಡಿ ಚಿತ್ರವನ್ನು ಸಂಜಯ್ ಲಿಲಾ ಬನ್ಸಾಲಿ ನಿರ್ದೇಶಿಸಿದ್ದರು. ಇದೇ ಚಿತ್ರದ ಮೂಲಕ ಆಲಿಯಾರ ಪಾಲಿಗೆ ರಾಷ್ಟ್ರೀಯ ಚಲಚಿತ್ರ ಪ್ರಶಸ್ತಿ ಒಲಿದು ಬಂತು. ಇದಲ್ಲದೇ, ವಿಕ್ಕಿ ಮತ್ತು ಆಲಿಯಾ 2018ರ 'ರಾಝಿ' ಸಿನಿಮಾದಲ್ಲಿ ಮೊದಲ ಬಾರಿ ಸ್ಕ್ರೀನ್ ಶೇರ್ ಮಾಡಿ ಪ್ರೇಕ್ಷಕರ ಮನ ಗೆದ್ದಿದ್ದರು.