ಬಾಲಿವುಡ್ನ ಪವರ್ಫುಲ್ ಕಪಲ್ ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರಾ? ಎಂಬ ಪ್ರಶ್ನೆ ಬಹಳ ದಿನಗಳ ಹಿಂದೆಯೇ ಎದ್ದಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ತಾರಾ ದಂಪತಿಯಾಗಿ ಗುರುತಿಸಿಕೊಂಡಿರುವ ಐಶ್ ಅಭಿ ಸಂಬಂಧದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಗಳು ನಿನ್ನೆ ಮೊನ್ನೆಯದ್ದಲ್ಲ. ವಿಚ್ಛೇದನ ಸುತ್ತ ಹಲವು ಅಂತೆ- ಕಂತೆಗಳು ಎದ್ದಿದ್ದು, ದಂಪತಿ ಈ ಬಗ್ಗೆ ಏನನ್ನೂ ಘೋಷಿಸದ ಹಿನ್ನೆಲೆ ಸದ್ಯಕ್ಕಿದು ವದಂತಿಯಷ್ಟೇ.
ಈ ಬಗ್ಗೆ ಏನಾದರೂ ಸಿಗಲಿದೆಯೇ ಎಂದು ಸೋಷಿಯಲ್ ಮೀಡಿಯಾ ಅಗೆಯುವ ಟ್ರೋಲಿಗರೇ ಟ್ರೋಲ್ ಆಗುವ ಪರಿಸ್ಥಿತಿ ಬಂದಿದೆ. ಏಕೆಂದರೆ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ. ಪ್ರೀತಿ, ಸಂತೋಷ ತುಂಬಿದ ಆತ್ಮೀಯ ಕ್ಷಣವೊಂದು ಇದೀಗ ಇದೇ ಇಂಟರ್ನೆಟ್ನಲ್ಲಿ ಕಂಡುಬಂದಿದೆ. ಹಾಗಂತ ಇದು ಹಳೇ ಫೋಟೋ ಏನಲ್ಲ.
ಬಚ್ಚನ್ ಕುಟುಂಬದಲ್ಲಿ ಬಿರುಕು ಮೂಡಿದೆಯಾ? ಐಶ್ವರ್ಯಾ ಹೊರಬಂದಿದ್ದಾರಾ? ಎಂಬ ಪ್ರಶ್ನೆ ಬಹಳ ಸಮಯದ ಹಿಂದೆಯೇ ಎದ್ದಿತ್ತು. ವದಂತಿಗಳಿಗೆ ಪೂರಕವಾಗಿ, ಇದೇ ಸಾಲಿನ ಜುಲೈನಲ್ಲಿ ನಡೆದ ಅಂಬಾನಿ ಕುಟುಂಬದ ಅದ್ದೂರಿ ವಿವಾಹ ಸಮಾರಂಭಕ್ಕೆ ಐಶ್ವರ್ಯಾ ರೈ ಪ್ರತ್ಯೇಕವಾಗಿ ಆಗಮಿಸಿದರು. ಪತಿ ಅಭಿಷೇಕ್ ಅವರು ತಮ್ಮ ತಂದೆ, ಭಾರತೀಯ ಚಿತ್ರರಂಗದ ಹಿರಿಯ ನಟ ಅಮಿತಾಭ್ ಬಚ್ಚನ್ ಸೇರಿ ತಮ್ಮ ಕಂಪ್ಲೀಟ್ ಫ್ಯಾಮಿಲಿ ಜೊತೆ ಅಂಬಾನಿ ವೆಡ್ಡಿಂಗ್ಗೆ ಎಂಟ್ರಿ ಕೊಟ್ರೆ, ಐಶ್ ಕೇವಲ ಮಗಳು ಆರಾಧ್ಯ ಜೊತೆ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದರು. ಇದು ದೊಡ್ಡ ಮಟ್ಟದ ವದಂತಿಗಳಿಗೆ ಕಾರಣವಾಗಿತ್ತು. ಈವೆಂಟ್ ನಡೆದ ಸ್ಥಳದಲ್ಲಿ ಐಶ್ ಅಭಿ ಒಟ್ಟಿಗೆ ಕುಳಿತಿರುವ ಫೋಟೋ ವೈರಲ್ ಆದ್ರೂ ಕೂಡಾ, ದಂಪತಿ ಸಮಾರಂಭಕ್ಕೆ ಪ್ರತ್ಯೇಕವಾಗಿ ಆಗಮಿಸಿದ್ದೇ ತಪ್ಪು ಎಂಬಂತೆ ಬಿಂಬಿಸಲಾಗಿತ್ತು.
ಇದನ್ನೂ ಓದಿ: ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ
ವದಂತಿಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಕೇಳಿ ಬಂದಿದ್ರೂ ಜೋಡಿ ಮಾತ್ರ ಡೋಂಟ್ ಕೇರ್. ವದಂತಿಗಳನ್ನುದ್ದೇಶಿಸಿ ಮಾತನಾಡುವ ರಿಸ್ಕ್ ತೆಗೆದುಕೊಂಡಿಲ್ಲ. ಡಿವೋರ್ಸ್ ರೂಮರ್ಸ್ ನಡುವೆ ಜೋಡಿ ಈಗ ಜೊತೆಯಾಗಿ ಕಾಣಿಸಿಕೊಂಡಿದೆ. ಟ್ರೋಲಿಗರೇ ಟ್ರೋಲ್ ಆದಂತೆ ತೋರುತ್ತಿದೆ. ಐಶ್ವರ್ಯಾ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಜೊತೆ ಐಶ್ ಅವರ ತಾಯಿಯೂ ಇದ್ದಾರೆ. ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಇದನ್ನೂ ಓದಿ: ಅಬ್ಬಬ್ಬಾ, ಆರ್ಆರ್ಆರ್ ದಾಖಲೆ ಪುಡಿಗಟ್ಟಿದ 'ಪುಷ್ಪ 2': ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಿದು
ಫೋಟೋ ಹಂಚಿಕೊಂಡ ಅನು ರಂಜನ್ ''ಸೋ ಮಚ್ ಲವ್" ಎಂಬ ಕ್ಯಾಪ್ಷನ್ ಕೊಟ್ಟಿದ್ದಾರೆ. ಈ ಪೋಸ್ಟ್ಗೆ ನೆಟಿಜನ್ಗಳಿಂದ ಅಪಾರ ಬೆಂಬಲ ವ್ಯಕ್ತವಾಗಿದೆ. ಸುಳ್ಳು ವದಂತಿಗಳನ್ನು ಕೊನೆಗೊಳಿಸಲು ಪೋಸ್ಟ್ ಹೇಗೆ ಸಹಾಯ ಮಾಡಿದೆ ಎಂಬರ್ಥದಲ್ಲಿ ಹಲವರು ಕಾಮೆಂಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಅನು ರಂಜನ್ ಅವರಿಗೆ 'ಎಲ್ಲರ ಮನಸ್ಥಿತಿಯನ್ನು ಬದಲಾಯಿಸಿದ್ದಕ್ಕಾಗಿ' ಧನ್ಯವಾದ ಅರ್ಪಿಸಿದರು. ಇತರರು ದಂಪತಿ ನಿಜವಾಗಿಯೂ ಒಟ್ಟಿಗೆ ಮತ್ತು ಸಂತೋಷವಾಗಿದ್ದಾರೆ ಎಂಬುದನ್ನು ದೃಢೀಕರಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಮತ್ತೋರ್ವ ಅಭಿಮಾನಿ "ಫೈನಲಿ, ಎಲ್ಲವೂ ಸೋಷಿಯಲ್ ಮೀಡಿಯಾದ ಗ್ರಹಿಕೆಗಳು... ಥ್ಯಾಂಕ್ ಗಾಡ್, ಅವರಿನ್ನೂ ಒಟ್ಟಿಗೆ ಇದ್ದಾರೆ" ಎಂದು ಬರೆದುಕೊಂಡಿದ್ದಾರೆ.