ವಿನೋದ್ ಪ್ರಭಾಕರ್ ಅಭಿನಯದ 'ರಗಡ್' ಸಿನಿಮಾ ನಿರ್ಮಾಪಕ ಅರುಣ್ ಕುಮಾರ್ ನಿರ್ಮಾಣ ಹಾಗೂ ರಂಜಿತ್ ನಿರ್ದೇಶನದಲ್ಲಿ ''ಕಾಗದ'' ಶೀರ್ಷಿಕೆಯ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಯುವ ಪ್ರತಿಭೆಗಳಾದ ಆದಿತ್ಯ ಹಾಗೂ ಅಂಕಿತ ಜಯರಾಂ ಅಭಿನಯದ ಚಿತ್ರ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದು, ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿತು. ಬಿಜೆಪಿ ಮುಖಂಡ ರಾಘವೇಂದ್ರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಹಾರೈಸಿದರು.
ಟ್ರೇಲರ್ ಅನಾವರಣಗೊಂಡ ಬಳಿಕ ನಿರ್ದೇಶಕ ರಂಜಿತ್ ಮಾತನಾಡಿ, 'ಕಾಗದ' 2005ರಲ್ಲಿ ನಡೆದ ಪ್ರೇಮಕಥೆ. ಯುವಜನತೆಯ ಕೈಯಲ್ಲಿ ಇನ್ನೂ ಮೊಬೈಲ್ ಬಂದಿರದ ಕಾಲವದು. ಕಾಗದದಲ್ಲೇ ಪ್ರೀತಿ ವಿನಿಮಯವಾಗುತ್ತಿದ್ದ ಕಾಲಘಟ್ಟದ ಕಥೆ. ಪರಸ್ಪರ ದ್ವೇಷಿಸುವ ಎರಡು ಹಳ್ಳಿಗಳ ಯುವಮನಸ್ಸುಗಳ ನಡುವೆ ಅರಳಿದ ಪ್ರೇಮಕಥೆ. 'ಆಪಲ್ ಕೇಕ್' ನಂತರ ಬರುತ್ತಿರುವ ನನ್ನ ಎರಡನೇ ನಿರ್ದೇಶನದ ಚಿತ್ರ. ಸಿನಿಮಾ ಚೆನ್ನಾಗಿ ಮೂಡಿ ಬಂದಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಿರ್ಮಾಪಕ ಅರುಣ್ ಕುಮಾರ್ ಮಾತನಾಡಿ, ನನಗೆ ಮೊದಲಿನಿಂದಲೂ ಹಿಂದು-ಮುಸ್ಲಿಂ ಲವ್ ಸ್ಟೋರಿಯ ಸಿನಿಮಾ ಮಾಡುವ ಆಸೆಯಿತ್ತು. ಆದರೆ ಮನಮುಟ್ಟುವಂತೆ ಯಾರೂ ಕಥೆ ಹೇಳುತ್ತಿರಲಿಲ್ಲ. ಆದ್ರೆ ನನ್ನನ್ನು ಒಪ್ಪಿಸುವಲ್ಲಿ ರಂಜಿತ್ ಯಶಸ್ವಿಯಾದರು. ನಾವು ಈ ಚಿತ್ರದಲ್ಲಿ ಯಾವುದೇ ಧರ್ಮದ ಭಾವನೆಗಳಿಗ ಧಕ್ಕೆ ತರುವ ಸನ್ನಿವೇಶಗಳನ್ನು ತೋರಿಸಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯತ್ವ ಎಷ್ಟು ಮುಖ್ಯ ಎಂಬ ಸಂದೇಶ ಸಾರುವ ಪ್ರಯತ್ನ ಮಾಡಿದ್ದೇವೆ. ನನ್ನ ಮಗ ಆದಿತ್ಯ ಈ ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾನೆ. ರಗಡ್‌ಚಿತ್ರದ ನಂತರ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಎಂದು ತಿಳಿಸಿದರು.
ಯುವ ಪ್ರತಿಭೆ ಆದಿತ್ಯ ಮಾತನಾಡಿ, ನಮ್ಮ ಮನೆ ಬಳಿ ಆ್ಯಕ್ಟಿಂಗ್ ಸ್ಕೂಲ್ ಇತ್ತು. ಅಲ್ಲಿ ಕಲಿಯಲು ಬರುತ್ತಿದ್ದವರನ್ನು ನೋಡಿ ನನಗೂ ನಟಿಸುವ ಆಸೆಯಾಯಿತು. ನಟನೆ ಕಲಿತು, ಕಿರುಚಿತ್ರ ಹಾಗೂ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ನನ್ನ ಆಸೆ ಪೂರೈಸಿದ ಅಪ್ಪನಿಗೆ ಧನ್ಯವಾದ ಎಂದು ತಿಳಿಸಿದರು.
ಇದನ್ನೂ ಓದಿ: ರೊಮ್ಯಾಂಟಿಕ್ ಆಲ್ಬಂ ಸಾಂಗ್ನಲ್ಲಿ ಸಂಜನಾ ದಾಸ್, ಗಾಯಕ ಸಂಜಿತ್ ಹೆಗ್ಡೆ ಮಿಂಚು - Nange Allava song
ಬಾಲನಟಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನನಗೆ ತಾವೆಲ್ಲರೂ ನೀಡಿರುವ ಪ್ರೋತ್ಸಾಹಕ್ಕೆ ಧನ್ಯವಾದ. ನಾಯಕಿಯಾಗಿ ಇದು ನನ್ನ ಮೊದಲ ಚಿತ್ರ. ಚಿತ್ರದಲ್ಲಿ ಬೋಲ್ಡ್ ಹುಡುಗಿಯ ಪಾತ್ರ ನನ್ನದು ಎನ್ನುತ್ತಾರೆ ನಾಯಕಿ ಅಂಕಿತ ಜಯರಾಂ.
ಇದನ್ನೂ ಓದಿ: ಕಲ್ಕಿ 2898AD ಚಿತ್ರದ ಲಿರಿಕಲ್ ಥೀಮ್ ವಿಡಿಯೋ ಬಿಡುಗಡೆ! - Lyrical Video Of Kalki 2898 AD
ಯುವ ಪ್ರತಿಭೆಗಳ ಜೊತೆ ನೇಹಾ ಪಾಟೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆ ಬಲ ರಾಜವಾಡಿ, ನೀನಾಸಂ ಅಶ್ವಥ್, ಮಠ ಕೊಪ್ಪಳ, ಶಿವಮಂಜು, ಗೌತಮ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಇನ್ನು ಕಾಗದ ಟ್ರೇಲರ್ ಅನ್ನು ನಟ ಧ್ರುವ ಸರ್ಜಾ, ರಮೇಶ್ ಅರವಿಂದ್, ಅನು ಪ್ರಭಾಕರ್ ಹಾಗೂ ನಿರ್ದೇಶಕ ಎ.ಪಿ. ಅರ್ಜುನ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರಕ್ಕೆ ಪ್ರದೀಪ್ ವರ್ಮಾ ಸಂಗೀತ ನೀಡಿದ್ದು, ವೀನಸ್ ನಾಗರಾಜ ಮೂರ್ತಿ ಕ್ಯಾಮರಾ ಹಿಡಿದಿದ್ದಾರೆ. ಮಣಿ ವರ್ಣಾಲಂಕಾ ಮಾಡಿದ್ದಾರೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಜಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಬಿಡುಗಡೆ ಆಗಿದೆ. 2005ರಲ್ಲಿ ನಡೆದ ಪ್ರೇಮಕಥೆಯನ್ನು ಒಳಗೊಂಡಿರುವ ಈ ಚಿತ್ರ ಜುಲೈ 5ರಂದು ಬಿಡುಗಡೆಯಾಗಲಿದೆ.