ರಾಂಚಿ (ಜಾರ್ಖಂಡ್): ಚೆಕ್ ಬೌನ್ಸ್ ಮತ್ತು ವಂಚನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಗೆ 2.75 ಕೋಟಿ ರೂ.ಗಳನ್ನು ಪಾವತಿಸುವುದಾಗಿ ಬಾಲಿವುಡ್ ನಟಿ ಅಮೀಶಾ ಪಟೇಲ್ ಒಪ್ಪಿಕೊಂಡಿದ್ದಾರೆ. ರಾಂಚಿ ನ್ಯಾಯಾಲಯವು ನಿರ್ದೇಶನದ ಮೇರೆಗೆ ಈ ಹಣ ಕಟ್ಟಲು ನಟಿ ಸಮ್ಮತಿಸಿದ್ದಾರೆ.
ಚಲನಚಿತ್ರ ನಿರ್ಮಾಣದ ಹೆಸರಿನಲ್ಲಿ ರಾಂಚಿಯ ಚಲನಚಿತ್ರ ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ಸುಮಾರು 3 ಕೋಟಿ ರೂಪಾಯಿ ಸಾಲವನ್ನು ನಟಿ ಅಮೀಶಾ ಪಟೇಲ್ ಪಡೆದಿದ್ದರು. ಆದರೆ, ಬಹಳ ದಿನಗಳಾದರೂ ಈ ಹಣವನ್ನು ಅಮೀಶಾ ಪಟೇಲ್ ಮರಳಿ ನೀಡಿರಲಿಲ್ಲ. ಆದ್ದರಿಂದ ಅಜಯ್‌ಕುಮಾರ್ ಕಾನೂನಿನ ಮೊರೆ ಹೋಗಿದ್ದರು.
ಈ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಧೀಶ ಡಿ.ಎನ್.ಶುಕ್ಲಾ ಅವರ ಮುಂದೆ ಹಾಜರಾದ ಅಮೀಶಾ ಪಟೇಲ್ ಪರ ವಕೀಲರು, ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಅವರಿಂದ ಸುಮಾರು 3 ಕೋಟಿ ರೂಪಾಯಿ ಸಾಲವನ್ನು ನಟಿ ಅಮೀಶಾ ಪಟೇಲ್ ಪಡೆದಿರುವುದು ನಿಜ. ಸಾಲವಾಗಿ ಹಣ ಪಡೆದು ಚಿತ್ರ ನಿರ್ಮಿಸಿದ್ದರೂ, ಅದು ನಿರೀಕ್ಷೆಗೆ ತಕ್ಕಂತೆ ಬಾಕ್ಸ್ ಆಫೀಸ್‌ನಲ್ಲಿ ಬಿಡುಗಡೆಯಾಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಚಿತ್ರದಿಂದ ಯಾವುದೇ ಆದಾಯ ಬರಲಿಲ್ಲ. ಹೀಗಾಗಿ ಹಣ ನೀಡಲು ನಿರಂತರ ವಿಳಂಬವಾಗುತ್ತಿದೆ ಎಂದು ಒಪ್ಪಿಕೊಂಡರು.
ಅಲ್ಲದೇ, 2.75 ಕೋಟಿ ರೂ. ಹಣವನ್ನು ಅಮೀಶಾ ಪಟೇಲ್ ತನ್ನ ವಕೀಲರ ಮೂಲಕ ಹಣವನ್ನು ಹಿಂದಿರುಗಿಸಲು ಸಮ್ಮತಿಸಿದರು. ಆದರೆ, ಇದರ ಮೊದಲ ಕಂತಾಗಿ 20 ಲಕ್ಷ ರೂ. ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ, ನಿರ್ಮಾಪಕ ಅಜಯ್ ಕುಮಾರ್ ಸಿಂಗ್ ಪರ ಆಕ್ಷೇಪ ವ್ಯಕ್ತಪಡಿಸಿದರು. ಮೊದಲ ಕಂತಿನ ಹಣವನ್ನು 20 ಲಕ್ಷದಿಂದ ಕನಿಷ್ಠ 35 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು. ಆಗ ನಟಿ ಪರ ವಕೀಲರು ಏನನ್ನೂ ಸ್ಪಷ್ಟಪಡಿಸಲಿಲ್ಲ. ಕೋರ್ಟ್ ಸಹ ವಿಚಾರಣೆಯನ್ನು ಮುಂದೂಡಿದೆ.
ಇದೇ ವೇಳೆ, ನ್ಯಾಯಾಲಯದ ಮೂಲಗಳ ಮಾಹಿತಿ ಪ್ರಕಾರ, ಇನ್ನೆರಡು ಮೂರು ದಿನಗಳಲ್ಲಿ ಅಮೀಶಾ ಪಟೇಲ್ ಸಾಲದ ಮೊದಲ ಕಂತನ್ನು ಜಮಾ ಮಾಡಬೇಕಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ನಟಿ ಖುದ್ದು ವಿಚಾರಣೆಗೆ ಹಾಜರಾಗಬೇಕೆಂದು ಕೋರ್ಟ್ ಸೂಚಿಸಿತ್ತು. ಆದರೆ, ವೈಯಕ್ತಿಕ ಕಾರ್ಯಗಳನ್ನು ಉಲ್ಲೇಖಿಸಿ, ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ.
ಇದನ್ನೂ ಓದಿ: ಚೆಕ್ಬೌನ್ಸ್ ಪ್ರಕರಣ: 'ರಂಗನಾಯಕ' ಬಿಡುಗಡೆಗೆ ತಡೆ ಕೋರಿ ಕೋರ್ಟ್ಗೆ ಅರ್ಜಿ