ನೆಲಮಂಗಲ(ಬೆಂಗಳೂರು): ಸಿನಿಮಾಗಳಲ್ಲಿ ಬಣ್ಣ ಹಚ್ಚಿ ಸೈ ಎನಿಸಿಕೊಂಡಿದ್ದ ನಟ ವಿನೋದ್ ರಾಜ್ ಅವರು ಸಮಾಜ ಸೇವೆಯಲ್ಲೂ ಸದಾ ಮುಂದು. ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುವ ಗುಣವಿರುವ ವಿನೋದ್ ರಾಜ್ ಅವರು ತಮ್ಮ ಸಮಾಜಮುಖಿ ಕೆಲಸಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ದೊಡ್ಡಬಳ್ಳಾಪುರ - ನೆಲಮಂಗಲ ರಸ್ತೆ ಗುಂಡಿಗಳಿಗೆ ಮುಕ್ತಿ ಕೊಡಿಸಿ, ಜನಮನ ಸೆಳೆದಿದ್ದಾರೆ.
ಈ ರಸ್ತೆಯಲ್ಲಿಯ ಗುಂಡಿಗಳು ವಾಹನ ಸವಾರರಿಗೆ ದೊಡ್ಡ ಸಮಸ್ಯೆಯಾಗಿತ್ತು. ಇದನ್ನರಿತ ಅವರು ತಮ್ಮ ಸ್ವಂತ ಹಣದಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿಸೋ ಮೂಲಕ ಸಂಭವನೀಯ ಅಪಘಾತಗಳನ್ನು ತಪ್ಪಿಸಿದ್ದಾರೆ.
ನೆಲಮಂಗಲದಿಂದ ದೊಡ್ಡಬಳ್ಳಾಪುರಕ್ಕೆ ಸಂಪರ್ಕಿಸುವ ರಸ್ತೆಯ ಕಾಮಾಗಾರಿ ನಡೆಯುತ್ತಿದೆ. ನಗರದ ಹೊರಭಾಗದಲ್ಲಿ ಕಾಮಾಗಾರಿ ನಡೆದಿಲ್ಲ. ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ಈ ರಸ್ತೆಯಲ್ಲಿ ಸಂಚರಿಸುವುದು ಸವಾಲೇ ಸರಿ. ಕೆಲಸಗಾರರನ್ನು ಕರೆಸಿ, ಗುಂಡಿಗಳನ್ನು ಮುಚ್ಚಲು ಬೇಕಾದ ಸಲಕರಣೆಗಳನ್ನ ತಂದು ಖುದ್ದು ತಾವೇ ಮುಂದೆ ನಿಂತು ವಿನೋದ್ ರಾಜ್ ಗುಂಡಿಗಳನ್ನು ಮುಚ್ಚಿಸಿದ್ದಾರೆ. ಈ ಕೆಲಸಕ್ಕೆ ಸ್ವಂತ ಹಣ ವ್ಯಯಿಸಿದ್ದಾರೆ. ನಟನ ಕೆಲಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಳೆದ ವರ್ಷ ನೆಲಮಂಗಲದ ಕರೆಕಲ್ ಕ್ರಾಸ್‌ನಿಂದ ಸೋಲದೇವನಹಳ್ಳಿವರೆಗಿನ ರಸ್ತೆಯಲ್ಲಿ ಇದ್ದಂತಹ ಗುಂಡಿಗಳನ್ನು ಮುಚ್ಚಿಸುವ ಕೆಲಸವನ್ನು ವಿನೋದ್ ರಾಜ್ ಮಾಡಿದ್ದರು. ಇದಿಷ್ಟೇ ಅಲ್ಲದೆ, ಕೋವಿಡ್ ಸಮಯದಲ್ಲೂ ಕೂಡ ವಿನೋದ್ ರಾಜ್ ಹಲವರಿಗೆ ಸಹಾಯ ಮಾಡಿದ್ದರು. ತಮ್ಮ ತೋಟದಲ್ಲಿ ಬೆಳೆದ ತರಕಾರಿಗಳನ್ನು ಜೂನಿಯರ್ ಕಲಾವಿದರಿಗೆ ಹಂಚಿದ್ದರು. ದಿನಸಿ ಹಂಚಿದ್ದರು. ತಮ್ಮ ಊರು ಸೋಲದೇವನಹಳ್ಳಿಯಲ್ಲಿ ಕೋವಿಡ್ 19 ವೈರಾಣು ಹರಡದಂತೆ ರಾಸಾಯನಿಕ ಸಿಂಪಡಣೆ ಮಾಡಿಸಿದ್ದರು. ಹೀಗೆ ಸದಾ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಇದನ್ನೂ ಓದಿ: 'ನಾಳೆ ಇದೆಯೆಂಬುದು ನಮಗೆ ಗೊತ್ತಿರಲ್ಲ': ಅಪಘಾತದ ಬೆನ್ನಲ್ಲೇ ರಶ್ಮಿಕಾ ಮಂದಣ್ಣ ಪೋಸ್ಟ್ - Rashmika Mandanna Emotional Post
ವಿನೋದ್ ಅವರು ನೆಲಮಂಗಲದ ಸೊಲದೇವನಹಳ್ಳಿಯ ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಯಂಗನಹಳ್ಳಿ ಗ್ರಾ.ಪಂ.ನ ಕರೆಕಲ್ ಗ್ರಾಮದ ಮೂಲಕ ಸಂಚರಿಸುತ್ತಾರೆ. ಆ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದವು. ವಾಹನ ಸವಾರರಿಗೆ ಸಂಚರಿಸುವುದು ಕಷ್ಟವಾಗಿತ್ತು. ಇದನ್ನರಿತ ನಟ ಸಾರ್ವಜನಿಕರ ಹಿತದೃಷ್ಟಿಯಿಂದ ಸ್ವಂತ ಹಣ ವ್ಯಯಿಸಿ ರಸ್ತೆ ಗುಂಡಿಗಳನ್ನು ಮುಚ್ಚಿಸಿದ್ದರು. ತಮ್ಮ ತೋಟದಲ್ಲಿ ಕೆಲಸ ಮಾಡುವವರ ಸಹಾಯ ಪಡೆದಿದ್ದರು. ನಟನ ಸೇವೆಗೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಈ ಬಾರಿ ಕೂಡಾ ರಸ್ತೆ ಗುಂಡಿಗಳನ್ನು ಮುಚ್ಚಿಸುವ ಮೂಲಕ ಗಮನ ಸೆಳೆದಿದ್ದಾರೆ. ಸ್ವಂತ ಹಣ ಖರ್ಚು ಮಾಡಿ ಮಾಡಿಸಿರುವ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.